ಮೂವರು ಮೃತಪಟ್ಟ ದಕ್ಷಿಣ ಕನ್ನಡದಲ್ಲಿ ಮತ್ತೆರಡು ಪಾಸಿಟಿವ್‌..!

ಕೊರೋನಾ ಸೋಂಕಿನಿಂದಾಗಿ ಮೂರು ಸಾವು ಸಂಭವಿಸಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಎರಡು ಪಾಸಿಟಿವ್‌ ಪ್ರಕರಣ ಪತ್ತೆಯಾಗಿದ್ದು, ಇಬ್ಬರೂ 60 ವರ್ಷ ವಯಸ್ಸು ಮೇಲ್ಪಟ್ಟಪುರುಷರಾಗಿದ್ದಾರೆ. ಒಬ್ಬರು ಬಂಟ್ವಾಳ ಕೆಳಪೇಟೆ ನಿವಾಸಿಯಾಗಿದ್ದರೆ, ಇನ್ನೊಬ್ಬರು ಮಂಗಳೂರಿನ ಬೋಳೂರಿನವರು. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 24ಕ್ಕೆ ಏರಿದೆ.

 

Two more corona positive cases found in Mangalore

ಮಂಗಳೂರು(ಮೇ.02): ಕೊರೋನಾ ಸೋಂಕಿನಿಂದಾಗಿ ಮೂರು ಸಾವು ಸಂಭವಿಸಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಎರಡು ಪಾಸಿಟಿವ್‌ ಪ್ರಕರಣ ಪತ್ತೆಯಾಗಿದ್ದು, ಇಬ್ಬರೂ 60 ವರ್ಷ ವಯಸ್ಸು ಮೇಲ್ಪಟ್ಟಪುರುಷರಾಗಿದ್ದಾರೆ. ಒಬ್ಬರು ಬಂಟ್ವಾಳ ಕೆಳಪೇಟೆ ನಿವಾಸಿಯಾಗಿದ್ದರೆ, ಇನ್ನೊಬ್ಬರು ಮಂಗಳೂರಿನ ಬೋಳೂರಿನವರು. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 24ಕ್ಕೆ ಏರಿದೆ.

ಈಗ ಹೊಸದಾಗಿ ಪತ್ತೆಯಾದ ಎರಡು ಪ್ರಕರಣಗಳು ಕೂಡ ಪಡೀಲಿನ ಫಸ್ವ್‌ ನ್ಯೂರೋ ಆಸ್ಪತ್ರೆಗೆ ಪರೋಕ್ಷವಾಗಿ ಸಂಬಂಧಿಸಿದವುಗಳಾಗಿವೆ. ಈ ಮೂಲಕ ಒಟ್ಟು 24 ಪ್ರಕರಣಗಳಲ್ಲಿ ಫಸ್ವ್‌ ನ್ಯೂರೋ ಸಂಬಂಧಿತ 10 ಕೇಸುಗಳು ಇದುವರೆಗೆ ವರದಿಯಾದಂತಾಗಿದೆ.

ಮೊದಲ ಬಲಿ ಸಂತ್ರಸ್ತೆ ಸಂಬಂಧಿ:

ಶುಕ್ರವಾರ ಪತ್ತೆಯಾದ ರೋಗಿ (ಸಂಖ್ಯೆ 578) 69 ವರ್ಷದವರಾಗಿದ್ದು, ಜಿಲ್ಲೆಯಲ್ಲಿ ಮೊದಲು ಕೊರೋನಾಕ್ಕೆ ಬಲಿಯಾದ ಬಂಟ್ವಾಳ ಕೆಳಪೇಟೆಯ 50 ವರ್ಷ ವಯಸ್ಸಿನ ಮಹಿಳೆಯ ಸಂಬಂಧಿ ಎಂದು ತಿಳಿದುಬಂದಿದೆ. ಸೋಂಕಿತ ಮಹಿಳೆಯ ಪಕ್ಕದ ಮನೆ ನಿವಾಸಿಯಾಗಿದ್ದು, ಸೋಂಕಿತೆಯ ಮನೆಗೆ ಬಂದು ಹೋಗುತ್ತಿದ್ದುದರಿಂದ ಸೋಂಕಿಗೆ ತುತ್ತಾಗಿದ್ದಾರೆ (ದ್ವಿತೀಯ ಸಂಪರ್ಕ). ಆರಂಭದಲ್ಲಿ ಈ ಮಹಿಳೆ ಸಾವಿಗೀಡಾದ ಬಳಿಕ ಎರಡೇ ದಿನಗಳಲ್ಲಿ ಫಸ್ವ್‌ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಅತ್ತೆ ಕೂಡ ನಿಧನರಾಗಿದ್ದರು. ಆದರೆ ಈ ಮಹಿಳೆಯ ಪತಿ ಹಾಗೂ ಪುತ್ರನ ಗಂಟಲು ದ್ರವದ ಮಾದರಿಯ ಫಲಿತಾಂಶ ನೆಗೆಟಿವ್‌ ಬಂದಿದೆ.

ಸೋಂಕಿತೆಯ ಪತಿ

ಇನ್ನೊಂದು ಪ್ರಕರಣದಲ್ಲಿ ರೋಗಿ (ಸಂಖ್ಯೆ 579)ಯು 62 ವರ್ಷದವರು. ಬೋಳೂರಿನಲ್ಲಿ ಗುರುವಾರ ಸೋಂಕು ದೃಢಪಟ್ಟ58 ವರ್ಷ ವಯಸ್ಸಿನ ಮಹಿಳೆಯ ಪತಿ. ಈ ಮಹಿಳೆ ಫಸ್ವ್‌ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಲ್ಲಿಂದ ಗುಣಮುಖರಾಗಿ ಮನೆಗೆ ಮರಳಿದ್ದರು. ಕೆಲದಿನಗಳ ಬಳಿಕ ಅವರಲ್ಲಿ ಸೋಂಕಿನ ಲಕ್ಷಣಗಳು ಪತ್ತೆಯಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫಸ್ವ್‌ ನ್ಯೂರೋ ಆಸ್ಪತ್ರೆಯ ಆಯಾ ಒಬ್ಬರನ್ನು ಹೊರತುಪಡಿಸಿ ಇತರ ಸಿಬ್ಬಂದಿಗೆ ಸೋಂಕು ಇಲ್ಲದಿರುವುದು ಈಗಾಗಲೇ ಖಚಿತವಾಗಿದೆ. ಆದರೆ ಅಲ್ಲಿ ದಾಖಲಾದ ರೋಗಿಗಳಿಂದ ಸೋಂಕು ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಬಂಟ್ವಾಳ ಕೆಳಪೇಟೆಯಲ್ಲೇ 5 ಕೇಸ್‌:

ಬಂಟ್ವಾಳ ಕೆಳಪೇಟೆ ಈಗ ಕೊರೋನಾ ಹಾಟ್‌ಸ್ಪಾಟ್‌ ಆಗಿದೆ. ಇದುವರೆಗಿನ ಐದು ಪ್ರಕರಣಗಳು ಇಲ್ಲಿಂದಲೇ ವರದಿಯಾಗಿವೆ. ಅವರಲ್ಲಿ ಮೂವರು ಮೃತಪಟ್ಟಿದ್ದಾರೆ. ಮೃತ ಮೂವರೂ ಮಹಿಳೆಯರು. ಮೊದಲು ಮೃತಪಟ್ಟಮಹಿಳೆ ಹಾಗೂ ಆಕೆಯ ಅತ್ತೆಗೆ ಸೋಂಕು ಬಂದು ಮೃತಪಟ್ಟಬಳಿಕ ನೆರೆಮನೆಯ ನಿವಾಸಿ ತಾಯಿ-ಮಗಳಿಗೂ ಸೋಂಕು ದೃಢಪಟ್ಟಿತ್ತು. ತಾಯಿ ಮೃತಪಟ್ಟಿದ್ದರೆ, ಪುತ್ರಿ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂತ್ರಸ್ತರ ಊಟಕ್ಕೆ ಉಚಿತ ತರಕಾರಿ ನೀಡುವ ಬಸವರಾಜ್‌

ಶುಕ್ರವಾರ ಬಂಟ್ವಾಳ ಕೆಳಪೇಟೆ ಮತ್ತು ಮಂಗಳೂರಿನ ಬೋಳೂರು ನಿವಾಸಿಗೆ ಸೋಂಕು ಪತ್ತೆಯಾಗುವ ಮೊದಲೇ ಇವೆರಡು ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಈ ವ್ಯಕ್ತಿಗಳ ಸಂಪರ್ಕಕ್ಕೆ ಬಂದವರ ಹುಡುಕಾಟ ನಡೆಯುತ್ತಿದೆ.

ಮಂಗಳೂರು: 662 ವರದಿ ನಿರೀಕ್ಷೆ

ದ.ಕ. ಜಿಲ್ಲೆಯಲ್ಲಿ ಶುಕ್ರವಾರ 2 ಕೊರೋನಾ ಪಾಸಿಟಿವ್‌ ಕಂಡುಬಂದಿದ್ದು, 234 ನೆಗೆಟಿವ್‌ ವರದಿ ಬಂದಿದೆ. ಶುಕ್ರವಾರ ಮತ್ತೆ 351 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟು 662 ವರದಿಗಳು ಇನ್ನಷ್ಟೇ ಬರಬೇಕಿದೆ. ಇವುಗಳಲ್ಲಿ ಕೆಲವು ಸ್ಯಾಂಪಲ್‌ಗಳನ್ನು ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 39,909 ಮಂದಿಯ ಸ್ಕ್ರೀನಿಂಗ್‌ ನಡೆದಿದೆ. ಪರೀಕ್ಷೆಗೆ ಇದುವರೆಗೆ ಕಳುಹಿಸಿದ 2,809 ಸ್ಯಾಂಪಲ್‌ಗಳ ಪೈಕಿ 2,785 ವರದಿ ನೆಗೆಟಿವ್‌ ಮತ್ತು 24 ಪಾಸಿಟಿವ್‌ ಬಂದಿದೆ. ಈಗಾಗಲೇ 6,073 ಮಂದಿ 28 ದಿನಗಳ ಹೋಂ ಕ್ವಾರಂಟೈನ್‌ ಅವಧಿಯನ್ನು ಪೂರೈಸಿದ್ದಾರೆ. 8 ಮಂದಿ ನಿಗಾದಲ್ಲಿದ್ದಾರೆ.

ಬೋಳೂರಲ್ಲಿ ಅಂತ್ಯಸಂಸ್ಕಾರ

ಕೊರೋನಾ ಸೋಂಕಿನಿಂದ ಮೃತಪಟ್ಟಬಂಟ್ವಾಳ ಕೆಳಪೇಟೆ ನಿವಾಸಿ 67ರ ವೃದ್ಧೆಯ ಅಂತ್ಯ ಸಂಸ್ಕಾರ ಗುರುವಾರ ತಡರಾತ್ರಿ ಬೋಳೂರಿನ ಸರ್ಕಾರಿ ಚಿತಾಗಾರದಲ್ಲಿ ನೆರವೇರಿತು.

ಮತ್ತೊಬ್ಬರಿಗೆ ಕೊರೋನಾ ಸೋಂಕು ದೃಢ: ಹುಬ್ಬಳ್ಳಿ ಅಕ್ಷರಶಃ ತಲ್ಲಣ

ಪೊಲೀಸ್‌ ಭದ್ರತೆಯ ನಡುವೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟಮೊದಲ ಮಹಿಳೆಯ ಅಂತ್ಯಸಂಸ್ಕಾರ ಕೂಡ ಇದೇ ಚಿತಾಗಾರದಲ್ಲಿ ನಡೆದಿತ್ತು. ಬೋಳೂರಿನಲ್ಲಿ 58ರ ಮಹಿಳೆಗೆ ಗುರುವಾರ ಕೊರೋನಾ ಸೋಂಕು ದೃಢಪಟ್ಟಿರುವುದರಿಂದ ಬೆಳಗ್ಗಿನಿಂದಲೇ ಬೋಳೂರಿನಲ್ಲಿ ಸೀಲ್‌ಡೌನ್‌ ಮಾಡಲಾಗಿತ್ತು. ಹಾಗಾಗಿ ಈ ಮೊದಲಿನಂತೆ ಜನರ ವಿರೋಧ ಕಂಡುಬಂದಿಲ್ಲ.

Latest Videos
Follow Us:
Download App:
  • android
  • ios