ಹೊಸಪೇಟೆ: ನಕಲಿ ದಾಖಲೆ ಸೃಷ್ಟಿ, ಉಪನೋಂದಣಾಧಿಕಾರಿ ಸೇರಿ ಇಬ್ಬರ ಬಂಧನ
ಪಾಯಲ್ ಜೈನ್ ಎಂಬವರು ನೀಡಿದ ದೂರಿನ ಅನ್ವಯ ಇಬ್ಬರು ಆರೋಪಿಗಳನ್ನ ಬಂಧಿಸಿದ ಪೊಲೀಸರು| ನಗರಸಭೆ ಅಧಿಕಾರಿ ಹಾಗೂ ಪ್ರಮುಖ ಇಬ್ಬರು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ ಪೊಲೀಸರು| ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದ ಘಟನೆ|
ಹೊಸಪೇಟೆ(ಡಿ.10): ನಕಲಿ ದಾಖಲೆಗಳನ್ನು ಸೃಷ್ಟಿಸಿ ನಗರದ ಗಾಂಧಿ ವೃತ್ತದ ಬಳಿ 16X65 ಅಳತೆಯ ಕಟ್ಟಡ ಮಾರಾಟ ಮಾಡಿದ ಆರೋಪದ ಮೇರೆಗೆ ಪ್ರಭಾರ ಉಪನೋಂದಣಾಧಿಕಾರಿ ಎನ್. ತಿಪ್ಪೇಸ್ವಾಮಿ ಹಾಗೂ ಸಂಡೂರಿನ ಪತ್ರ ಬರಹಗಾರ ಸಾಯಿನಾಥರಾವ್ ಸಿಂಧೆ ಎಂಬವರನ್ನು ಇಲ್ಲಿನ ಪಟ್ಟಣ ಠಾಣೆ ಪೊಲೀಸರು ವಂಚನೆ ಪ್ರಕರಣದಡಿ ಬುಧವಾರ ಬಂಧಿಸಿದ್ದಾರೆ.
ನಗರದ ನಿವಾಸಿ ಪಾಯಲ್ ಜೈನ್ ಎಂಬವರು ನೀಡಿದ ದೂರಿನ ಅನ್ವಯ ತನಿಖೆ ಕೈಗೊಂಡ ಪಟ್ಟಣ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ನಗರಸಭೆ ಅಧಿಕಾರಿ ಹಾಗೂ ಪ್ರಮುಖ ಇಬ್ಬರು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.
'ನಯಾ ಪೈಸೆ ಅನುದಾನ ಬಿಡುಗಡೆ ಮಾಡದಿರುವುದೇ ಬಿಜೆಪಿ ಸರ್ಕಾರದ ಸಾಧನೆ'
ಪ್ರಕರಣದ ವಿವರ:
ನಜೀರ್ ಅಹ್ಮದ್ ಎಂಬವರು ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು ಶಂಶಾದ್ ಬೇಗಂ ಅವರ ಹೆಸರಿನಲ್ಲಿದ್ದ ಆಸ್ತಿಯನ್ನು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಬಳಿಕ ತನ್ನದೆಂದು ಹೇಳಿ ಮಾರಾಟ ಮಾಡಿದ್ದು, ತಾನು ಖರೀದಿಸಿ ಮೋಸ ಹೋಗಿರುವುದಾಗಿ ಪಾಯಲ್ ಜೈನ್ ಪಟ್ಟಣ ಠಾಣೆಗೆ ದೂರು ನೀಡಿದ್ದರು. ನಕಲಿ ಫಾರಂ-3, ಋುಣಭಾರ ಪ್ರಮಾಣ ಪತ್ರ ಸೃಷ್ಟಿಸಲಾಗಿದ್ದು, ತಾವು ಗೊತ್ತಾಗದೇ 40 ಲಕ್ಷ ನೀಡಿ ಖರೀದಿಸಿ ಮೋಸ ಹೋಗಿದ್ದು, ಕ್ರಮ ಕೈಗೊಳ್ಳಬೇಕು ಎಂದು ಪಾಯಲ್ ಜೈನ್ ಕೋರಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ಇಬ್ಬರು ಆರೋಪಿಗಳ ಬಂಧಿಸಿದ್ದು, ಉಳಿದವರ ಬಂಧನಕ್ಕೆ ಜಾಲ ಬೀಸಿದ್ದಾರೆ.