Asianet Suvarna News Asianet Suvarna News

ಗಣೇಶ ಚತುರ್ಥಿ: ಅಧಿಕಾರಿಗಳಿಗೆ ಖಡಕ್‌ ಸಂದೇಶ ಕೊಟ್ಟ ಉಡುಪಿ ಡಿಸಿ ಕೂರ್ಮಾರಾವ್

ಶಾಂತಿಯುತ ಗಣೇಶ ಚತುರ್ಥಿ ಆಚರಣೆಗಾಗಿ, ಗಣೇಶ ಮೂರ್ತಿಯ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗೆ ಪೊಲೀಸ್ ಇಲಾಖೆ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. 

Udupi DC Kurma Rao Instruct to Offiials For Ganeshotsava grg
Author
First Published Aug 30, 2022, 3:08 PM IST

ಉಡುಪಿ(ಆ.30):  ಜಿಲ್ಲೆಯಲ್ಲಿ ಆ.31 ರಿಂದ ಆರಂಭವಾಗುವ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ, ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ವಿಸರ್ಜನೆ ಕಾರ್ಯಕ್ರಮಗಳಿಗೆ ಅಗತ್ಯ ಅನುಮತಿಗಳನ್ನು ನೀಡುವಾಗ ಕಂದಾಯ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಗಳ ನಡುವೆ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೇ, ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಇಂದು(ಮಂಗಳವಾರ) ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಗೌರಿ, ಗಣೇಶ ಚತುರ್ಥಿ ಸಂದರ್ಭದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಗಣೇಶ ಪ್ರತಿಷ್ಠಾಪನೆ ಸಂದರ್ಭದಲ್ಲಿ ಬ್ಯಾನರ್ ಮತ್ತು ಫ್ಲೆಕ್ಸ್‌ಗಳನ್ನು ಅಳವಡಿಸುವ ಮುನ್ನ ಸಂಬಂಧಪಟ್ಟ ಆಯೋಜಕರಿಗೆ ಈ ಬಗ್ಗೆ ಅನುಮತಿ ಪಡೆಯುವಂತೆ ತಿಳಿಸಿ. ಅವುಗಳಲ್ಲಿ ಯಾವುದೇ ಆಕ್ಷೇಪಾರ್ಹ ವಾಕ್ಯಗಳಿಲ್ಲದಿರುವ ಬಗ್ಗೆ ಪರಿಶೀಲನೆ ನಡೆಸಿ. ಬ್ಯಾನರ್, ಫ್ಲೆಕ್ಸ್‌ಗಳಲ್ಲಿ ಲೈಸೆನ್ಸ್ ನೀಡಿದ ಸಂಖ್ಯೆ ಮತ್ತು ಅಂತಿಮ ದಿನಾಂಕವನ್ನು ಮುದ್ರಿಸುವಂತೆ ಸೂಚಿಸಿ, ಅನುಮತಿ ನೀಡಿ. ಏಕಗವಾಕ್ಷಿ ಪದ್ಧತಿ ಮೂಲಕ ಆದಷ್ಟು ಶೀಘ್ರದಲ್ಲಿ ಎಲ್ಲಾ ಅನುಮತಿಗಳನ್ನು ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಕೊಲ್ಲೂರು ಮೂಕಾಂಬಿಕೆಗೆ ನೂತನ ಬ್ರಹ್ಮರಥ ಸಿದ್ದ, 4 ಶತಮಾನಗಳ ಬಳಿಕ ಹೊಸ 'ರಥೋ'ತ್ಸವ

ಗಣೇಶ ಮೂರ್ತಿಯ ವಿಸರ್ಜನೆ ಸಂದರ್ಭದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಗೆ ತಿಳಿಸಿದ ಜಿಲ್ಲಾಧಿಕಾರಿಗಳು, ವಿಸರ್ಜನಾ ಸ್ಥಳದಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಸೂಕ್ತ ಬೆಳಕಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳೀಯ ಮುಳುಗು ತಜ್ಞರನ್ನು ಆ ಪ್ರದೇಶದಲ್ಲಿ ನಿಯೋಜಿಸುವಂತೆ ತಿಳಿಸಿದರು.

ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು, ತಾಲೂಕು ಕೇಂದ್ರದಲ್ಲಿ ತಹಶೀಲ್ದಾರ್‌ಗಳು ಮತ್ತು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಪಿಡಿಓ ಗಳು ಅಗತ್ಯ ಅನುಮತಿಗಳನ್ನು ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿ, ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

ಇದೇ ರಸ್ತೆಯಲ್ಲಿ ಮನೆಗೆ ಹೋಗ್ತೀರಲ್ಲ ಸ್ವಲ್ಪವೂ ಬೇಜಾರಾಗಲ್ವಾ? MLA ರಘುಪತಿ ಭಟ್‌ಗೆ ಯುವತಿ ಕ್ಲಾಸ್

ಶಾಂತಿಯುತ ಗಣೇಶಚತುರ್ಥಿ ಆಚರಣೆಗಾಗಿ, ಗಣೇಶ ಮೂರ್ತಿಯ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗೆ ಪೊಲೀಸ್ ಇಲಾಖೆ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಂದ್ರ, ಧ್ವನಿವರ್ಧಕ ಬಳಕೆ ಕುರಿತಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಪಾಲಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ತಹಶೀಲ್ದಾರ್‌ಗಳು, ತಾಪಂ ಕಾರ್ಯನಿರ್ವಹಣಾ ಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
 

Follow Us:
Download App:
  • android
  • ios