ಕುಂದಾಪುರ(ಮೇ 23): ಕೋವಿಡ್‌ ನಿಯಂತ್ರಣಕ್ಕಾಗಿ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಈ ನಡುವೆ ಕೆಲ ಕಿಡಿಗೇಡಿಗಳು ಸುಮ್ಮನೆ ಕರೆ ಮಾಡಿ, ಅದನ್ನು ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದಾರೆ. ಇದು ಈಗಲೇ ಕೊನೆಗೊಳ್ಳಬೇಕು. ಇನು ಮುಂದೆ ಯಾರಾದರೂ ರೆಕಾರ್ಡ್‌ ಮಾಡಿ ಅದನ್ನು ವೈರಲ್‌ ಮಾಡಿದರೆ ಅಂತವರನ್ನು ಮುಲಾಜಿಲ್ಲದೆ ಜೈಲಿಗಟ್ಟುತ್ತೇನೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಕೋವಿಡ್‌-19 ನಿಯಂತ್ರಣದ ಕುರಿತು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ಕ್ವಾರಂಟೈನ್‌ ಅವ್ಯವಸ್ಥೆಯ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಕರೆ ಮಾಡಿ ಆಡಿಯೋ ವೈರಲ್‌ ಮಾಡುವವರ ವಿರುದ್ಧ ಗರಂ ಆಗಿ ಪ್ರತಿಕ್ರಿಯಿಸಿದರು.

ದೇವೇಗೌಡ್ರಿಂದ ಒಂದೇ ಏಟಿಗೆ ಎರಡು ಹಕ್ಕಿ? ರಾಜ್ಯಸಭೆ ಜೊತೆಗೆ ಅಸೆಂಬ್ಲಿಗೆ ಮಾಸ್ಟರ್ ಪ್ಲಾನ್‌!

ಬಾಂಬೆಯಲ್ಲಿ ಕುಳಿತು ಡಾನ್‌ ಥರ ಮಾತನಾಡುವವರನ್ನು ನಾನು ನೋಡಿದ್ದೇನೆ. ಫೋನ್‌ ಮಾಡಿ ಹೆದರಿಸುವ ಆಟ ಉಡುಪಿ ಜಿಲ್ಲಾಡಳಿತದ ಎದುರು ಇದು ನಡೆಯುವುದಿಲ್ಲ. ಅಂತಹ ಕಿಡಿಗೇಡಿಗಳಿದ್ದರೆ ಅವರನ್ನು ಬಾಂಬೆಯಿಂದ ಕರೆ ತರುವುದು ನಮಗೆ ಚೆನ್ನಾಗಿ ಗೊತ್ತಿದೆ. ಇನ್ನುಮುಂದೆ ಅಂಥವರನ್ನು ಖಂಡಿತವಾಗಿಯೂ ಬಿಡುವುದಿಲ್ಲ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

'ಕೊರೋನಾಗೆ ಔಷಧಿ ಕಂಡು ಹಿಡಿಯಲು ಕನಿಷ್ಠ 10 ವರ್ಷಗಳಾದ್ರೂ ಬೇಕು'..! ಕನ್ನಡಿಗ ಕೆನಡಾ ವಿಜ್ಞಾನಿ ಹೇಳಿದ್ದಿಷ್ಟು

ಮೂರು ತಿಂಗಳಿಂದ ರಾತ್ರಿ ಹಗಲು ಕೆಲಸ ಮಾಡುತ್ತಿದ್ದೇವೆ. ಊಟ, ತಿಂಡಿ ಬಿಟ್ಟು ಅವರ ಕಾಳಜಿಗಾಗಿಯೇ ದುಡಿಯುತ್ತಿದ್ದೇವೆ. ಕರೆ ಮಾಡಿ ಆಡಿಯೋ ವೈರಲ್‌ ಮಾಡುವ ಕಿಡಿಗೇಡಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು. ಡಿಸಿ, ಎಸಿ, ಎಸ್ಪಿ, ಎಂಪಿ, ಎಂಎಲ್‌ಎಗಳಿಗೆ ಬೈಯ್ಯುವ ಆಟ ನಡೆಯಲ್ಲ. ಆತ ಎಷ್ಟೇ ದೊಡ್ಡ ಮನುಷ್ಯ ಆದರೂ ಆತನನ್ನು ಜೈಲಲ್ಲಿಡುತ್ತೇವೆ. ಮೊಸರಲ್ಲಿ ಕಲ್ಲು ಹುಡುಕುವವರನ್ನು ಸುಮ್ಮನೆ ಬಿಡಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಗುಡುಗಿದ್ದಾರೆ.

ಟಿಫನ್‌ ಬಾಕ್ಸ್‌ನಲ್ಲಿ ಕೊರೋನಾ ಮನೆಗೆ ತರಬೇಡಿ

ಪ್ರತಿಯೊಬ್ಬರನ್ನು ಬದುಕಿಸುವುದು ನಮ್ಮ ಆಶಯ. ಕೋವಿಡ್‌ನಿಂದ ಯಾರೂ ಸಾಯಬಾರದು. ಕ್ವಾರಂಟೈನ್‌ನಲ್ಲೇ ಕೊರೋನಾ ಮುಗಿಯಬೇಕು. ಅದು ಮನೆಗೆ ತಲುಪಬಾರದು. ಈಗಾಗಲೇ ಜನರಿಗೆ ಹಬ್ಬದಂತೆ ಕಾಳಜಿ ವಹಿಸಿದ್ದೇವೆ. ಕ್ವಾರಂಟೈನ್‌ನಲ್ಲಿರುವವರಿಗೆ ಅವರ ಮನೆಯವರು ಊಟ ಇನ್ನಿತರ ತಿನಿಸುಗಳನ್ನು ತಂದು ಕೊಡುತ್ತಿದ್ದು, ಟಿಫನ್‌ ಬಾಕ್ಸ್‌ ಕೊಟ್ಟು ಅದನ್ನು ವಾಪಾಸ್‌ ಪಡೆಯುತ್ತಿದ್ದಾರೆ. ಇದಕ್ಕೆ ಸಂಪೂರ್ಣ ಬ್ರೇಕ್‌ ಹಾಕಲು ಆದೇಶ ನೀಡಿದ್ದೇನೆ. ಬಟ್ಟೆ, ಊಟದ ಪಾತ್ರೆ, ಟಿಫನ್‌ ಬಾಕ್ಸ್‌ ಜೊತೆಗೆ ಕೊರೋನಾ ಮನೆ ಮುಟ್ಟುತ್ತದೆ. ಇಲ್ಲಿರುವ 13 ಲಕ್ಷ ಜನರ ರಕ್ಷಣೆ ನಮಗೆ ಮುಖ್ಯ. ಹೊರರಾಜ್ಯದಿಂದ ಬಂದವರ ರಕ್ಷಣೆ ಜೊತೆಗೆ ಇಲ್ಲಿಯವರ ರಕ್ಷಣೆಯನ್ನು ನಾವು ಮಾಡಬೇಕು. ಇಲ್ಲಿಯ ಜನರಿಗೂ ಹಬ್ಬಬಾರದು. ಆ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.