ಚಿಕ್ಕಮಗಳೂರಿನಲ್ಲಿ ಮತ್ತಿಬ್ಬರಿಗೆ ಕೊರೋನಾ ಸೋಂಕು ದೃಢ
ಕಾಫಿನಾಡು ಚಿಕ್ಕಮಗಳೂರಲ್ಲಿ ಶುಕ್ರವಾರ ಮತ್ತಿಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚಿಕ್ಕಮಗಳೂರು(ಜೂ.20): ಜಿಲ್ಲೆಯಲ್ಲಿ ಶುಕ್ರವಾರ ಎರಡು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಆದರೆ, ಈ ಎರಡು ಪ್ರಕರಣಗಳು ನೆರೆಯ ಉಡುಪಿ ಜಿಲ್ಲೆಯಿಂದ ಬಂದವರಲ್ಲಿ ಪತ್ತೆಯಾಗಿದ್ದು, ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕಿನವರಾಗಿದ್ದಾರೆಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸದ್ಯ 8 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಇವರೆಲ್ಲ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ವಿಚಾರಣಾಧೀನ ಕೈದಿಗೆ ಸೋಂಕು:
ಸದ್ಯ ಪತ್ತೆಯಾಗಿರುವ ಎರಡು ಪ್ರಕರಣಗಳ ಪೈಕಿ ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಇದ್ದ ವಿಚಾರಣಾಧೀನ ಕೈದಿಯೂ ಒಬ್ಬನಾಗಿದ್ದಾನೆ. ಕೈದಿಯಲ್ಲಿ ಸೋಂಕು ಪತ್ತೆಯಾಗಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿದೆ. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಆತನನ್ನು ಬಂಧಿಸಿ ಕಳೆದ ಎರಡು ದಿನಗಳ ಹಿಂದೆ ಕಾರಾಗೃಹದಲ್ಲಿ ಇರಿಸಲಾಗಿತ್ತು. ಆರೋಗ್ಯದಲ್ಲಿ ಏರುಪೇರಾದ್ದರಿಂದ ಆತನ ಗಂಟಲ ದ್ರವವನ್ನು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಟ್ರೂನ್ಯಾಟ್‌ನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ವರದಿ ಬಂದಿದೆ. ತಕ್ಷಣ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಮತ್ತೆ ಪರೀಕ್ಷೆಗೆ ಒಳಪಡಿಸಿದಾಗ ಶುಕ್ರವಾರ ಪಾಸಿಟಿವ್ ವರದಿ ಬಂದಿದೆ. ಬಂಧಿಖಾನೆಯಲ್ಲಿ ಆತ ಇದ್ದಿದ್ದರಿಂದ ಇಲ್ಲಿರುವ ಇತರೆ ಕೈದಿಗಳು ಹಾಗೂ ಸಿಬ್ಬಂದಿಗೆ ತಲೆ ನೋವಾಗಿದ್ದು, ಕೈದಿಗೆ ಪಾಸಿಟಿವ್ ವರದಿ ಬರುತ್ತಿದ್ದಂತೆ ಸ್ಯಾನಿಟೈಸರ್ ಸಿಂಪಡಿಸಿ ಬಂಧಿಖಾನೆಯ ಒಳಾವರಣ ಸ್ವಚ್ಛಗೊಳಿಸಲಾಯಿತ್ತೆಂದು ಹೇಳಲಾಗುತ್ತಿದೆ.
ಜಿಲ್ಲೆಯ ಗರ್ಭಿಣಿಗೆ ಸೋಂಕು?
ಶೃಂಗೇರಿ: ತಾಲೂಕಿನ ವಿದ್ಯಾರಣ್ಯಪುರ ಪಂಚಾಯ್ತಿ ಉಳುವಳ್ಳಿಯ ಗರ್ಭಿಣಿ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ವಿದೇಶದಿಂದ ಆಗಮಿಸಿದ ಮಹಿಳೆ ಉಡುಪಿಯಲ್ಲಿ ಕೊರಂಟೈನ್‌ನಲ್ಲಿದ್ದು, ಕೊರಂಟೈನ್ ಮುಗಿಸಿದ ಈಕೆ ಪರೀಕ್ಷಾ ವರದಿ ಬರುವ ಮುನ್ನವೇ ಶೃಂಗೇರಿಗೆ ಬಂದಿದ್ದರೆನ್ನಲಾಗಿದೆ. ಆದರೆ, ಮಹಿಳೆಗೆ ಸ್ಥಳೀಯರ ಸಂಪರ್ಕವಾಗಿರಲಿಲ್ಲ ಎಂದು ತಿಳಿದು ಬಂದಿದೆ.
#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"