ಉಡುಪಿ(ಮೇ.02): ವೈದ್ಯರು, ದಾದಿಯರು, ಪೊಲೀಸರು, ಅಧಿಕಾರಿಗಳು ಕೊರೋನಾ ವಿರುದ್ಧ ನೇರವಾದ ಹೋರಾಟಕ್ಕಿಳಿದಿದ್ದರೆ, ಅವರ ಹೋರಾಟದ ಹಿಂದೆ ನೆರವು ನೀಡುವ, ತೆರೆಮರೆಯ ಕೈಗಳು, ಪ್ರಚಾರ ಬಯಸದ ಮುಖಗಳು ನೂರಾರು ಇವೆ. ಅಂತಹವರಲ್ಲೊಬ್ಬರು ಇಲ್ಲಿನ ಬೀಡಿನಗುಡ್ಡೆಯ ತೆರೆದ ಮಾರುಕಟ್ಟೆಯ, ತೆರೆದ ಮನಸ್ಸಿನ ತರಕಾರಿ ವ್ಯಾಪಾರಿ ಬಸವರಾಜ್‌

ಜಿಲ್ಲೆಯಲ್ಲಿ ಕೊರೋನಾ ಲಾಕ್‌ಡೌನ್‌ನಿಂದ ತುತ್ತು ಊಟಕ್ಕೂ ಸಂಕಷ್ಟಕ್ಕೀಡಾಗಿರುವ ನಿರಾಶ್ರಿತರು, ವಲಸೆ ಕಾರ್ಮಿಕರಿಗೆ ಅನೇಕ ಸಂಘ-ಸಂಸ್ಥೆಗಳು ಉಚಿತ ಊಟದ ವ್ಯವಸ್ಥೆ ಮಾಡಿವೆ. ಅವರಿಗೆ ಈ ಊಟ ತಯಾರಿಸಲು 10-20 ಕಿಲೋಗೂ ಅಧಿಕ ತರಕಾರಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ ಈ ತರಕಾರಿ ವ್ಯಾಪಾರಿ.

ಮತ್ತೊಬ್ಬರಿಗೆ ಕೊರೋನಾ ಸೋಂಕು ದೃಢ: ಹುಬ್ಬಳ್ಳಿ ಅಕ್ಷರಶಃ ತಲ್ಲಣ

ಮೂಲತಃ ರಾಣೆಬೆನ್ನೂರಿನವರಾದ ಬಸವರಾಜ್‌ ಸುಮಾರು 25 ವರ್ಷಗಳಿಂದ ಉಡುಪಿಯಲ್ಲಿ ನೆಲೆಸಿದ್ದು, ಪ್ರತಿದಿನ ಬೆಳಗ್ಗೆ 4.30ಕ್ಕೆ ಶಿವಮೊಗ್ಗದಿಂದ ಲಾರಿಗಳಲ್ಲಿ ಬರುವ ತರಕಾರಿಗಳನ್ನು ಕೊಂಡುತಂದು, ಬೀಡಿನಗುಡ್ಡೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ದಿನವಿಡೀ ದುಡಿದು ತನ್ನ ಕುಟುಂಬದ ಹೊಟ್ಟೆಹೊರೆಯುತ್ತಿದ್ದಾರೆ.

ತನ್ನ ಕಷ್ಟಕರ ಜೀವನದ ಮಧ್ಯೆಯೂ ಉದಾರವಾಗಿ ಉಚಿತವಾಗಿ ತರಕಾರಿ ನೀಡುತ್ತಿರುವ ಬಗ್ಗೆ ಕೇಳಿದರೆ, ಪ್ರತಿದಿನ ಟಿ.ವಿ.ಯಲ್ಲಿ ನೋಡುವ ನಿರಾಶ್ರಿತರ, ಕಾರ್ಮಿಕರ ಕಷ್ಟಕ್ಕೆ ನನ್ನಿಂದ ಏನಾದರೂ ಅಳಿಲು ಸೇವೆ ಮಾಡಬೇಕು ಅಂತನ್ನಿಸಿತು. ನಾನು ತರಕಾರಿ ಮಾರಿ ಬರುವ ಅಲ್ಪಸ್ವಲ್ಪ ಆದಾಯದಲ್ಲಿ ನಾನು ನೆಮ್ಮದಿಯಾಗಿದ್ದೇನೆ. ಒಟ್ಟಿನಲ್ಲಿ ಈ ಕೊರೋನಾ ಹಾವಳಿ ಬೇಗ ಮುಗಿದು ಎಲ್ಲರೂ ನಿತ್ಯದಂತೆ ಜೀವನ ನಡೆಸಿದರೆ ಸಾಕು ಸಾರ್‌ ಎನ್ನುತ್ತಾರೆ

ಲಾಕ್‌ಡೌನ್‌ ಮಧ್ಯೆ ವೇತನ ಏರಿಕೆ: ಡಿಪ್ಲೋಮಾ ಕಾಲೇಜು ಬೋಧಕರಿಂದಲೇ ಅಸಮಾಧಾನ!

ನಿತ್ಯ ವ್ಯಾಪಾರಕ್ಕೆ ಹಾಕಿದ ಅಸಲಿನಷ್ಟುತರಕಾರಿ ಮಾರಾಟವಾದ ಮೇಲೆ, ಉಳಿದ ತರಕಾರಿಯನ್ನು ಹಸಿದ ಹೊಟ್ಟೆಗಳಿಗೆ ಊಟ ತಯಾರಿಸುವ ಸಂಘ ಸಂಸ್ಥೆಗಳಿಗೆ ನೀಡುತ್ತಿದ್ದೇನೆ. ಇದುವರೆಗೆ ನೀಡಿದ ತರಕಾರಿಯ ಮೊತ್ತದ ಬಗ್ಗೆ ಲೆಕ್ಕ ಹಾಕಿಲ್ಲ ಸಾರ್‌, ನನಗೆ ದೇವರು ಕೊಡುತ್ತಾನೆ. ಅದರಲ್ಲೇ ನಾನು ಕೊಡುತ್ತೇನೆ. ಇದರಲ್ಲಿ ನನ್ನ ದೊಡ್ಡತನ ಏನೂ ಇಲ್ಲ ಎಂದು ಬಸವರಾಜ್‌ ಮುಜುಗರದಿಂದಲೇ ಹೇಳುತ್ತಾರೆ

ಬೀಡಿನಗುಡ್ಡೆಯಲ್ಲಿ ತರಕಾರಿ ಮಾರುವ ಸ್ಥಳದಲ್ಲಿ ತಾವು ಮಾತ್ರವಲ್ಲದೇ ಉಳಿದವರಿಗೂ ಪ್ರತಿದಿನ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಲು ಸಹಕರಿಸುತ್ತಿರುವ ಬಸವರಾಜ್‌ ನೀಡುವ ತರಕಾರಿ, ನಿತ್ಯ ಆಹಾರ ತಯಾರಿಸುವ ಹತ್ತಾರು ಸಂಘ-ಸಂಸ್ಥೆಗಳ ಮೂಲಕ ಬಡವರ ಹೊಟ್ಟೆತಣಿಸುತ್ತಿವೆ.

-ಸುಭಾಶ್ಚಂದ್ರ ಎಸ್‌.ವಾಗ್ಳೆ