ಬೆಳಗಾವಿ(ಆ.28): ಬೈಕ್‌ಗೆ ಗೂಡ್ಸ್‌ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ಸೈನಿಕರು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕೆಂಗಾನೂರ, ಬೆಳವಡಿ ಗ್ರಾಮಗಳ ನಡುವೆ ಮಂಗಳವಾರ ನಡೆದಿದೆ.

ಕೆಲ ದಿನಗಳ ಹಿಂದೆ ರಜೆ ಪಡೆದು ತನ್ನ ಕುಟುಂಬದೊಂದಿಗೆ ಕಾಲ ಕಳೆಯಲು ಬಂದಿದ್ದ ಪಟ್ಟಿಹಾಳ ಕೆ.ಬಿ.ಗ್ರಾಮದ ದಿಲಾವರ ಫಕೀರಸಾಬ ನದಾಫ (27), ಸಂಜು(ಕರೇಪ್ಪ) ಬಸಪ್ಪ ಕರೆಪ್ಪನವರ (31) ಮೃತಪಟ್ಟಯೋಧರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇವರು ತಮ್ಮ ಗ್ರಾಮದಿಂದ ಬೈಲಹೊಂಗಲ ಪಟ್ಟಣಕ್ಕೆ ಕೆಲಸದ ನಿಮಿತ್ತ ಬೈಕ್‌ ಮೇಲೆ ಹೋಗುತ್ತಿದ್ದರು. ಇದೆ ವೇಳೆ ಎದುರಿಗೆ ಬಂದ ಗೂಡ್ಸ್‌ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡರು. ನಂತರ ಅವರನ್ನು ಚಿಕಿತ್ಸೆಗಾಗಿ ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಈ ಕುರಿತು ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಜು(ಕರೇಪ್ಪ) ಬಸಪ್ಪ ಕರೆಪ್ಪನವರ ಇವರ ವಿವಾಹವಾಗಿದ್ದು ತಂದೆ, ತಾಯಿ ಇದ್ದಾರೆ. ಭಾರತೀಯ ಸೇನೆಯ ದೆಹಲಿಯ ಎಂಜಿನಿಯರ್‌ ರೆಜಿಮೆಂಟ್‌ದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರ ಇಬ್ಬರು ಸಹೋದರರು ಕೃಷಿ ಕೆಲಸ ಮಾಡುತ್ತಿದ್ದಾರೆ.

ಬೆಳಗಾವಿ: ಪ್ರವಾಹ ಸಂತ್ರ​ಸ್ತ​ರಿಗೆ ಚರ್ಮ​ರೋಗ ಬಾಧೆ..!

ದಿಲಾವರ ಫಕೀರಸಾಬ ನದಾಫ ಅವಿವಾಹಿತರಾಗಿದ್ದು, ಭಾರತೀಯ ಸೇನೆಯ ಭೂಪಾಲ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಹೋದರ ಮಕ್ತುಂಸಾಬ ಉತ್ತರ ಪ್ರದೇಶದ ಮಿರಟ್‌ ಸಿಗ್ನಲ್‌ ರೆಜಿಮೆಂಟ್‌ದಲ್ಲಿ 8 ವರ್ಷಗಳಿಂದ, ಮಲ್ಲಿಕಜಾನ ಜಮ್ಮುವಿನ ಕುಪವಾಡದಲ್ಲಿ 3 ವರ್ಷಗಳಿಂದ ಸೇವೆಯಲಿದ್ದಾರೆ.