Asianet Suvarna News Asianet Suvarna News

ಕೊರೋನಾಗೆ 2 ವರ್ಷದ ಮಗು ಸಾವು: 3ನೇ ಅಲೆಯ ಮುನ್ಸೂಚನೆಯೇ?

*  ಕೋವಿಡ್‌ ಮೂರನೇ ಅಲೆ ಮುನ್ಸೂಚನೆ ಅಲ್ಲ: ಡಿಸಿ
*  ಕೊರೋನಾಗೆ ಮಗು ಸಾವನ್ನಪ್ಪಿದ್ದು ಜಿಲ್ಲೆಯಲ್ಲಿ ಇದೇ ಮೊದಲು 
*  ಕೊರೋನಾದಂತಹ ಲಕ್ಷಣಗಳು ಕಂಡು ಬಂದರೆ ಅದು ಕೋವಿಡ್‌ ಸಾವು ಎಂದು ಪರಿಗಣನೆ 
 

Two Year Old Baby Dies Due to Coronavirus in Vijayapura grg
Author
Bengaluru, First Published Sep 9, 2021, 7:13 AM IST

ವಿಜಯಪುರ(ಸೆ.09): ಕೊರೋನಾ ಮಹಾಮಾರಿಗೆ ಎರಡು ವರ್ಷದ ಹೆಣ್ಣು ಮಗು ಸಾವನ್ನಪ್ಪಿದ್ದು, ಇದು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮೂರನೇ ಅಲೆಯ ಮುನ್ಸೂಚನೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ವಿಜಯಪುರದ ಶಹಪೇಟೆ ಬಡಾವಣೆಯ ಎರಡು ವರ್ಷದ ಹೆಣ್ಣು ಮಗುವೊಂದು ಉಸಿರಾಟದ ಸಮಸ್ಯೆ (ಸಾರಿ ಕೇಸ್‌)ಯಿಂದ ಬಳಲುತ್ತಿತ್ತು. ಆ.14ರಂದು ನಗರದ ಖಾಸಗಿ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆ.20ರಂದು ಮಗು ಸಾವನ್ನಪ್ಪಿದೆ. ಆರ್‌ಟಿಪಿಸಿಆರ್‌ ವರದಿಯಲ್ಲಿ ನೆಗೆಟಿವ್‌ ಬಂದಿದೆ. ಆದಾಗ್ಯೂ ಮಗುವಿನಲ್ಲಿ ಜ್ವರ, ನಿಶ್ಯಕ್ತಿಯಂತಹ ಕೊರೋನಾ ಲಕ್ಷಣಗಳು ಗೋಚರಿಸಿದ್ದರಿಂದ ಈ ಮಗುವಿನ ಸಾವನ್ನು ಕೊರೋನಾದಿಂದ ಉಂಟಾದ ಸಾವು ಎಂದು ಪರಿಗಣಿಸಲಾಗಿದೆ. ವೈದ್ಯರ ತಂಡವೂ ಈ ಮಗುವಿನ ಸಾವು ಕೋವಿಡ್‌ನಿಂದ ಆಗಿದೆ ಎಂದು ವರದಿ ನೀಡಿದೆ. ಹೀಗಾಗಿ ಈ ಮಗುವಿನ ಸಾವು ಕೊರೋನಾದಿಂದಲೇ ಸಂಭವಿಸಿದೆ ಎಂಬುವುದು ದೃಢಪಟ್ಟಿದೆ. ಕೊರೋನಾ ಒಂದನೇ ಹಾಗೂ ಎರಡನೇ ಅಲೆಯಲ್ಲಿ ಎರಡು ವರ್ಷದ ಮಗು ಸಾವನ್ನಪ್ಪಿದ್ದು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಯಾಗಿದೆ.

3ನೇ ಅಲೆಗೂ ಮುನ್ನವೇ ಮಕ್ಕಳ ಆಸ್ಪತ್ರೆಗಳೆಲ್ಲ ಫುಲ್‌..!

ಮೂರನೇ ಅಲೆ ಮುನ್ಸೂಚನೆ ಅಲ್ಲ:

ಎರಡು ವರ್ಷದ ಮಗು ಕೊರೋನಾದಿಂದ ಮೃತಪಟ್ಟಿದೆ. ಇದು ಮೂರನೇ ಅಲೆಯ ಮುನ್ಸೂಚನೆಯಲ್ಲ. ಮಗುವಿನ ಆರ್‌ಟಿಪಿಸಿಆರ್‌ ಪರೀಕ್ಷಾ ವರದಿಯಲ್ಲಿ ನೆಗೆಟಿವ್‌ ಬಂದಿದೆ. ಆದರೆ ಬದಲಾದ ಸರ್ಕಾರಿ ಕೋವಿಡ್‌ ನಿಯಮಾವಳಿ ಹಿನ್ನೆಲೆಯಲ್ಲಿ ಪರೀಕ್ಷಾ ವರದಿ ನೆಗೆಟಿವ್‌ ಬಂದಿದ್ದರೂ ಕೊರೋನಾದಂತಹ ಲಕ್ಷಣಗಳು ಕಂಡು ಬಂದರೆ ಅದು ಕೋವಿಡ್‌ ಸಾವು ಎಂದು ಪರಿಗಣಿಸಬೇಕು ಎಂಬ ಕಾರಣಕ್ಕಾಗಿ ಇದು ಕೊರೋನಾದಿಂದ ಆಗಿರುವ ಸಾವು ಎಂದು ಪರಿಗಣಿಸಲಾಗಿದೆ. ವೈದ್ಯರ ವರದಿಯಲ್ಲೂ ಇದು ಕೊರೋನಾದಿಂದ ಸಂಭವಿಸಿದ ಸಾವು ಎಂದು ದೃಢಪಟ್ಟಿದೆ ಎಂದು ವಿಜಯಪುರ ಡಿಸಿ ಪಿ. ಸುನೀಲಕುಮಾರ ಸ್ಪಷ್ಟಪಡಿಸಿದ್ದಾರೆ.
 

Follow Us:
Download App:
  • android
  • ios