ಬೆಂಗಳೂರು(ಫೆ.27): ರಾಜ್ಯದಲ್ಲಿ ಎಚ್‌1ಎನ್‌1 (ಹಂದಿ ಜ್ವರ) ಪ್ರಕರಣ ಹೆಚ್ಚುತ್ತಿದ್ದು, ಕಳೆದ ಒಂದು ವಾರದಲ್ಲಿ ದಾವಣಗೆರೆ ಮತ್ತು ತುಮಕೂರಿನಲ್ಲಿ ತಲಾ ಒಬ್ಬರು ಬಲಿಯಾಗಿದ್ದಾರೆ. ಒಂದೂವರೆ ತಿಂಗಳಲ್ಲಿ 192 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಆತಂಕ ಸೃಷ್ಟಿ ಮಾಡಿದೆ.

ಆರೋಗ್ಯ ಇಲಾಖೆಯು ಫೆ.25ರಂದು ನಡೆಸಿದ ಸಭೆಯ ಬಳಿಕ ಅಂತಿಮಗೊಳಿಸಿರುವ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಈವರೆಗೂ 1,823 ಶಂಕಿತರ ಸ್ಕ್ವಾಬ್ (ಗಂಟಲಿನ ದ್ರವ) ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರು ಒಂದರಲ್ಲೇ ಅತಿ ಹೆಚ್ಚು 96 ಪ್ರಕರಣಗಳು ವರದಿಯಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲೇ 72 ಪ್ರಕರಣ ದೃಢಪಟ್ಟಿವೆ. ಉಡುಪಿಯಲ್ಲಿ 46, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13, ಬೆಂ. ಗ್ರಾಮಾಂತರ ಜಿಲ್ಲೆಯಲ್ಲಿ 7, ದಾವಣಗೆರೆಯಲ್ಲಿ 7 (1 ಸಾವು), ಶಿವಮೊಗ್ಗದಲ್ಲಿ 7, ತುಮಕೂರು 1 (1 ಸಾವು) ಸೇರಿದಂತೆ ಒಟ್ಟು 192 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2018ರಲ್ಲಿ 1,733 ಸೋಂಕಿತರಲ್ಲಿ 87 ಮಂದಿ ಹಾಗೂ 2019ರಲ್ಲಿ 2030 ಸೋಂಕಿತರಲ್ಲಿ 96 ಮಂದಿ ಮೃತಪಟ್ಟಿದ್ದರು. ಇದೀಗ ವರ್ಷದ ಆರಂಭದಲ್ಲೇ ಇಬ್ಬರು ಸಾವನ್ನಪ್ಪಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ಶ್ವಾಸಕೋಶದ ಸೋಂಕಿನೊಂದಿಗೆ ನೆಗಡಿ, ಕೆಮ್ಮು, ಜ್ವರದ ಜೊತೆಗೆ ಉಸಿರಾಟದ ತೊಂದರೆ, ತೀವ್ರವಾದ ಮೈ-ಕೈ ನೋವು ಕಾಣಿಸಿಕೊಳ್ಳುತ್ತದೆ. ಇಂತಹ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.