Asianet Suvarna News Asianet Suvarna News

ಉಡುಪಿ: ತನ್ನದಲ್ಲದ ತಪ್ಪಿಗೆ ಶಿಕ್ಷೆಗೊಳಗಾದ ಕಾರ್ಮಿಕಳಿಗೆ ನ್ಯಾಯಾಲಯದ ರಕ್ಷಣೆ

ತನ್ನದಲ್ಲದ ತಪ್ಪಿಗಾಗಿ ಪಿಂಚಣಿ ಕಡಿತದ ಶಿಕ್ಷೆಗೊಳಗಾದ ಸಿಬ್ಬಂದಿಯೋರ್ವರಿಗೆ ಉಡುಪಿ ಜಿಲ್ಲಾ ಬಳಕೆದಾರರ ನ್ಯಾಯಾಲಯವು ಪೂರ್ಣ ಪ್ರಮಾಣದ ರಕ್ಷಣೆ ನೀಡಿ ತೀರ್ಪು ಪ್ರಕಟಿಸಿದೆ.   
 

udupi court help labourer who convicted of crime not his fault gow
Author
Bengaluru, First Published Aug 23, 2022, 6:30 PM IST

ಉಡುಪಿ (ಆ.23): ತನ್ನದಲ್ಲದ ತಪ್ಪಿಗಾಗಿ ಪಿಂಚಣಿ ಕಡಿತದ ಶಿಕ್ಷೆಗೊಳಗಾದ ಸಿಬ್ಬಂದಿಯೋರ್ವರಿಗೆ ಉಡುಪಿ ಜಿಲ್ಲಾ ಬಳಕೆದಾರರ ನ್ಯಾಯಾಲಯವು ಪೂರ್ಣ ಪ್ರಮಾಣದ ರಕ್ಷಣೆ ನೀಡಿ ತೀರ್ಪು ಪ್ರಕಟಿಸಿದೆ. ಪ್ರಕರಣದ ಕುರಿತು ಮಾಹಿತಿ ನೀಡಿದ ಮಾನವ ಹಕ್ಕುಗಳ ಪ್ರತಿಷ್ಠಾನದ ಅದ್ಯಕ್ಷರಾದ ಡಾ. ರವೀಂದ್ರನಾಥ್ ಶಾನೋಭಾಗ್  ಮಾಹಿತಿ‌ ನೀಡಿದ್ದಾರೆ. ಉಡುಪಿ ಜಿಲ್ಲೆಯ  ಹೆಜಮಾಡಿಯ ಗೀತಾ ಕಾಂಚನ್ ಎಂಬವರು ಹೆಜಮಾಡಿಯ ಖಾಸಗಿ ಬ್ಯಾಂಕ್ ಒಂದರಲ್ಲಿ ಸುಮಾರು 17 ವರ್ಷಗಳ ಕಾಲ ಸೇವೆ ಸಲ್ಲಿಸಿ 2014 ರಲ್ಲಿ ನಿವೃತ್ತಿ ಹೊಂದಿದರು. ಆಕೆಯ ಸೇವಾವಧಿಯುದ್ದಕ್ಕೂ ಬ್ಯಾಂಕಿನವರು ಪ್ರಾವಿಡೆಂಟ್ ಫಂಡ್  ದೇಣಿಗೆಯನ್ನು ತೆಗೆಯುತ್ತಿದ್ದರು. ನಿವೃತ್ತಿಯ ಮರು ತಿಂಗಳಿನಿಂದ ಸಿಗುತ್ತಿದ್ದ 1756/-ರೂಪಾಯಿಗಳ  ಪೆನ್ಶನ್ ಮೊತ್ತದಲ್ಲಿ ಜೀವನ ಸಾಗಿಸುವುದು ಅಸಾಧ್ಯವಾದರೂ, ಆಕೆಯ ಔಷಧಿ ಹಾಗೂ ಇತರ ಆವಶ್ಯಕತೆಗಳಿಗೆ ಸಾಕಾಗುತ್ತಿತ್ತು. ಸುಮಾರು 6 ವರ್ಷಗಳ ಅನಂತರ 22.09.2020ರಂದು ಉಡುಪಿಯಲ್ಲಿರುವ ಪ್ರಾವಿಡೆಂಟ್ ಫಂಡ್ ರೀಜನಲ್ ಕಛೇರಿಯಿಂದ ಗೀತಾ ಕಾಂಚನ್ ಅವರಿಗೆ  ಬಂದ ಪತ್ರದಲ್ಲಿ 2020ರ ಮೇ ತಿಂಗಳಿನಿಂದ ನಿಮ್ಮ ಮಾಸಿಕ ಪಿಂಚಣಿಯಲ್ಲಿ 500 ರೂಪಾಯಿಗಳಷ್ಟು ಕಡಿತಗೊಳಿಸಲಾಗಿದೆ ಎಂಬ ಸೂಚನೆ ಇತ್ತು.

ಈ ಪಿಂಚಣಿ ಕಡಿತದ ಕಾರಣ ಕೇಳಲು ಪಿ.ಎಫ್ ಕಚೇರಿಗೆ ತೆರಳಿದ ಗೀತಾ ಕಾಂಚನ್‌ಗೆ ಇನ್ನೊಂದು ಆಘಾತ ಕಾದಿತ್ತು. “ಕಳೆದ ಆರು ವರ್ಷಗಳಿಂದ ನಿಮಗೆ ಪ್ರತಿ ತಿಂಗಳೂ 500 ಗಳಷ್ಟು ಅಧಿಕ ಪಿಂಚಣಿ ಹಣವನ್ನು ಪಾವತಿಸಿರುವುದರಿಂದ ಈಗಾಗಲೇ ಪಾವತಿಸಿರುವ ಅಧಿಕ ಹಣ 50,147 ರೂಪಾಯಿಗಳನ್ನು ಏಕಗಂಟಿನಲ್ಲಿ ಡಿಮಾಂಡ್ ಡ್ರಾಫ್ಟ್ ಮೂಲಕ ಹಿಂದಿರುಗಿಸಿರಿ”. ಎಂಬ ಸೂಚನೆ  ನೀಡಿದರು. 

ಇದರ ಕುರಿತಾಗಿ ವಿಚಾರಿಸಲು ಉಡುಪಿಯ ಪೆನ್ಶನ್ ಕಚೇರಿಯನ್ನು ಸಂಪರ್ಕಿಸಿದಾಗ ಜಂಟಿ ಡಿಕ್ಲರೇಶನ್ ಎಂಬ ದಾಖಲೆ ನಮ್ಮ ಕಡತದಲ್ಲಿಲ್ಲ. ಆಡಿಟ್ ಪಾರ್ಟಿಯವರು ಬಂದು ಅಬ್ಜೆಕ್ಷನ್ ಹಾಕಿದ್ದಾರೆ” ಎಂದು ಆ ದಾಖಲೆ ಪ್ರತಿಯೊಂದನ್ನು  ನೀಡಲು  ಆಗ್ರಹಿಸಿದರು. 2021 ರ ಜನವರಿ ತಿಂಗಳಲ್ಲಿ ಅದೇ ಕಚೇರಿಯಿಂದ ಬಂದ ಪತ್ರದಲ್ಲಿ “ನಿಮ್ಮಿಂದ ಬರಬೇಕಾಗಿರುವ ಬಾಕಿ ಹಣ ನೀಡದಿದ್ದಲ್ಲಿ ಕಾನೂನು ರೀತ್ಯಾ ವಸೂಲಿ ಮಾಡಲಾಗುವುದು” ಎಂದು ಎಚ್ಚರಿಸಲಾಗಿತ್ತು. ಇದರಿಂದ ಗಾಭರಿಗೊಂಡ ಗೀತಾ ಕಾಂಚನ್ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿ ತನಗಾದ ಅನ್ಯಾಯವನ್ನು ತಿಳಿಸಿ ರಕ್ಷಣೆ ಯಾಚಿಸಿದರು. 

ಜಂಟಿ ಡಿಕ್ಲರೇಶನ್ ಪತ್ರವನ್ನು ಹುಡುಕಿಕೊಡುವಂತೆ ತಾನು ಕೆಲಸ ಮಾಡುತಿದ್ದ ಬ್ಯಾಂಕ್ ಶಾಖೆಗೆ ಕೇಳಿದಾಗ ಅದು ನಮ್ಮಲ್ಲಿಲ್ಲ, ಉಡುಪಿಯಲ್ಲಿರುವ ಕೇಂದ್ರ ಕಚೇರಿಯನ್ನು ಸಂಪಕಿಸಬೇಕು ಎಂಬ ಉತ್ತರ ಬರುತ್ತದೆ. ಕೇಂದ್ರ ಕಚೇರಿಯಲ್ಲಿ ಅದು ಕಳೆದು ಹೊಗಿದೆ ಎಂದು ಉತ್ತರಿಸುತ್ತಾರೆ.

"ಈ ಸಂಧರ್ಭದಲ್ಲಿ ಉಡುಪಿ ಮಾನವ ಹಕ್ಕು ಪ್ರತಿಷ್ಟಾನವನ್ನು ಸಂಪರ್ಕಿಸಿದ ಗೀತಾ ಕಾಂಚನ್ ರವರಿಗೆ ಪ್ರತಿಷ್ಟಾನವು ಸಂಪೂರ್ಣ ಸಹಕಾರವನ್ನು ನೀಡಿದೆ. ಬ್ಯಾಂಕ್ ಮತ್ತು ಪ್ರಾವಿಡೆಂಟ್ ಫಂಡ್ ಕಚೇರಿಯ ವಿರುದ್ಧ ಉಡುಪಿ ಜಿಲ್ಲಾ ಬಳಕೆದಾರರ ನ್ಯಾಯಾಲಯದಲ್ಲಿ ಮಾನವ ಹಕ್ಕುಗಳ ಪ್ರತಿಷ್ಠನವು  ದೂರು ದಾಖಲಿಸಿತು. ಸುಮಾರು ಒಂಬತ್ತು ತಿಂಗಳುಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ನೀಡಿದ ತೀರ್ಪಿನಲ್ಲಿ ಈ ಕೂಡಲೇ ಗೀತಾ ಕಾಂಚನ್‌ರಿಗೆ ಇದುವರೆಗೆ ನೀಡಿದಂತಹ 1756 ರೂ.ಗಳ ಮಾಸಿಕ ಪಿಂಚಣಿಯನ್ನು ನೀಡಬೇಕು ಎಂದು ಪಾವಿಡೆಂಟ್ ಫಂಡ್ ಸಂಸ್ಥೆಗೆ ಆದೇಶಿಸಿದೆ. 

ಅಂತೆಯೇ ಕಳೆದೆರಡು ವರ್ಷಗಳಿಂದ ಕಡಿತಗೊಳಿಸಿದ್ದ 500 ರೂಪಾಯಿಗಳ ಮಾಸಿಕ ಪಿಂಚಣಿಯ ಬಾಕಿಯನ್ನು ಆಕೆಗೆ ಪಾವತಿಸಬೇಕು ಹಾಗೂ ಹೆಚ್ಚಾಗಿ ಪಾವತಿಸಿದೆ ಎನ್ನಲಾದ 50,147 ರೂ.ಗಳನ್ನು ಆಕೆಯಿಂದ ವಸೂಲಿ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಆದೇಶಿಸಿದೆ.ಇದರೊಂದಿಗೆ ಕಳೆದೆರಡು ವರ್ಷಗಳಿಂದ ಮಾನಸಿಕವಾಗಿ ಜರ್ಜರಿತವಾಗಿರುವ ಗೀತಾ ಕಾಂಚನ್‌ರಿಗೆ ಪರಿಹಾರವಾಗಿ 25,000 ರೂ.ಗಳನ್ನು ಹಾಗೂ ದಾವೆಗಾಗಿ ವ್ಯಯಿಸಿದ 10,000 ರೂ.ಗಳನ್ನು  ಒಂದು ತಿಂಗಳೊಳಗಾಗಿ ನೀಡಬೇಕು ಎಂದೂ ನ್ಯಾಯಾಲಯ ಆದೇಶಿಸಿದೆ ಎಂದು ಮಾನವ ಹಕ್ಕುಗಳ ಪ್ರತಿಷ್ಟಾನದ ಅಧ್ಯಕ್ಷರಾದ ಡಾ. ರವೀಂದ್ರನಾಥ್ ಶಾನೋಭಾಗ್ ವಿವರಿಸಿದರು.

ಈ ಕುರಿತು ವಿವರಿಸಿದ ಸಂತ್ರಸ್ತೆ ಗೀತಾ ಕಾಂಚನ್ ಅವರು ನಾನು ಬ್ಯಾಂಕಿನಲ್ಲಿ 17 ವರ್ಷ ಕೆಲಸ ಮಾಡಿದ್ದೆ.  ನನಗೆ 1750 ರೂ ಪಿಂಚಣಿ ಬರುತಿತ್ತು. ಜಂಟಿ ಡಿಕ್ಲರೇಶನ್ ಕುರಿತು ಬ್ಯಾಂಕಿನ ಶಾಖೆಯಲ್ಲಿ ಕೇಳಿದಾಗ ಅದು ಕೇಂದ್ರ ಕಚೇರಿಯಲ್ಲಿ ಮಾಡುವುದು ನಾವು ಸಂಬಳ ಮಾತ್ರ ಲೆಕ್ಕಾಚಾರ ಮಾಡುವುದು ಎಂದಿದ್ದರು. ಕೇಂದ್ರ ಕಚೇರಿಯಲ್ಲಿ ಕೇಳಿದಾಗ ಕಚೇರಿ ಸ್ಥಳಾಂತರ ಮಾಡುವ ಸಂಧರ್ಭದಲ್ಲಿ ಫೈಲ್ ಕಳೆದು ಹೋಗಿದೆ ಎಂದಿದ್ದರು. ಆದರೆ ಪಿಎಫ್ ಕಚೇರಿಯವರು ರೂಪಾಯಿ 50,147 ರುಪಾಯಿ ಕಟ್ಟಲು ನೋಟಿಸ್ ಕಳುಹಿಸಿದ್ದರು" ಎಂದರು. 

Follow Us:
Download App:
  • android
  • ios