ಉಡುಪಿ(ಅ.10): ಉಡುಪಿ ಜಿಲ್ಲೆಯಲ್ಲಿ ಕನ್ನಡ ಅಭಿಮಾನಿಯೊಬ್ಬರು ತಮ್ಮ ಹೆಣ್ಣು ಮಗುವಿಗೆ ಕನ್ನಡ ಅಂತ ನಾಮಕರಣ ಮಾಡಿದ್ದು, ಸುದ್ದಿಯಾಗಿತ್ತು. ಈಗ ಜಿಲ್ಲೆಯ ಸೈನಿಕರೊಬ್ಬರು ತನ್ನ ಹೆಣ್ಣು ಮಗುವಿಗೆ ಸೈನ್ಯ ಅಂತ ಹೆಸರಿಡುವ ಮೂಲಕ ತಮ್ಮ ವೃತ್ತಿಗೆ ಗೌರವ ಸೂಚಿಸಿದ್ದಾರೆ. 

ಜಿಲ್ಲೆಯ ಹೆಬ್ರಿ ತಾಲೂಕಿನ ಆಶಾ- ಪ್ರಶಾಂತ್ ಪೂಜಾರಿ ಅವರು ತಮ್ಮ ಮಗುವಿಗೆ ಸೈನ್ಯ ಅಂತ ಹೆಸರಿಡುವ ಮೂಲಕ ಗಮನ ಸೆಳೆದಿದ್ದಾರೆ. ಹಲವು ವರ್ಷಗಳಿಂದ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಮಗುವಿನ ತಂದೆ ಪ್ರಶಾಂತ್ ಅವರು ಪ್ರಸ್ತುತ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ದೇಶ ಹಾಗೂ ಸೈನ್ಯದ ಮೇಲಿನ ವಿಶೇಷ ಅಭಿಮಾನ ಇರುವ ಪ್ರಶಾಂತ್ ಮಗುವಿಗೆ ಸೈನ್ಯ ಹೆಸರಿಡುವ  ಮೂಲಕ ವೃತ್ತಿಗೆ ಗೌರವ ತೋರಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಪುಟ್ಟ ಕಂದ ಕರುನಾಡಿಗೆ ಅತ್ಯಂತ ವಿಶೇಷ !

ಇದಕ್ಕೂ ಮುನ್ನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನೆಂಪು ನಿವಾಸಿ ಪ್ರತಾಪ್ ಶೆಟ್ಟಿ ಹಾಗೂ ಪ್ರತಿಮಾ ದಂಪತಿ ತಮ್ಮ ಮುದ್ದಾದ ಮಗುವಿಗೆ ಕನ್ನಡ ಎಂದು ಹೆಸರಿಟ್ಟಿದ್ದರು. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರತಾಪ್ ಶೆಟ್ಟಿ ಅವರು ತಮ್ಮ ಮಗಳಿಗೆ ಕನ್ನಡ ಎಂದು ನಾಮಕರಣ ಮಾಡುವ ಮೂಲಕ ಮಾತೃಭಾಷೆಗೆ ಗೌರವ ಸಲ್ಲಿಸಿದ್ದರು.