ನಾಳೆ ಉದಯ್‌ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ

ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆಯಲು ಅರಸಾಹಸ ಪಡುತ್ತಿರುವ ಕದಲೂರು ಉದಯ್‌ ಕೊನೆಗೂ ಮಾ.13 ರ ಸೋಮವಾರ ಕಾಂಗ್ರೆಸ್‌ ಪಕ್ಷಕ್ಕೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೇರ್ಪಡೆಗೊಳ್ಳುತ್ತಿರುವುದು ಕೆಪಿಸಿಸಿ ಸದಸ್ಯ ಎಸ್‌.ಗುರುಚರಣ್‌ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.

Uday will join the Congress party snr

 ಭಾರತೀನಗರ :  ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆಯಲು ಅರಸಾಹಸ ಪಡುತ್ತಿರುವ ಕದಲೂರು ಉದಯ್‌ ಕೊನೆಗೂ ಮಾ.13 ರ ಸೋಮವಾರ ಕಾಂಗ್ರೆಸ್‌ ಪಕ್ಷಕ್ಕೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೇರ್ಪಡೆಗೊಳ್ಳುತ್ತಿರುವುದು ಕೆಪಿಸಿಸಿ ಸದಸ್ಯ ಎಸ್‌.ಗುರುಚರಣ್‌ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ಶುಕ್ರವಾರ ರಾತ್ರಿ 10.30ರಿಂದ ಮಧ್ಯರಾತ್ರಿ 3.30ರ ವರೆಗೂ ನಡೆದ ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ಕದಲೂರು ಉದಯ್‌ ಹಾಗೂ ಗುರುಚರಣ್‌ ಅವರು ಮುಕ್ತವಾಗಿ ಮಾತುಕತೆ ನಡೆಸಿರುವುದು ಬಲ್ಲಮೂಲಗಳಿಂದ ತಿಳಿದುಬಂದಿದೆ. ಈ ಸಭೆಯಲ್ಲಿ ಕಾಂಗ್ರೆಸ್‌ ಬಿ ಫಾರಂ ಯಾರಿಗೆ ಎಂಬುವುದು ಖಾತರಿಗೊಂಡಿಲ್ಲ. ಆದರೆ, ಮಾ.13 ರ ಸೋಮವಾರ ಕದಲೂರು ಉದಯ್‌ ಕಾಂಗ್ರೆಸ್‌ ಪಕ್ಷ ಸೇರ್ಪಡೆ ಗೊಳ್ಳುತ್ತಿರುವುದು ಖಚಿತಗೊಂಡಿದೆ. ಆದರೆ, ಕದಲೂರು ಉದಯ್‌ ನಾನೇ ಕಾಂಗ್ರೆಸ್‌ ಅಭ್ಯರ್ಥಿ ಎಂದೇ ಕಾಂಗ್ರೆಸ್‌ ಸೇರ್ಪಡೆಗೊಳ್ಳುತ್ತಿದ್ದಾರೆಂದು ಉದಯ್‌ ಅಭಿಮಾನಿಗಳಲ್ಲಿ ಕೇಳುತ್ತಿರುವ ಮಾತಾಗಿದೆ.

ಸಮಾಜ ಸೇವೆಯ ಮೂಲಕ ಕ್ಷೇತ್ರ ಪ್ರವೇಶಿಸಿದ ಕದಲೂರು ಉದಯ್‌ ಕಳೆದ 2 ವರ್ಷಗಳಿಂದ ನಿರಂತರವಾಗಿ ಜನಸಂಪರ್ಕದಲ್ಲಿದ್ದು ಎಲ್ಲರನ್ನು ವಿಶ್ವಾಸಕ್ಕೆ ಪಡೆಯಲು ಮುಂದಾಗಿದ್ದಾರೆ.

ಕದಲೂರು ಉದಯ್‌ ಬಹಳ ವ್ಯವಸ್ಥಿತವಾಗಿ ಚುನಾವಣಾ ಪೂರ್ವ ಕಾರ್ಯಚಟುವಟಿಕೆಗಳನ್ನು ಬಿರುಸುಗೊಳಿಸುತ್ತಿರುವುದು ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದೆ. ಈಗಾಗಲೇ ಮಾರ್ನಾಲ್ಕು ಭಾರಿ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ಗುರುಚರಣ್‌ ಹಾಗೂ ಉದಯ್‌ ಅವರ ಮುಖಾಮುಖಿ ಸಭೆ ನಡೆಸಿ ಯಾವ ತೀರ್ಮಾನಕ್ಕೆ ಬಂದಿದ್ದಾರೆಂಬುವುದು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.

ನಾನೇ ಅಭ್ಯರ್ಥಿ:

ಕೆಪಿಸಿಸಿ ಸದಸ್ಯ ಗುರುಚರಣ್‌ ಅವರು ಸಹ ಕ್ಷೇತ್ರದಲ್ಲಿ ತಮ್ಮದೆಯಾದ ಸಂಚಲನ ಮೂಡಿಸಿ ಮದ್ದೂರು ಕ್ರೀಡಾಂಗಣದಲ್ಲಿ ಪ್ರಜಾಧ್ವನಿಯಾತ್ರೆಯ ಮೂಲಕ ಶಕ್ತಿಪ್ರದರ್ಶನ ಮಾಡಿದ್ದಾರೆ. ಜೊತೆಗೆ ಕ್ಷೇತ್ರದ ಭಕ್ತಾದಿಗಳನ್ನು ಮಲೈ ಮಹದೇಶ್ವರನ ಬೆಟ್ಟಕ್ಕೆ ಕಳುಹಿಸುವ ಮೂಲಕ ಚುನಾವಣಾ ಪ್ರಚಾರ ನಡೆಸುತ್ತಾ ನಾನೇ ಅಭ್ಯರ್ಥಿ ಎಂದು ಕ್ಷೇತ್ರದಲ್ಲಿ ಸಂಚಾರಿಸುತ್ತಿದ್ದಾರೆ. ಇವರಿಬ್ಬರ ನಡುವೆ ಕಾಂಗ್ರೆಸ್‌ ಬಿ ಫಾರಂಗಾಗಿ ನಡೆಯುತ್ತಿರುವ ಕಾಳಗ ಕ್ಷೇತ್ರದ ಕಾಂಗ್ರೆಸ್‌ ವಲಯದಲ್ಲಿ ಗೊಂದಲ ಸೃಷ್ಟಿಯಾಗಿದೆ.

ಕದಲೂರು ಉದಯ್‌ ಬಹಳ ಹಿಂದಿನಿಂದಲೂ ಬಹಳ ವ್ಯವಸ್ಥಿತವಾಗಿ ಸಮಾಜ ಸೇವೆಯ ಮೂಲಕ ಚುನಾವಣಾ ಪ್ರಚಾರ ಮಾಡಿಕೊಂಡು ಬರುತ್ತಿದ್ದರು. ಇದರ ನಡುವೆ ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್‌ ಅವರ ಸಂಪರ್ಕದಲ್ಲಿದ್ದು ಕಾಂಗ್ರೆಸ್‌ ಟಿಕೆಟ್‌ಗಾಗಿ ಬಹಳ ಒತ್ತಡವನ್ನು ಏರಿದ್ದರು ಎಂಬುವುದು ರಾಕೀಯ ವಲಯದಿಂದ ತಿಳಿದುಬಂದಿದೆ.

ಜ.28ರಂದು ರಾಷ್ಟ್ರೀಯ ಪಕ್ಷದಿಂದಲೇ ನನ್ನ ಸ್ಪರ್ಧೆ ಎಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಇದರ ಬೆನ್ನಲ್ಲೆ ಡಿ.ಕೆ.ಶಿವಕುಮಾರ್‌ ಅವರನ್ನು ಪದೇ ಪದೇ ಸಂಪರ್ಕಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇವೆಲ್ಲವನ್ನು ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಕಗ್ಗಂಟಾದ ಬಿ-ಫಾರಂ :

ಕೆಪಿಸಿಸಿ ಸದಸ್ಯ ಗುರುಚರಣ್‌ ಹಾಗೂ ಕದಲೂರು ಉದಯ್‌ ನಡುವೆ ಕಾಂಗ್ರೆಸ್‌ ಬಿಫಾರಂಗಾಗಿ ಜಿದ್ದಾಜಿದ್ದಿ ನಡೆಯುತ್ತಿರುವುದು ವರಿಷ್ಠರಿಗೆ ಆಯ್ಕೆವಿಚಾರಲ್ಲಿ ಕಗ್ಗಂಟಾಗಿ ಪರಿಣಮಿಸಿದೆ. ಪ್ರಸ್ತುತ ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಾಬಲ್ಯವಿದ್ದು ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಾವುಟ ಹಾರಿಸಲು ವರಿಷ್ಠರು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಇವರಿಬ್ಬರಲ್ಲಿ ಯಾರಿಗೆ ಬಿ.ಫಾರಂ ಸಿಗುತ್ತದೆ ಎಂಬುವುದೇ ಇಲ್ಲಿ ಕುತೂಹಲವಾಗಿದೆ.

ತಮ್ಮ ಗುರುವಿಗೆ ಕೈಹಿಡಿಯುತ್ತಾರ ಡಿಕೆಶಿ

ಮದ್ದೂರು ಕ್ಷೇತ್ರ ಈಗ ಕಾಂಗ್ರೆಸ್‌ ಪಕ್ಷದಿಂದ ಬಲಿಷ್ಠಗೊಂಡಿದೆ. ಈಗಾಗಲೇ ಮದ್ದೂರು ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯ ದಿನೇಶ್‌ಗೂಳಿಗೌಡ ಹಾಗೂ ಮಧುಜಿಮಾದೇಗೌಡ ಅವರು ಆಯ್ಕೆಗೊಂಡಿದ್ದಾರೆ. ಹಾಗಾಗಿ ಈ ಭಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಶತಸಿದ್ದವಾಗಿದೆ ಎಂಬುವುದು ಕಾಂಗ್ರೆಸ್‌ ವಲಯದಲ್ಲಿ ಕೂಗು ಬರುತ್ತಿದೆ. ಇದನ್ನು ಎದುರಿಸಲು ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಸವಾಲಾಗಿ ನಿಂತಿದ್ದಾರೆ.

ಇದರಿಂದ ಡಿ.ಕೆ.ಶಿವಕುಮಾರ್‌ ಅವರು ತಮ್ಮ ರಾಜಕೀಯ ಕ್ಷೇತ್ರದ ಗುರುಗಳಾದ ಎಸ್‌.ಎಂ.ಕೃಷ್ಣ ಅವರ ಕುಟುಂಬದ ಸದಸ್ಯರಾದ ಗುರುಚರಣ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿ ಕೈಹಿಡಿಯುತ್ತಾರ? ಅಥವಾ ಕದಲೂರು ಉದಯ್‌ ಅವರಿಗೆ ಟಿಕೆಟ್‌ ಕೊಡುತ್ತಾ? ಎಂಬುವುದು ಯಕ್ಷ ಪ್ರಶ್ನೆಯಾಗಿದೆ.

Latest Videos
Follow Us:
Download App:
  • android
  • ios