ಜಮಖಂಡಿ(ಫೆ.24): ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಅವಘಡಗಳಿಂದ ಮೂವರು ಸಾನಪ್ಪಿದ ಘಟನೆ ಭಾನುವಾರ ನಡೆದಿವೆ.

ಟಂಟಂ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಬನಹಟ್ಟಿ-ರಬಕವಿ ತಾಲೂಕಿನ ಆಸಂಗಿ ಗ್ರಾಮದ ಗಣಪತಿ ಶಿವಪ್ಪ ನಾವಿ (60) ಟಂಟಂ ಸಾಗುತ್ತಿದ್ದಾಗ ಏಕಾಏಕಿ ಬಿದ್ದು ಗಾಯಗೊಂಡಿದ್ದ. ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಭಾನುವಾರ ಶಿವರಾತ್ರಿ ಅವಮಾಸ್ಯೆ ಕಾರಣ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಿಂದ ಎರಡು ಬೈಕ್‌ಗಳ ಮೂಲಕ ಜಮಖಂಡಿಯ ಕೊಣ್ಣೂರಿನ ದೇವಸ್ಥಾನಕ್ಕೆ ದರ್ಶನಕ್ಕೆಂದು ಹೋಗುತ್ತಿದ್ದಾಗ ಎದುರಿಗೆ ಬಂದ ಟಂಟಂಗೆ ಎರಡು ಬೈಕ್‌ಗಳು ಡಿಕ್ಕಿ ಹೊಡೆದಿವೆ. ಈ ವೇಳೆ ರಾಯಬಾಗ ತಾಲೂಕಿನ ಹಿಡಕಲ್‌ ಗ್ರಾಮದ ಭೀಮಪ್ಪ ದುರಗಪ್ಪ ಮಾಳಗೆನ್ನವರ (28) ಅಪಘಾತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನೂಬ್ಬ ತೀವ್ರಗಾಯಗೊಂಡಿದ್ದ ರಾಯಬಾಗ ತಾಲೂಕಿನ ಹಿಡಕಲ್‌ ಗ್ರಾಮದ ಶಾಂತಾ ಹಾಲಪ್ಪ ಕುಲ್ಲೊಳ್ಳಿ (45) 108 ತುರ್ತು ಚಿಕಿತ್ಸೆ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದಾಳೆ. 

ಇನ್ನೋರ್ವ ದ್ವಿಚಕ್ರ ಸವಾರ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಆನಂದ ಸುನೀಲ ಸಬಕಾಳೆ (26) ಈತನ ಸ್ಥಿತಿ ಗಂಭೀರವಾಗಿದೆ. ಇನ್ನೊಬ್ಬ ದ್ವಿಚಕ್ರ ಸವಾರ ನವೀನ ಹಾಲಪ್ಪ ಕುಲ್ಲೊಳ್ಳಿಗೆ ಗಾಯಗಳಾಗಿವೆ. ಈ ಕುರಿತು ಜಿಲ್ಲೆಯ ರಬಕವಿ-ಬನಹಟ್ಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸೈ ಧರ್ಮಟ್ಟಿ ತನಿಖೆ ನಡೆಸಿದ್ದಾರೆ.