ಚಾಮರಾಜನಗರ(ಡಿ.26): ಇಲ್ಲಿನ 150 ಎ ರಾಷ್ಟ್ರೀಯ ಹೆದ್ದಾರಿಯ ಪಾಳ್ಯಗೇಟ್‌ ಸಮೀಪ ಶುಕ್ರವಾರ ನಿಯಂತ್ರಣ ಕಳೆದುಕೊಂಡ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಮೂರು ತಿಂಗಳ ಮಗು ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ತಮಿಳುನಾಡು ಕೊಯಮತ್ತೂರಿನ ಉಕ್ಕಡಂನ ನಿವಾಸಿಯಾದ ಚಾಲಕ ಯಾಸೀನ್‌ ವಜೀರ್‌(51) ಸ್ಥಳದಲ್ಲೇ ಮೃತಪಟ್ಟರೆ, ಅವರ ಮೂರು ತಿಂಗಳ ಹೆಣ್ಣು ಮಗು ಈಝಾ ಫಾತಿಮಾ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಾವನಪ್ಪಿದೆ.
ಕಾರಿನಲ್ಲಿದ್ದ ಯಾಸೀನ್‌ ವಜೀರ್‌ ಅವರ ಪತ್ನಿ ರಾಬಿಯಾ ಬೀ ಅವರಿಗೆ ತೀವ್ರತರ ಗಾಯವಾಗಿದ್ದು, ಅವರ ಮಕ್ಕಳಾದ ಸಫ್ರೀನ್‌, ಸಾನಾ ವಾಜ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೂವರನ್ನು ಕೊಯಮತ್ತೂರಿನ ಕೆ.ಜಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಹಿರಿಯೂರು ಬಳಿ ಸಾರಿಗೆ ಬಸ್‌ ಪಲ್ಟಿ: ಇಬ್ಬರ ಸಾವು

ಶುಕ್ರವಾರ ಮಧ್ಯಾಹ್ನ ಕೊಯಮತ್ತೂರಿನಿಂದ ಮೈಸೂರಿಗೆ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ನಿಯಂತ್ರಣ ಕಳೆದುಕೊಂಡು ಕಾರು ಬಲಬದಿಯ ಕಬ್ಬಿಣದ ತಡೆಗೋಡೆಗೆ ಹೊಡೆದಿದ್ದು, ರಭಸಕ್ಕೆ ಹೊಂಡೈ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.