ಬೆಂಗಳೂರು(ಅ.31): ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್‌ಗಾಗಿ ತೋಡಿದ್ದ ಗುಂಡಿಗೆ ಬಿದ್ದು, ಎರಡು ವರ್ಷದ ಮಗು ಮೃತಪಟ್ಟಿರುವ ಘಟನೆ ಕೆಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಕೆಂಗೇರಿಯ ಕೋಡಿಪಾಳ್ಯದ ವಿನೋದ್‌ಕುಮಾರ್‌ ಮೃತಪಟ್ಟ ಮಗು. ಘಟನೆ ಸಂಬಂಧ ಕಟ್ಟಡ ಮಾಲೀಕ ರಮೇಶ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್‌ ಎಂ.ಪಾಟೀಲ್‌ ಹೇಳಿದ್ದಾರೆ. 

ಧಾರವಾಡ ವೈದ್ಯರ ಸಾಧನೆ: 20 ದಿನದ ಮಗುವಿಗೆ ಯಶಸ್ವಿ ಹೃದಯ ಚಿಕಿತ್ಸೆ..!

ಮಗುವಿನ ತಂದೆ ಮೂಲತಃ ಕೊಪ್ಪಳ ಜಿಲ್ಲೆಯವರಾಗಿದ್ದು, ಕೆಲ ವರ್ಷಗಳ ಹಿಂದೆ ಕುಟುಂಬ ಸಮೇತ ನಗರಕ್ಕೆ ಬಂದು ನೆಲೆಸಿದ್ದರು. ಬಿಜಿಎಸ್‌ ಆಸ್ಪತ್ರೆಯಲ್ಲಿ ಮಗುವಿನ ತಂದೆ ಭದ್ರತಾ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದರೆ, ಪತ್ನಿ ಕೂಲಿ ಕೆಲಸ ಮಾಡುತ್ತಿದ್ದರು. ನಿರ್ಮಾಣ ಹಂತದ ಕಟ್ಟಡದ ಸಮೀಪ ದಂಪತಿಗೆ ವಾಸವಿರಲು ಶೆಡ್‌ನಲ್ಲಿ ಅವಕಾಶ ಕಲ್ಪಿಸಲಾಗಿತ್ತು. 

ಇತ್ತೀಚೆಗೆ ಹೆಚ್ಚು ಮಳೆ ಬಂದ ಕಾರಣ ಲಿಫ್ಟ್‌ಗಾಗಿ ತೋಡಿದ್ದ ಗುಂಡಿಯಲ್ಲಿ ಮಳೆ ನೀರು ತುಂಬಿತ್ತು. ಆದರ ಮೇಲೆ ಏನು ಮುಚ್ಚಿರಲಿಲ್ಲ. ಶುಕ್ರವಾರ ಬೆಳಗ್ಗೆ ತಂದೆ ಕೆಲಸಕ್ಕೆ ಹೋಗಿದ್ದರು. ತಾಯಿ ಸ್ನಾನಕ್ಕೆ ಹೋಗಿದ್ದರು. ಈ ವೇಳೆ ಮನೆಯಿಂದ ಹೊರಗೆ ಬಂದು ಆಟವಾಡುತ್ತಿದ್ದ ಮಗು, ಗುಂಡಿಯೊಳಗೆ ಬಿದ್ದಿದೆ. ಮಗು ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರೊಬ್ಬರು ಮಗುವನ್ನು ಹೊರ ತೆಗೆದು ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮಗು ಅಸುನೀಗಿದೆ. ಘಟನೆ ಸಂಬಂಧ ಕಟ್ಟಡದ ಮಾಲೀಕನ ವಿರುದ್ಧ ನಿರ್ಲಕ್ಷ್ಯ ಪ್ರಕರಣದಡಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.