ತಮಿಳುನಾಡಲ್ಲಿ ತಪ್ಪಿಸಿಕೊಂಡ ಉಗ್ರರು ಉಡುಪಿಯಲ್ಲಿ ಅರೆಸ್ಟ್
ತಮಿಳುನಾಡಿನಲ್ಲಿ ಉಗ್ರರು ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಇತ್ತೀಚೆಗಷ್ಟೇ ಹೈ ಅಲರ್ಟ್ ಘೋಷಿಸಲಾಗಿತ್ತು. ಈ ಘಟನೆಯ ಬೆನ್ನಲ್ಲೇ ಇದೀಗ ಉಡುಪಿಯಲ್ಲಿ ಮಂಗಳವಾರ ಮುಂಜಾನೆ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿ(ಜ.15): ತಮಿಳುನಾಡಿನಿಂದ ತಪ್ಪಿಸಿಕೊಂಡಿದ್ದ ಉಗ್ರರರನ್ನು ಉಡುಪಿಯಲ್ಲಿ ಬಂಧಿಸಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಉಗ್ರರು ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಇದೀಗ ಉಗ್ರರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ನಿಷೇಧಿತ ಅಲ್ ಉಮ್ಮಾಹ್ ಎಂಬ ಉಗ್ರ ಸಂಘಟನೆಯ ಇಬ್ಬರು ಸದಸ್ಯರನ್ನು ಉಡುಪಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿಕರು ಅಬ್ದುಲ್ ಶಮೀಮ್ (29) ಮತ್ತು ತೌಫೀಕ್ (27) ಎಂದು ಗುರುತಿಸಲಾಗಿದೆ. ಚೆನೈನ ಕ್ಯೂ ಬ್ರಾಂಚ್ ಪೊಲೀಸರಿಂದ ಬಂದ ಮಾಹಿತಿಯಂತೆ, ಈ ಶಂಕಿತ ಉಗ್ರರನ್ನು ಉಡುಪಿ ಪೊಲೀಸರು ಮುಂಜಾನೆ 6.30ಕ್ಕೆ ಇಲ್ಲಿನ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಬಂಧಿಸಿದ್ದು, ಅವರನ್ನು ತಮಿಳುನಾಡು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಗ್ಯಾಂಗ್‌ಸ್ಟರ್ ಪರಾರಿ: ಮಂಗಳೂರಲ್ಲಿ ಹೈಅಲರ್ಟ್
ಜ.7ರಂದು ತಮಿಳುನಾಡು ಕೇರಳ ಗಡಿಯಲ್ಲಿರುವ ಕಲಿಯಾಕ್ಕಾವಿಲೈ ಎಂಬಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿಲ್ಸನ್ ಎಂಬವರನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಸಿಸಿ ಕ್ಯಾಮರದಲ್ಲಿ ದಾಖಲಾಗಿದ್ದ ಈ ಘಟನೆಯ ಆರೋಪಿಗಳಾದ ತೌಫಿಕ್ ಮತ್ತು ಶಮೀಮ್ ತಲೆ ಮರೆಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ 4 ದಿನಗಳಿಂದ ಕರಾವಳಿಯಲ್ಲಿ ಹೈಅಲರ್ಟ್ ಘೋಷಿಸಲಾಗಿತ್ತು.
ಅವರು ಮಂಗಳವಾರ ರೈಲಿನಲ್ಲಿ ಮುಂಬೈಗೆ ಪರಾರಿಯಾಗುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದ ಕ್ಯೂ ಬ್ರಾಂಚ್ ಪೊಲೀಸರು ಅವರನ್ನು ಹಿಂಬಾಲಿಸಿ ರೈಲಿನಲ್ಲಿ ಪ್ರಯಾಣಿಸಿದ್ದರು. ಮಾಹಿತಿ ಖಚಿತವಾಗುತ್ತಿದ್ದಂತೆ ಉಡುಪಿ ಪೊಲೀಸರನ್ನು ಸಂಪರ್ಕಿಸಿ, ಅವರನ್ನು ಉಡುಪಿಯಲ್ಲಿ ರೈಲಿನಿಂದ ಇಳಿಸಿದ್ದಾರೆ.ಅವರಿಬ್ಬರೂ ತಮಿಳುನಾಡಿನ ನಿಷೇಧಿತ ಅಲ್ ಉಮ್ಮಾಹ್ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ.
ಉಗ್ರರಿಗೆ ಮನೆಯಲ್ಲೇ ಆಶ್ರಯ ಕೊಟ್ಟಿದ್ದ ಡಿವೈಎಸ್ಪಿ!
ಇನ್ನು ನಾಲ್ಕು ತಿಂಗಳಲ್ಲಿ ನಿವೃತ್ತರಾಗಲಿದ್ದ ಕೇರಳದ ಸಬ್ ಇನ್ಸ್ ಪೆಕ್ಟರ್ ವಿಲ್ಸನ್ ಅವರು ಹತ್ಯೆಯಾಗುವ ವಾರದ ಹಿಂದೆ ಕೆಲವು ಶಂಕಿತ ಉಗ್ರರನ್ನು ಬಂಧಿಸಿದ್ದರು. ಇದಕ್ಕೆ ಪ್ರತಿಕಾರವಾಗಿ ಅವರನ್ನು ಕೊಲೆ ಮಾಡಲಾಗಿತ್ತು.
ಇದೇ ಸಂದರ್ಭದಲ್ಲಿ ಕಳೆದರಡು ದಿನಗಳಿಂದ ತಮಿಳುನಾಡು ಪೊಲೀಸರು, ದೇಶದಲ್ಲಿ ಐಸಿಸ್ ಸಂಘಟನೆಯನ್ನು ಬಲಪಡಿಸುತ್ತಿದ್ದ ಮೆಹಬೂಬ್ ಪಾಷಾನ ಸಹಚರರನ್ನು ಡೆಲ್ಲಿ, ಬೆಂಗಳೂರು, ಕೋಲಾರ ಮತ್ತು ತಮಿಳುನಾಡುಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಅವರಿಗೂ ಅಲ್ ಉಮ್ಮಾಹ್ ಸಂಘಟನೆಯ ನಂಟು ಇರುವುದು ಪತ್ತೆಯಾಗಿದ್ದು, ಇದೀಗ ಉಡುಪಿಯಲ್ಲಿ ಬಂಧಿತರಿಗೂ ಮೆಹಬೂಬ್ ಪಾಷಾ ಮತ್ತು ಐಸಿಸ್ ಜೊತೆ ಇರುವ ನಂಟಿನ ಬಗ್ಗೆ ತನಿಖೆ ನಡೆಯುತ್ತಿದೆ.
ನಗರದಲ್ಲಿ ಎಲ್ಲೆಡೆ ಪೊಲೀಸ್ ತೀವ್ರ ನಿಗಾ ವಹಿಸಿದ್ದು, ಸಂಶಯಾಸ್ಪದವಾಗಿ ತಿರುಗುತಿದ್ದ ಇಬ್ಬರು ಯುವಕರು ಏನು ಕೇಲಿದರೂ ಬಾಯಿ ಬಿಡದ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಇಬ್ಬರನ್ನೂ ಗುಪ್ತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
"