Asianet Suvarna News Asianet Suvarna News

ಉಡುಪಿಯಲ್ಲೂ ಇದೆ ಅಪಾಯಕಾರಿ ತೂಗು ಸೇತುವೆ, ಇಂದು ಎಚ್ಚೆತ್ತುಕೊಳ್ಳದಿದ್ದರೆ ನಾಳೆ ಅಪಾಯ ಖಂಡಿತ

ಉಡುಪಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಅಪಾರ ಕೊಡುಗೆ ನೀಡಿರುವ ಕೆಮ್ಮಣ್ಣುವಿನ ತೂಗು ಸೇತುವೆ  ಅಪಾಯಕಾರಿ ಸ್ಥಿತಿಯಲ್ಲಿದೆ. ನಮ್ಮೂರಿನ ಸೇತುವೆಗಳು ಸೇಫ್ ಎಂದು ಉಡಾಫೆ ಮಾಡಿದರೆ ಇಲ್ಲೂ ಅಪಾಯ ತಪ್ಪಿದಲ್ಲ.

udupi Locals worried about Kemmannu hanging bridge gow
Author
First Published Nov 4, 2022, 4:34 PM IST

ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ನ.4): ಗುಜರಾತಿನ ಮಾರ್ಬಿಯಲ್ಲಿ ತೂಗು ಸೇತುವೆ ಕುಸಿದು ಬಿದ್ದು ಭೀಕರ ದುರಂತ ಸಂಭವಿಸಿದ ಬೆನ್ನಲ್ಲೇ , ನಮ್ಮ ನಾಡಿನ ತೂಗು ಸೇತುವೆಗಳ ಸ್ಥಿತಿಗತಿಯ ಬಗ್ಗೆ ಜನರಲ್ಲಿ ಆತಂಕ ಮತ್ತು ಕುತೂಹಲ ಮೂಡಿದೆ . ಉಡುಪಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಅಪಾರ ಕೊಡುಗೆ ನೀಡಿರುವ ಕೆಮ್ಮಣ್ಣುವಿನ ತೂಗು ಸೇತುವೆ  ಅಪಾಯಕಾರಿ ಸ್ಥಿತಿಯಲ್ಲಿದೆ. ನಮ್ಮೂರಿನ ಸೇತುವೆಗಳು ಸೇಫ್ ಎಂದು ಉಡಾಫೆ ಮಾಡಿದರೆ ಇಲ್ಲೂ ಅಪಾಯ ತಪ್ಪಿದಲ್ಲ. ಊರಿನವರ ಓಡಾಟಕ್ಕೆ ಅನುಕೂಲವಾಗಲು ಮಾಡಿದ ಸೇತುವೆ ಪ್ರವಾಸಿ ತಾಣವಾಗಿ ಬದಲಾಗಿದ್ದು, ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ. ಇಲ್ಲೂ ಅಷ್ಟೇ ಎಚ್ಚರ ತಪ್ಪಿದರೆ ಅವಘಡ ಗ್ಯಾರೆಂಟಿ! ಉಡುಪಿ ತಾಲೂಕಿನ ಮಲ್ಪೆ ಬಳಿಯ ಕೆಮ್ಮಣ್ಣು ತೂಗು ಸೇತುವೆಯನ್ನು ವೀಕ್ಷಿಸಲು ಪ್ರತಿನಿತ್ಯ ನೂರಾರು ಪ್ರವಾಸಿಗರು ಬರುತ್ತಾರೆ. ಹೊರಜಿಲ್ಲೆಯಿಂದ ವಿದ್ಯಾಭ್ಯಾಸಕ್ಕೆಂದು ಬರುವ ವಿದ್ಯಾರ್ಥಿಗಳು ತೂಗುಸೇತುವೆಯ ಜೊತೆಗೆ ಕಯಾಕಿಂಗ್ ಮತ್ತು ಬೋಟಿಂಗ್ ನ ಅನುಭವ ಪಡೆಯಲು ವಾರಾಂತ್ಯದಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಪ್ರವಾಸಿ ತಾಣವಾಗಿ ಮಾರ್ಪಾಡಾಗಿರುವ ಸೇತುವೆಯ ಬಗ್ಗೆ ಅಪಾಯದ ಮುನ್ಸೂಚನೆ ನೀಡಿದ್ದರೂ, ಜಿಲ್ಲಾಡಳಿತ ಮಾತ್ರ ಮೌನವಹಿಸಿದೆ. 

ಈ ಸೇತುವೆಯಲ್ಲಿ ಹೆಚ್ಚೆಂದರೆ ಏಕಕಾಲದಲ್ಲಿ 15 -20 ಜನ ನಿಲ್ಲಬಹುದು. ಆದರೆ ಸೇತುವೆಯ ಉಸ್ತುವಾರಿ ನೋಡಿಕೊಳ್ಳಲು ಯಾರು ಇಲ್ಲದ ಕಾರಣ ಏಕಕಾಲದಲ್ಲಿ ನೂರಾರು ಮಂದಿ ಸೇತುವೆಯ ಮೇಲೆ ಹತ್ತಿ ಹುಚ್ಚಾಟ ನಡೆಸುತ್ತಾರೆ. ಇನ್ನು ಅತಿಯಾದ ಬಾರ ಹೊತ್ತ ದ್ವಿಚಕ್ರ ವಾಹನಗಳನ್ನು ಸೇತುವೆಯ ಮೇಲೆ ಸಾಗಿಸುವುದು ಇದೆ.

100 ಮೀ. ಗೂ ಅಧಿಕ ಉದ್ದವಿರುವ ಸೇತುವೆಯೂ ಪಡುಕುದ್ರು ವಿನಿಂದ ತಿಮ್ಮಣ್ಣ ಕುದ್ರವಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿದೆ. ಕಾಲಾಂತರದಲ್ಲಿ ಪ್ರವಾಸಿ ತಾಣವಾಗಿ ಬದಲಾದ ಸೇತುವೆಯ ಕೆಲವು ಭಾಗಗಳಲ್ಲಿ ಸಿಮೆಂಟ್ ನ ಹಲಗೆಗಳು ಕಿತ್ತುಹೋಗಿದೆ. ಜೊತೆಗೆ ಸೇತುವೆಯ ಎರಡು ಬದಿಯಲ್ಲಿ ಅಳವಡಿಸಿರುವ ಕಬ್ಬಿಣದ ಸರಳುಗಳು ಅಲ್ಲಲ್ಲಿ ಮುರಿದು ಹೋಗಿದೆ. 

ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್ ಇಲ್ಲ: ಮಲ್ಪೆ ಮತ್ತು ಹೂಡೆ ಬೀಚ್ ಗೆ ಸನಿಹದಲ್ಲಿರುವ ಈ ಸೇತುವೆಗೆ ಶನಿವಾರ ಮತ್ತು ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇನ್ನು ಹಬ್ಬ ಹರಿದಿನಗಳು ಬಂದರೆ ಕೇಳೋದೇ ಬೇಡ. ಈ ವೇಳೆ ಸೇತುವೆಯ ಮೇಲೆ ಪೋಟೋಶೂಟ್ ಜೊತೆಗೆ ಮೋಜು ಮಸ್ತಿ ನಡೆಸುವ ಪ್ರವಾಸಿಗರು ತಮ್ಮ ಸುರಕ್ಷತೆಯ ಬಗ್ಗೆ ಗಮನ ಹರಿಸುವುದಿಲ್ಲ.

ಸುವರ್ಣ ನದಿ ಆವರಿಸಿಕೊಂಡಿರುವ ತಿಮ್ಮಣ್ಣ ಕುದ್ರುವಿಗೆ ಸಂಪರ್ಕ ಕಲ್ಪಿಸುವ ತೂಗು ಸೇತುವೆಗೆ ಕಿರಿದಾದ ರಸ್ತೆಯಲ್ಲಿ ತೆರಳಿದ ನಂತರ, ತೂಗು ಸೇತುವೆ ಕಂಡೊಡನೇ ಅದರಲ್ಲಿ ಓಡಾಟ ನಡೆಸಿ ಪ್ರಕೃತಿ ಸೌಂದರ್ಯ ವೀಕ್ಷಿಸಲು ಪ್ರವಾಸಿಗರು ಮುಗಿಬೀಳುತ್ತಾರೆ. ಏಕಕಾಲದಲ್ಲಿ ಹತ್ತಾರು ಪ್ರವಾಸಿಗರು ಅದರ ಮೇಲೆ ನಿಲ್ಲುವುದರಿಂದ ಸೇತುವೆ ಒಂದು ಬದಿಗೆ ವಾಲುತ್ತದೆ. 

ಪಡುಕುದ್ರು ಮತ್ತು ತಿಮ್ಮಣ್ಣ ಕುದ್ರುವನ್ನು ಸಂಪರ್ಕಿಸುವ ಸೇತುವೆ ಇದಾಗಿದ್ದರೂ, ಕೆಮ್ಮಣ್ಣು ತೂಗು ಸೇತುವೆ ಎಂದು ಪ್ರಸಿದ್ದಿ ಪಡೆದಿದೆ. ಕಯಾಕಿಂಗ್, ಬೋಟಿಂಗ್ ನ ಜೊತೆಗೆ ತೂಗು ಸೇತುವೆ ಅನುಭವ ಪಡೆಯಲು ಪ್ರವಾಸಿಗರು, ವಿದ್ಯಾರ್ಥಿಗಳು ಬರುತ್ತಾರೆ. ಆದರೆ ಸುರಕ್ಷತೆಯ ಬಗ್ಗೆ ಸ್ಥಳೀಯಾಡಳಿತವಾಗಲಿ, ಜಿಲ್ಲಾಡಳಿತವಾಗಲಿ ಗಮನ ಹರಿಸಿಲ್ಲ. ಹತ್ತಾರು ಜನರು ಸೇತುವೆ ಮೇಲೆ ನಿಂತಾಗ ಒಂದು ಬದಿಗೆ ವಾಲುತ್ತದೆ. ಸುರಕ್ಷತೆಯೊಂದಿಗೆ ವ್ಯವಸ್ಥಿತವಾಗಿ ಪ್ರವಾಸೋದ್ಯಮವನ್ನು ಬೆಳೆಸಬೇಕು. ಭದ್ರತೆ, ಮೇಲ್ವಿಚಾರಣೆಗೆಂದು ಸಿಬ್ಬಂದಿಗಳನ್ನು ನೇಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತೂಗು ಸೇತುವೆ ಉಪಯೋಗಕ್ಕೆ ಎಷ್ಟು ಯೋಗ್ಯ ಎಂದು ತಾಂತ್ರಿಕವಾಗಿ ಪರಿಶೀಲಿಸಲು ಸೂಚಿಸುತ್ತೇನೆ‌. ಪ್ರವಾಸೋದ್ಯಮದ ಜೊತೆಗೆ ಪ್ರವಾಸಿಗರ ಸುರಕ್ಷತೆಗೆ ಸೂಕ್ತ ಕ್ರಮ ವಹಿಸಲು ಸ್ಥಳೀಯಾಡಳಿತದ ಜೊತೆ ಚರ್ಚೆ ನಡೆಸುತ್ತೇನೆ ಎಂದು ಜಿಲ್ಲಾಧಿಕಾರಿ, ಕೂರ್ಮಾ ರಾವ್ ತಿಳಿಸಿದ್ದಾರೆ.

ಇನ್ನು ಸೇತುವೆಗೆ ಎಂಟ್ರಿ ಕೊಡುವ ಜಾಗದಲ್ಲಿ ವಿದ್ಯುತ್ ವಯರ್ ಗಳು ನೇತಾಡುತ್ತಿದ್ದು , ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಆರಂಭದಲ್ಲಿ ಸ್ಥಳೀಯರ ಓಡಾಟಕ್ಕೆ ಇದೊಂದೇ ಸಂಪರ್ಕ ಸೇತುವೆಯಾಗಿತ್ತು. ಆದರೆ ಈಗ ಸುಸಜ್ಜಿತವಾದ ಬೃಹತ್ ಸೇತುವೆಯನ್ನು ಪಕ್ಕದಲ್ಲೇ ನಿರ್ಮಿಸಲಾಗಿದೆ. ಕೇವಲ ಪ್ರವಾಸೋದ್ಯಮದ ದೃಷ್ಟಿಯಿಂದ ಈ ತೂಗು ಸೇತುವೆಯನ್ನು ಉಳಿಸಿಕೊಳ್ಳಬೇಕಾಗಿದ್ದು ಆದಷ್ಟು ಬೇಗ ಇದರ ದುರಸ್ತಿ ಅಥವಾ ಮರು ನಿರ್ಮಾಣ ಕಾರ್ಯ ಆಗಬೇಕಿದೆ.

ಕಾಫಿನಾಡಲ್ಲಿ ಅಪಾಯಕ್ಕಾಗಿ ಕಾದು ಕೂತಿದೆ ತೂಗು ಸೇತುವೆ, ನಿರ್ವಹಣೆ ಮರೆತ ಸರ್ಕಾರ

ಎನ್.ಸಿ.ಸಿಯವರು ನಿರ್ಮಿಸಿದ ಸೇತುವೆ: ಈ ಭಾಗದ ಹಿರಿಯರು ಹೇಳುವಂತೆ ಸುಮಾರು 32 ವರ್ಷಗಳ ಹಿಂದೆ ಬೆಂಗಳೂರಿನ ಎನ್.ಸಿ.ಸಿ ಇಂಜಿನಿಯರಿಂಗ್ ಕಾಂಯ್ ನ ಕೆಡೆಟ್ ಗಳ ತಂಡ ಈ ಸೇತುವೆಯನ್ನು ನಿರ್ಮಿಸಿದ್ದರು. ಆ ಸಂದರ್ಭದಲ್ಲಿ ಮೃತಪಟ್ಟ ಓರ್ವ ವಿದ್ಯಾರ್ಥಿಯ ಹೆಸರನ್ನು ಸೇತುವೆಗೆ ಇಡಲಾಗಿದೆ. ಈ ಸೆತುವೆಯ ರೋಪ್  ಗೆ ನೂರು ವರ್ಷಗಳ ಗ್ಯಾರೆಂಟಿ ಇದ್ದರೂ, ಸಮುದ್ರ ತೀರದ ವಾತಾವರಣಕ್ಕೆ ತುಕ್ಕು ಹಿಡಿಯುವ ಅಪಾಯ ಹೆಚ್ಚು.

Uttara kannada; ಅಪಾಯದಲ್ಲಿದೆ ಹೊನ್ನಾವರದ ತೂಗು ಸೇತುವೆ

ಗುಜರಾತಿನಲ್ಲಿ ಅವಘಡ ಸಂಭವಿಸುತ್ತಿದ್ದಂತೆ ಸ್ಥಳೀಯ ಕೆಮ್ಮಣ್ಣು ಪಂಚಾಯತ್ ನ ಸದಸ್ಯರು ತುರ್ತು ಸಭೆ ನಡೆಸಿ ತೂಗು ಸೇತುವೆಯ ದುರಸ್ತಿ ಕಾರ್ಯದ ಬಗ್ಗೆ ಸರಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.

Follow Us:
Download App:
  • android
  • ios