ಧಾರವಾಡ(ಅ.23): ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ 20 ದಿನದ ಹಸಿಗೂಸಿಗೆ ಯಶಸ್ವಿ ಚಿಕಿತ್ಸೆ ಮಾಡುವ ಮೂಲಕ ನಾರಾಯಣ ಹೃದಯಾಲಯದ ವೈದ್ಯರು ಮಗುವಿಗೆ ಮರುಜನ್ಮ ನೀಡಿದ್ದಾರೆ.

ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಾರಾಯಣ ಹೃದಯಾಲಯದ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ ಪಟ್ಟಣಶೆಟ್ಟಿ, ನವಜಾತ ಶಿಶುಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡರೆ, ಮಗುವನ್ನು ರಕ್ಷಿಸುವುದು ಅತ್ಯಂತ ಕಷ್ಟಕರ. ಆದರೆ ನಮ್ಮ ವೈದ್ಯರು ಮಹಾಪದಮನಿಯಲ್ಲಿ ದೋಷವಿದ್ದ ಶಿಶುವೊಂದಕ್ಕೆ ಹೊಸ ಬದುಕು ನೀಡಿದ್ದಾರೆ ಎಂದರು.

ಹುಬ್ಬಳ್ಳಿ: KIADB ಸಹಾಯಕ ಕಾರ್ಯದರ್ಶಿ ಮನೆ ಮೇಲೆ ಎಸಿಬಿ ದಾಳಿ, 1.60 ಕೋಟಿ ಆಸ್ತಿ ಪತ್ತೆ

ಹುಬ್ಬಳ್ಳಿ ಮೂಲದ ಈ ಶಿಶು ಹುಟ್ಟಿದಾಗ 2.3 ಕೆಜಿ ತೂಕವಿತ್ತು. ಮಗುವಿನ ಹೃದಯದಲ್ಲಿ ರಕ್ತ ಪರಿಚಲನೆ ಸಮಸ್ಯೆ ಕಾರಣದಿಂದ ಆಸ್ಪತ್ರೆಗೆ ಬಂದರು. ಮಗುವಿನ ತಪಾಸಣೆ ನಡೆಸಿದಾಗ ಮಹಾಪದಮನಿಯಲ್ಲಿ ದೊಡ್ಡ ಪ್ರಮಾಣದ ದೋಷ ಕಂಡು ಬಂದ ಹಿನ್ನೆಲೆ, ರಕ್ತ ಪರಿಚಲನೆ ಸಮಸ್ಯೆ ದೃಢಪಟ್ಟಿತು. ಚಿಕ್ಕಮಕ್ಕಳ ಹೃದಯ ರೋಗ ತಜ್ಞ ಡಾ. ಅರುಣ ಬಬಲೇಶ್ವರ ಹಾಗೂ ವಯಸ್ಕರ ಹಾಗೂ ಹಿರಿಯ ಮುಖ್ಯ ಹೃದಯ ಶಸ್ತ್ರ ಚಿಕಿತ್ಸಕ ಡಾ. ರವಿವರ್ಮ ಪಾಟೀಲ ಮತ್ತು ಹೃದಯ ಅರಿವಳಿಕೆ ತಜ್ಞರ ತಂಡ 2-ಡಿ ಎಕೋ ಕಾರ್ಡಿಯೋಗ್ರಫಿ ಪರೀಕ್ಷೆ ನಡೆಸಿದಾಗ, ಮಗುವಿನ ಮಹಾಪದಮನಿಯಲ್ಲಿ ಶೇ. 65 ರಷ್ಟು ತಡೆ ಇರುವುದು ಕಂಡು ಬಂದಿತು. ಈ ಹಿನ್ನೆಲೆ ಅಪರೂಪದ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮಹಾಪದಮನಿಯಲ್ಲಿದ್ದ ಪ್ರಮುಖ ತಡೆಯನ್ನು ತೆರವುಗೊಳಿಸಿ ಅಘಾತ ಸ್ಥಿತಿಯಲ್ಲಿದ್ದ ಮಗು ತಕ್ಷಣ ಚೇತರಿಸಿಕೊಳ್ಳುವಂತೆ ಮಾಡಿ, ಶಿಶುವಿನ ಪ್ರಾಣ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಡಾ. ಅರುಣ ಬಬಲೇಶ್ವರ, ಡಾ. ರವಿವರ್ಮಾ ಪಾಟೀಲ, ನಾರಾಯಣ ಹೃದಯಾಲಯದ ಮಾರುಕಟ್ಟೆವಿಭಾಗದ ಮೇಲ್ವಿಚಾರಕ ಅಜಯ ಹುಲಮನಿ, ದುಂಡೇಶ ತಡಕೋಡ, ವಿನಾಯಕ ಗಂಜಿ, ಮಗುವಿನ ತಂದೆ ಮೊಹ್ಮದ್‌ ಫಾರೂಖ್‌ ಇದ್ದರು.