ಹಳೆಯದಾಗಿದ್ದ ಕಾಂಪೌಂಡ್‌ ದುರಸ್ತಿ ಕಾಮಗಾರಿ, ಈ ವೇಳೆ ಏಕಾಏಕಿ ಕುಸಿದ ಕಾಂಪೌಂಡ್‌, ಎಂಇಎಸ್‌ ಕಾಲೋನಿಯ ಸೇನಾ ವಸತಿ ಗೃಹದ ಆವರಣದಲ್ಲಿ ಘಟನೆ. 

ಬೆಂಗಳೂರು(ಡಿ.30):  ನವೀಕರಣ ಹಂತದ ಕಾಂಪೌಂಡ್‌ ಕುಸಿದು ಮಹಿಳೆ ಸೇರಿದಂತೆ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ಭಾರತಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಎಂಇಎಸ್‌ ಕಾಲೋನಿಯ ಸೇನಾ ವಸತಿ ಗೃಹದ ಆವರಣದಲ್ಲಿ ಗುರುವಾರ ನಡೆದಿದೆ. ಬಾಣಸವಾಡಿ ನಿವಾಸಿಗಳಾದ ಆಶಾಮ್ಮ (22) ಹಾಗೂ ಅಕ್ರಂ ಉಲ್‌ ಹಕ್‌ (22) ಮೃತ ದುರ್ದೈವಿಗಳು. ಎಂಇಎಸ್‌ ಕಾಲೋನಿಯ ಸೇನಾಧಿಕಾರಿಗಳ ವಸತಿ ಗೃಹದ ಹಳೇ ಕಾಂಪೌಂಡ್‌ ನವೀಕರಣ ಕಾಮಗಾರಿಯಲ್ಲಿ ಕಾರ್ಮಿಕರು ಗುರುವಾರ ಮಧ್ಯಾಹ್ನ ತೊಡಗಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಭೀಮಾಶಂಕರ್‌ ಗುಳೇದ್‌ ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಚಿತ್ರದುರ್ಗಾ ಜಿಲ್ಲೆ ಚಳ್ಳಕೆರೆ ತಾಲೂಕಿನ ಆಶಾಮ್ಮ ಹಾಗೂ ಸುನೀಲ್‌ ಕುಮಾರ್‌ ವಿವಾಹವಾಗಿದ್ದು, ಬಾಣವಾಡಿಯಲ್ಲಿ ದಂಪತಿ ನೆಲೆಸಿದ್ದರು. ಪಶ್ಚಿಮ ಬಂಗಾಳ ಮೂಲದ ಅಕ್ರಂ ಕೂಡಾ ಬಾಣಸವಾಡಿಯಲ್ಲಿ ನೆಲೆಸಿದ್ದ. ಕೆಲ ದಿನಗಳಿಂದ ಎಂಇಎಸ್‌ ಕಾಲೋನಿಯ 6 ಅಡಿ ಎತ್ತರದ ಹಳೇ ಕಾಂಪೌಂಡ್‌ ನವೀಕರಣ ಕಾಮಗಾರಿಯಲ್ಲಿ ಆಶಾಮ್ಮ ಹಾಗೂ ಅಕ್ರಂ ಸೇರಿದಂತೆ ನಾಲ್ವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಕುಸಿದ ನಿರ್ಮಾಣ ಹಂತದ ಗೋಡೆ, ಆರು ಕಾರ್ಮಿಕರ ಸಾವು

ಗುರುವಾರ ಮಧ್ಯಾಹ್ನ ಪ್ಲಾಸ್ಟಿಕ್‌ ಕೆಲಸ ಮಾಡುವಾಗ ಏಕಾಏಕಿ ಗೋಡೆ ಕುಸಿದು ಬಿದ್ದಿದೆ. ಆಗ ಅವಶೇಷಗಳಡಿ ಸಿಲುಕಿದ್ದ ಇಬ್ಬರನ್ನು ಕೂಡಲೇ ಸಹಕಾರ್ಮಿಕರು ರಕ್ಷಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತಲೆಗೆ ತೀವ್ರವಾದ ಪೆಟ್ಟಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಡಿಸಿಪಿ ಗುಳೇದ್‌ ಹೇಳಿದ್ದಾರೆ.

ಕಾಂಪೌಂಡ್‌ ಹಳೆಯದ್ದಾಗಿದ್ದರಿಂದ ಅದರ ನವೀಕರಣ ಮಾಡಲಾಗುತ್ತಿತ್ತು. ಕಾಂಪೌಂಡ್‌ ಹೊಂದಿಕೊಂಡೇ ಮರ ಇದ್ದು, ಕಾಂಪೌಂಡ್‌ ಮೇಲೆ ಮರ ವಾಲಿದ ಪರಿಣಾಮ ಅದು ಕುಸಿದಿರುವ ಸಾಧ್ಯತೆಗಳಿವೆ. ಆ ವೇಳೆ ಕೆಳಗೆ ಕುಳಿತು ಗಾರೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕಾಂಪೌಂಡ್‌ ಅವಶೇಷಗಳಡಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಪತ್ನಿಯ ಸಾವಿನ ಕೇಳಿ ಬರುವಾಗ ಅಪಘಾತ

ಕಾಂಪೌಂಡ್‌ ಕುಸಿದು ತಮ್ಮ ಸಾವನ್ನಪ್ಪಿದ ಸುದ್ದಿ ಕೇಳಿದ ಆಸ್ಪತ್ರೆಗೆ ಅವಸರದಲ್ಲಿ ಧಾವಿಸುವಾಗ ಮೃತ ಆಶಾಮ್ಮ ಪತಿ ಸುನೀಲ್‌ ಕುಮಾರ್‌ ಅವರು ಬೈಕ್‌ ಅಪಘಾತದಲ್ಲಿ ಗಾಯಗೊಂಡ ಘಟನೆ ನಡೆದಿದೆ. ಬಾಣಸವಾಡಿಯಲ್ಲಿ ಸುನೀಲ್‌ ಕುಮಾರ್‌ ಕೂಲಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಪತ್ನಿ ಕಾಪೌಂಡ್‌ ಕುಸಿದು ಗಾಯಗೊಂಡ ಬಗ್ಗೆ ಅವರಿಗೆ ಸಹ ಕಾರ್ಮಿಕರು ಕರೆ ಮಾಡಿ ತಿಳಿಸಿದ್ದಾರೆ. ಈ ಆಘಾತದ ಸುದ್ದಿ ತಿಳಿದ ಕೂಡಲೇ ಅವರು, ಬೈಕ್‌ನಲ್ಲಿ ಆಸ್ಪತ್ರೆಗೆ ಬರುವಾಗ ಸಣ್ಣ ಮಟ್ಟದ ಅಪಘಾತವಾಗಿ ಗಾಯಗೊಂಡಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪತ್ನಿ ಮೃತದೇಹ ಪಡೆಯಲು ಸುನೀಲ್‌ ಬಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.