*  ನ್ಯೂಮೋನಿಯಾದಿಂದ ಬಳಲುತ್ತಿರುವ ಮಕ್ಕಳು*  ಖಾಸಗಿ ಆಸ್ಪತ್ರೆಯಲ್ಲಿ ಬೆಡ್‌ಗಾಗಿ ಸುತ್ತಾಡುತ್ತಿರುವ ಪಾಲಕರು*  ವೈರಲ್‌ ಜ್ವರದ ಕುರಿತು ಪಾಲಕರು ಎಚ್ಚರ ವಹಿಸುವುದು ಅಗತ್ಯ 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಆ.27): ಕೋವಿಡ್‌ ಮೂರನೇ ಅಲೆಗೂ ಮುನ್ನವೇ ಮಕ್ಕಳ ಆಸ್ಪತ್ರೆಯಲ್ಲಿನ ಬೆಡ್‌ಗಳು ಫುಲ್‌ ಆಗಿವೆ. ಹೀಗಾಗಿ, ಪಾಲಕರು ಮಕ್ಕಳ ಆಸ್ಪತ್ರೆಯಲ್ಲಿ ಬೆಡ್‌ಗಾಗಿ ಅಲೆಯುತ್ತಿದ್ದು, ಆತಂಕ ಹೆಚ್ಚಿಸಿದೆ.

ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಪ್ರತ್ಯೇಕ ವಾರ್ಡ್‌ನಲ್ಲಿ 40 ಬೆಡ್‌ಗಳು ಇದ್ದು, ಅಷ್ಟೂ ಫುಲ್‌ ಆಗಿವೆ. ಇನ್ನು ಎನ್‌ಐಸಿಯುನಲ್ಲಿರುವ 12 ಬೆಡ್‌ಗಳು ಫುಲ್‌ ಆಗಿವೆ. ಕೇವಲ ಸರ್ಕಾರಿ ಆಸ್ಪತ್ರೆಯಲ್ಲಷ್ಟೇ ಅಲ್ಲ, ಜಿಲ್ಲಾದ್ಯಂತ ಮಕ್ಕಳ ಆಸ್ಪತ್ರೆಯಲ್ಲಿ ಬೆಡ್‌ಗಳೇ ಸಿಗುತ್ತಿಲ್ಲ. ಮಕ್ಕಳ ಆಸ್ಪತ್ರೆಯಲ್ಲಿ ಕಾಲಿಟ್ಟರೆ ಸಾಕು ಮಕ್ಕಳನ್ನು ಕಟ್ಟಿಕೊಂಡು ಪಾಲಕರು ಬೆಡ್‌ಗಾಗಿ ಮತ್ತು ಚಿಕಿತ್ಸೆಗಾಗಿ ಸರದಿಯಲ್ಲಿ ನಿಂತಿರುವುದು ಕಂಡು ಬರುತ್ತದೆ. ಎಲ್ಲರಿಗೂ ಆತಂಕ ಇದ್ದೇ ಇದೆ. ಕೋವಿಡ್‌ ಮೂರನೇ ಅಲೆಯ ಆತಂಕ ಇರುವ ವೇಳೆಯಲ್ಲಿ ಮಕ್ಕಳು ಈ ರೀತಿ ಹಾಸಿಗೆ ಹಿಡಿಯುತ್ತಿರುವುದನ್ನು ನೋಡಿದ ಪಾಲಕರು ಚಿಂತೆಗೀಡಾಗಿದ್ದಾರೆ.

ನ್ಯೂಮೋನಿಯಾ ಸಮಸ್ಯೆ

ಮಕ್ಕಳಲ್ಲಿ ಈಗ ನ್ಯೂಮೋನಿಯಾ ಸಮಸ್ಯೆ ಹೆಚ್ಚಾಗಿ ಕಾಡತೊಡಗಿದೆ. ಉಸಿರಾಟ, ಶ್ವಾಸಕೋಶದ ಸಮಸ್ಯೆಯಾಗಿದ್ದು, ವೈರಲ್‌ ಇನ್‌ಫೆಕ್ಷನ್‌ನಿಂದ ಈ ಸಮಯದಲ್ಲಿ ಸಾಮಾನ್ಯವಾಗಿ ಕಾಡುತ್ತದೆ. ನೆಗಡಿ, ಕೆಮ್ಮು, ಜ್ವರ ಸಹಜವಾಗಿರುತ್ತದೆ. ನಾಲ್ಕಾರು ದಿನಗಳ ನಂತರ ಮಕ್ಕಳು ಗುಣಮುಖರಾಗುತ್ತಾರೆ.

ಕೋವಿಡ್‌ಗೆ ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ

ಇದು ವೈರಸ್‌ ಆಗಿರುವುದರಿಂದ ಸಹಜವಾಗಿ ಹರಡುತ್ತದೆ. ಆತಂಕಪಡುವ ಅಗತ್ಯವಿಲ್ಲ. ಪ್ರತಿ ಬಾರಿಯೂ ನಾಲ್ಕಾರು ದಿನಗಳಿಗೆ ಹತೋಟಿಗೆ ಬರುತ್ತಿದ್ದ ನ್ಯೂಮೋನಿಯಾ ಈ ಬಾರಿ ಹಾಗೆ ಆಗುತ್ತಿಲ್ಲ. ಹತ್ತಾರು ದಿನಗಳಾದರೂ ಗುಣಮುಖವಾಗುತ್ತಿಲ್ಲ ಎನ್ನುವುದು ಆತಂಕವನ್ನು ಹೆಚ್ಚಳ ಮಾಡಿದೆ. ಇದರಿಂದಾಗಿ ಆಸ್ಪತ್ರೆಗಳ ಬೆಡ್‌ ಭರ್ತಿಯಾಗುತ್ತಿವೆ. ಪಾಲಕರು ಗಾಬರಿಯಿಂದ ಮಕ್ಕಳನ್ನು ಆಸ್ಪತ್ರೆಗೆ ಸೇರಿಸುತ್ತಿದ್ದಾರೆ. ಜಿಲ್ಲಾಸ್ಪತ್ರೆಯ 52 ನಾನ್‌ ಕೋವಿಡ್‌ ಬೆಡ್‌ಗಳು ಸಹ ಭರ್ತಿಯಾಗಿವೆ.

ಕೋವಿಡ್‌ ಪಾಸಿಟಿವ್‌ ಇಲ್ಲ

ಸಮಾಧಾನದ ಸಂಗತಿ ಎಂದರೆ ಯಾವ ಮಕ್ಕಳಲ್ಲೂ ಕೋವಿಡ್‌ ಪಾಸಿಟಿವ್‌ ಇಲ್ಲ. ಜೂನ್‌, ಜುಲೈ ತಿಂಗಳಲ್ಲಿ ಕೆಲ ಪ್ರಕರಣಗಳನ್ನು ಹೊರತುಪಡಿಸಿದರೆ ಆಗಸ್ಟ್‌ ತಿಂಗಳಲ್ಲಿ ಮಕ್ಕಳಲ್ಲಿ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಈಗ ನಿತ್ಯವೂ ನಾಲ್ಕಾರು ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗುತ್ತಿವೆ. ಶೇಕಡಾ 1 ಕ್ಕಿಂತಲೂ ಪಾಸಿಟಿವಿಟಿ ದರ ಕಡಿಮೆ ಇದೆ.

ಮುನ್ನೆಚ್ಚರಿಕೆ ಇರಲಿ

ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ವೈರಲ್‌ ಜ್ವರದ ಕುರಿತು ಪಾಲಕರು ಎಚ್ಚರ ವಹಿಸುವುದು ತೀರಾ ಅಗತ್ಯ. ಕೋವಿಡ್‌ ಇಲ್ಲ ಎಂದು ಬೇಜವಬ್ದಾರಿ ಮಾಡುವಂತಿಲ್ಲ. ನೆಗಡಿ, ಕೆಮ್ಮು ಸೇರಿದಂತೆ ವಿವಿಧ ಲಕ್ಷಣ ಕಂಡ ತಕ್ಷಣ ಚಿಕಿತ್ಸೆ ಪಡೆಯುವುದು ಉತ್ತಮ ಎನ್ನುತ್ತಾರೆ ವೈದ್ಯರು.

ಮಕ್ಕಳಲ್ಲಿ ವೈರಲ್‌ ಇನ್‌ಫೆಕ್ಷನ್‌ ಆಗಿದೆಯೇ ಹೊರತು ಕೋವಿಡ್‌ ಪಾಸಿಟಿವಿಟಿ ಇಲ್ಲ. ಆದರೆ, ಅಷ್ಟು ಬೆಡ್‌ಗಳು ಫುಲ್‌ ಆಗಿರುವುದಂತು ನಿಜ. ಹವಾಮಾನ ವೈಪರಿತ್ಯದಿಂದ ಹೀಗಾಗುತ್ತಿದ್ದು, ಆತಂಕ ಬೇಡ ಎಂದು ಕೊಪ್ಪಳ ಜಿಲ್ಲಾಸ್ಪತ್ರೆ ಡಿಎಎಸ್‌ ಡಾ. ಪ್ರಶಾಂತ ತಿಳಿಸಿದ್ದಾರೆ. 

ಮಕ್ಕಳಿಗೆ ನ್ಯೂಮೋನಿಯಾ ಅಧಿಕ ಪ್ರಮಾಣದಲ್ಲಿ ಇರುವುದರಿಂದ ಸಮಸ್ಯೆ ಆಗಿರುವುದು ನಿಜ. ದಿನೇ ದಿನೆ ಇದು ಹರಡುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಕೋವಿಡ್‌ ಪಾಸಿಟಿವ್‌ ಇಲ್ಲವಾದರೂ ಪಾಲಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಚಿಕ್ಕಮಕ್ಕಳ ತಜ್ಞರು ಡಾ. ಮಹೇಶ ಭಗವತಿ ಹೇಳಿದ್ದಾರೆ.