ಕಲಾಪ್ರಪಂಚದ ನಿಜದರ್ಶನ ಮಾಡಿಸುವ ಮುಖವಾಡಗಳು, ಡಾ.ಕಿರಣ್ ಆಚಾರ್ಯರ ಗ್ಯಾಲರಿ ರೌಂಡ್ಸ್
* ಕಲಾಪ್ರಪಂಚದ ನಿಜದರ್ಶನ ಮಾಡಿಸುವ ಮುಖವಾಡಗಳು
* ಡಾ.ಕಿರಣ್ ಆಚಾರ್ಯರ ಗ್ಯಾಲರಿಗೊಂದು ಸುತ್ತು
* ಉಡುಪಿಯ ಡಾ. ಕಿರಣ್ ಆಚಾರ್ಯ ಅಂತಹಾ ಒಬ್ಬ ಅಪರೂಪದ ಕಲಾಪ್ರೇಮಿ
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ, (ಜೂನ್.16): ಪ್ರತಿ ಮನುಷ್ಯನೂ ಮುಖವಾಡಗಳಲ್ಲೇ ಬದುಕುತ್ತಾನೆ ಎಂಬ ಮಾತಿದೆ. ಕೆಲವು ವಂಚಿಸುವ ಮುಖವಾಡಗಳಾದರೆ, ಇನ್ನು ಹಲವು ತನ್ನ ದುಖ ಇನ್ನೊಬ್ವರಿಗೆ ಕಾಣದಿರಲಿ ಎಂದು ಹಾಕಿಕೊಂಡ ಮುಖವಾಡಗಳು. ಇದು ಸರಿಯೊ ತಪ್ಪೋ ಗೊತ್ತಿಲ್ಲ. ಆದರೆ ಕಪಟವಿಲ್ಲದ ಮುಖವಾಡಗಳ ನಿಜವಾದ ಸೌಂದರ್ಯ ಕಾಣಲು ನೀವಿಲ್ಲಿಗೆ ಬರಲೇಬೇಕು .
ಇಲ್ಲೊಬ್ಬ ವ್ಯಕ್ತಿ ಪ್ರಪಂಚ ಸುತ್ತಿ ಬರುವಾಗ ತನಗಿಷ್ಟವಾದ ಮುಖವಾಡಗಳನ್ನು ಹೊತ್ತು ತಂದಿದ್ದಾರೆ ! ಕುತೂಹಲ ಹುಟ್ಟಿಸುವ ಈ ಮುಖವಾಡಗಳು, ತನ್ನ ಅಪ್ರತಿಮ ಸೌಂದರ್ಯದಿಂದ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಕಲೆಯ ಸ್ವರೂಪಗಳು ಅನೇಕ. ದೇಶದಿಂದ ದೇಶಕ್ಕೆ ಕಲಾಪ್ರಕಾರಗಳು ಅದರ ಸ್ವರೂಪಗಳು ಬದಲಾಗಬಹುದು . ಆದರೆ ಸೌಂದರ್ಯಪ್ರಜ್ಞೆಯುಳ್ಳ ಕಲಾಸಕ್ತ ಮಾತ್ರ ಕಲೆಯ ಶ್ರೇಷ್ಠತೆಯನ್ನು ಗುರುತಿಸಬಲ್ಲ.
ಅಶ್ವತ್ಥ ಎಲೆಯಲ್ಲಿ ಸಚಿನ್ ತೆಂಡುಲ್ಕರ್ ಚಿತ್ರ, ಮೆಚ್ಚುಗೆಯ ಪತ್ರ ಕಳುಹಿಸಿದ ಕ್ರಿಕೆಟ್ ದಿಗ್ಗಜ!
ಉಡುಪಿಯ ಡಾ. ಕಿರಣ್ ಆಚಾರ್ಯ ಅಂತಹಾ ಒಬ್ಬ ಅಪರೂಪದ ಕಲಾಪ್ರೇಮಿ. ತಾನು ಸುತ್ತಾಡಿದ ಪ್ರತಿಯೊಂದು ದೇಶದಲ್ಲಿ ಸಿಕ್ಕ ಅಪರೂಪದ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದಾರೆ. ಪ್ರಪಂಚದ ಅಷ್ಟೂ ದೇಶಗಳಲ್ಲಿ ವೆರೈಟಿ ವೆರೈಟಿ ಜನಪದ ಮುಖವಾಡಗಳಿವೆ. ಇಂತಹ ವಿಶ್ವದ ಸುಮಾರು ಐವತ್ತು ದೇಶಗಳ ನೂರೈವತ್ತಕ್ಕೂ ಅಧಿಕ ಜಾನಪದ ಮುಖವಾಡಗಳನ್ನು ಕಲಾಪ್ರೇಮಿ ,ಡಾ.ಕಿರಣ್ ಆಚಾರ್ಯ ಸಂಗ್ರಹಿಸಿ ,ತಮ್ಮಗ್ಯಾಲರಿಯಲ್ಲಿಟ್ಟಿದ್ದಾರೆ. ನಾನು ಕಂಡು ಖುಷಿ ಪಟ್ಟ ಮುಖವಾಡಗಳನ್ನು ತನ್ನೂರ ಜನರು ಕೂಡ ಕಾಣಬೇಕೆಂಬ ಆಸೆಯಿಂದ ಪ್ರದರ್ಶನ ಏರ್ಪಡಿಸಿದ್ದಾರೆ.
ಉಡುಪಿಯ ಅದಿತಿ ಆರ್ಟ್ ಗ್ಯಾಲರಿ, ಕಲಾ ಪ್ರದರ್ಶನಗಳಿಗೆ ಪ್ರಸಿದ್ಧಿ ಪಡೆದ ಸುಸಜ್ಜಿತ ತಾಣ. ಸದ್ಯ ಈ ಗ್ಯಾಲರಿಯ ಮಾಲಕರಾದ ಡಾ.ಕಿರಣ್ ಆಚಾರ್ಯ ತಾವು ಪ್ರವಾಸ ಮಾಡಿರುವ ಹಲವು ದೇಶಗಳ ನೂರೈವತ್ತಕ್ಕೂ ಮಿಕ್ಕಿದ ಮುಖವಾಡಗಳನ್ನು ಇಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ.ಮುಖವಾಡಗಳು ಇರೋದು ಕೇವಲ ಚಹರೆಗಳನ್ನು ಮರೆಮಾಚಲು ಮಾತ್ರವಲ್ಲ, ಅಲಂಕಾರ, ಅರೋಗ್ಯ ವೃದ್ಧಿ, ಶತ್ರುಬಾಧೆಯನ್ನು ನಿವಾರಣೆಗೂ ಮುಖವಾಡಗಳನ್ನು ಬಳಸಲಾಗುತಿತ್ತು. ಅನೇಕ ಯುದ್ಧಗಳಲ್ಲಿ ಶತ್ರುವಿನ ದಾಳಿಯನ್ನು ತಡೆಯಲು ಕೂಡ ಉಪಯೋಗಿಸಲಾಗುತ್ತಿತ್ತು.
ಹಬ್ಹಹರಿದಿನ ,ಕಾರ್ನಿವಾಲ್ ,ಧಾರ್ಮಿಕ ಆಚರಣೆಗಳಲ್ಲದೆ ಮಾಟ ಮಂತ್ರ ತಂತ್ರ...ಇನ್ನೂ ಹಲವು ಸಂದರ್ಭಗಳಲ್ಲಿ ಬಳಸುವ
ನೂರಾರು ಮುಖವಾಡಗಳನ್ನು ಉಡುಪಿ ಭಾಗದ ಕಲಾಸಕ್ತರಿಗೂ ಪರಿಚಯಿಸುವ ದೃಷ್ಟಿಯಿಂದ ಕಲಾಸಕ್ತರಿಗಾಗಿ ಡಾ. ಕಿರಣ್ ಆಚಾರ್ಯ ಮೂರು ದಿನಗಳ ಪ್ರದರ್ಶನವನ್ನೂ ಏರ್ಪಡಿಸಿದ್ದಾರೆ.
ದಕ್ಷಿಣ ಅಮೇರಿಕ, ಇಟಲಿ , ಶ್ರೀಲಂಕಾ , ಬರ್ಮಾ , ನೇಪಾಳ , ಆಫ್ರಿಕಾ ಮುಂತಾದ ದೇಶಗಳ ಸುಮಾರು ನೂರೈವತ್ತಕ್ಕೂ ಅಧಿಕ ಮುಖವಾಡಗಳನ್ನು ಇಲ್ಲಿ ಅಚ್ಚುಕಟ್ಟಾಗಿ ,ಆಕರ್ಷಕವಾಗಿ ಜೋಡಿಸಿಡಲಾಗಿದೆ. ಅಧ್ಯಯನಾಸಕ್ತರಿಗಾಗಿ ಮುಖವಾಡದ ಸಂಕ್ಷಿಪ್ತ ವಿವರಣೆಯನ್ನೂ ಬರೆದಿಡಲಾಗಿದೆ.
ಅಪರೂಪ ಎನ್ನಬಹುದಾದ ಈ ಮುಖವಾಡಗಳ ಜಗತ್ತನ್ನು ನೋಡುವುದೇ ಒಂದು ವಿಶೇಷ ಅನುಭವ.ಪ್ರಪಂಚದ ಅತ್ಯಂತ ಪುರಾತನ ಎನ್ನಬಹುದಾದ ಮುಖವಾಡದ ಪ್ರತಿಕೃತಿಯಿಂದ ಹಿಡಿದು, ನವಿರಾದ ರಚನೆಗಳ, ಪರಂಪರೆಯ ಕಥೆ ಹೇಳುವ, ಆಯಾ ದೇಶಗಳ ಸಾಂಸ್ಕೃತಿಕ ಪ್ರತಿನಿಧಿಗಳಂತಿರುವ ಮುಖವಾಡಗಳು ನೋಡುಗರ ಗಮನ ಸೆಳೆಯುತ್ತೆ.
ಕೊರೋನಾ ಬಂದ ನಂತರ ಮುಖಮುಚ್ಚಿಕೊಳ್ಳೋದು ಸಾಮಾನ್ಯವಾಗಿದೆ. ನಾನಾ ಬಗೆಯ ಮಾಸ್ಕ್ ಧರಿಸಿ ಜನರೋಸಿ ಹೋಗಿದ್ದಾರೆ. ಆದರೆ ಇಲ್ಲಿನ ಕಲಾತ್ಮಕ ಮುಖವಾಡಗಳು ಜನರ ಜೀವನ ಪ್ರೀತಿ ಹೆಚ್ಚಿಸೋದು ಸುಳ್ಳಲ್ಲ.
ಇಷ್ಟಕ್ಕೂ ಡಾ.ಕಿರಣ್ ಆಚಾರ್ಯ ಅವರದ್ದು ಅಪರೂಪದ ಕಲಾಪ್ರೇಮ. ಈ ರಾಜ್ಯ ಕಂಡ ಅಪರೂಪದ ಮುತ್ಸದ್ದಿ ರಾಜಕಾರಣಿ, ಮಾಜಿ ಗೃಹ ಸಚಿವ ಡಾ.ವಿ.ಎಸ್ ಆಚಾರ್ಯ ಅವರ ಪುತ್ರ. ರಾಜಕಾರಣಿಗಳ ಮಕ್ಕಳೆಲ್ಲಾ ರಾಜಕೀಯದ ಪಡಸಾಲೆಗೆ ನುಗ್ಗುವಾಗ, ಪ್ರಸಿದ್ದ ವೈದ್ಯ ಡಾ. ಕಿರಣ್ ಆಚಾರ್ಯರಂತವರ ಈ ಆಸಕ್ತಿಯೇ ಅಪರೂಪ.