ಮಂಗಳೂರು(ಏ.16): ಮಹಾರಾಷ್ಟ್ರದ ಪುಣೆಯಲ್ಲಿ ಹೊಟೇಲ್‌ ಕಾರ್ಮಿಕರಾಗಿ ದುಡಿಯುತ್ತಿದ್ದ ಕರ್ನಾಟಕ ಮೂಲದ ಇಬ್ಬರು ಯುವಕರು ಅಲ್ಲಿ ಕೆಲಸವಿಲ್ಲದೆ, ತಿನ್ನಲು ಅನ್ನವೂ ಇಲ್ಲದೆ ಕಾಲ್ನಡಿಗೆಯಲ್ಲೇ ಊರಿಗೆ ಹೊರಟವರು ದಾರಿಮಧ್ಯೆ ಸತಾರಾ ಜಿಲ್ಲೆಯ ಗಡಿಯಲ್ಲಿ ಸಿಲುಕಿದ್ದಾರೆ. ಹಗಲು- ರಾತ್ರಿ ಎನ್ನದೆ 70 ಕಿ.ಮೀ. ದೂರ ನಡೆದುಕೊಂಡು ಬಂದವರು ಈಗ ಆಹಾರವಿಲ್ಲದೆ ನಡೆಯಲೂ ತ್ರಾಣವಿಲ್ಲದ ಸ್ಥಿತಿಯಲ್ಲಿದ್ದಾರೆ.

ಮಂಗಳೂರು ತಾಲೂಕು ಕುತ್ತಾರು ಮಜಲುತೋಟ ನಿವಾಸಿ ಮಹಮ್ಮದ್‌ ಸಿನಾನ್‌ (25) ಹಾಗೂ ಧಾರವಾಡ ಹೂವಿನಹಡಗಲಿ ನಿವಾಸಿ ನಾಗರಾಜ್‌ (23) ಈಗ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಖಂಡಾಲ ಎಂಬ ಹೈವೇ ಪಕ್ಕದ ದುರ್ಗಮ ಪ್ರದೇಶದ ಶೆಡ್‌ ವೊಂದರಲ್ಲಿ ವಾಸವಾಗಿದ್ದು ಸಹಾಯ ಯಾಚಿಸುತ್ತಿದ್ದಾರೆ.

ಬಿಸ್ಕತ್ತು ಪ್ಯಾಕೆಟ್‌ ಹಿಡಿದು ಹೊರಟೆವು

ಪುಣೆಯ ಬಾರ್ಣೇ ಎಂಬಲ್ಲಿ ಇವರಿಬ್ಬರು ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್‌ ಜಾರಿಯಾದ ಬಳಿಕ ಹೊಟೇಲ್‌ ಮುಚ್ಚಿತು. ಕೆಲವು ದಿನಗಳ ಕಾಲ ಹೊಟೇಲ್‌ ಮಾಲೀಕರು ಇವರಿಗೆ ಆಹಾರದ ವ್ಯವಸ್ಥೆ ಮಾಡಿದ್ದರು. ಕೊನೆಗೆ ಅವರೂ ಕೈಚೆಲ್ಲಿದರು. ಆಹಾರ ಇಲ್ಲದೆ ಅಲ್ಲೇ ಉಳಿಯುವುದಕ್ಕಿಂತ ಹೇಗಾದರೂ ಮಾಡಿ ಊರು ಸೇರುವ ತವಕದಲ್ಲಿ ಏ. 13ರಂದು ಮಧ್ಯಾಹ್ನ 2 ಗಂಟೆಗೆ ಇವರಿಬ್ಬರು ತಾಯ್ನಾಡಿನ ದಾರಿ ಹಿಡಿದಿದ್ದರು. ಕೈಯಲ್ಲಿ ಬಟ್ಟೆಬರೆ, ಬಿಸ್ಕೆಟ್‌ ಪ್ಯಾಕೆಟ್‌ ಬಿಟ್ಟರೆ ಬೇರೇನೂ ಇಲ್ಲ. ರಾತ್ರಿಯಿಡೀ ನಡೆದೇ ಹೊರಟರು. ಬೆಳಗಾಗುವ ಹೊತ್ತಿಗೆ 70 ಕಿ.ಮೀ. ದೂರದ ಸತಾರ ಜಿಲ್ಲೆಯ ಗಡಿಭಾಗ ಖಂಡಾಲ ತಲುಪಿದ್ದರು.

ಪೊಲೀಸರು ಹೊಡೆದರು:

ಯಾವುದಾದರೂ ಟ್ರಕ್‌, ಗಾಡಿ ಹಿಡಿದು ಊರು ಸೇರುವ ಯೋಚನೆ ಮಾಡಿದ್ದೆವು. ಆದರೆ ಯಾವ ಗಾಡಿಯವರೂ ನಿಲ್ಲಿಸಲಿಲ್ಲ. ಹಾಗಾಗಿ ನಡೆದುಕೊಂಡೇ ಬಂದೆವು. 2-3 ಚೆಕ್‌ ಪೋಸ್ವ್‌ ಬಳಿ ಹೇಗೋ ಪೊಲೀಸರ ಮನವೊಲಿಸಿ ದಾಟಿ ಮುಂದುವರಿದೆವು. ಒಂದು ಕಡೆಯಂತೂ ನಮಗೆ ಹೊಡೆದೂಬಿಟ್ಟರು. ‘ಬೇಕಾದರೆ ಹೊಡೆಯಿರಿ ಆದರೆ ನಮ್ಮನ್ನು ಕರ್ನಾಟಕ ಗಡಿ ದಾಟಿಸಿ ಎಂದು ಮನವಿ ಮಾಡಿದರೂ ಕೇಳಲಿಲ್ಲ’ ಎಂದು ಮಹಮ್ಮದ್‌ ಸಿನಾನ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಶೆಡ್‌ ವಾಸ, ಇರಲಾಗದ ಸಂಕಟ:

ಖಂಡಾಲಕ್ಕೆ ಮಂಗಳವಾರ ಬೆಳಗ್ಗೆ ತಲುಪಿದಾಗ ನಮ್ಮ ಸ್ಥಿತಿ ನೋಡಿ ಅಲ್ಲಿನ ಮನೆಯವರು ಊಟ ನೀಡಿದರು. ಸಂಜೆ ವೇಳೆಗೆ ಮತ್ತೆ ಕಾಲ್ನಡಿಗೆ ಮುಂದುವರಿಸಿದೆವು. ಆದರೆ 2 ಕಿ.ಮೀ. ನಡೆಯುವಷ್ಟರಲ್ಲಿ ಸುಸ್ತಾಗಿ ಅಲ್ಲಿನ ಪೆಟ್ರೋಲ್‌ ಬಂಕ್‌ ಬಳಿ ಕುಳಿತಿದ್ದೆವು. ನಮ್ಮನ್ನು ಗಮನಿಸಿದ ಅದೇ ಮನೆಯವರು ವಾಪಸ್‌ ಕರೆಸಿ ಶೆಡ್‌ ವೊಂದರಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟರು. ಆದರೆ ಕೊರೋನಾ ಭೀತಿಗೆ ಒಳಗಾದ ಅಲ್ಲಿನ ಗ್ರಾಮಸ್ಥರು ಆದಷ್ಟುಬೇಗ ಅಲ್ಲಿಂದ ತೆರಳುವಂತೆ ಹೇಳುತ್ತಿದ್ದಾರೆ ಎಂದು ಸಿನಾನ್‌ ಅಳಲು ತೋಡಿಕೊಂಡರು.

 

ದ.ಕ. ಹೆಲ್ಪ್‌ ಲೈನ್‌ ಸಂಪರ್ಕಿಸಿದರೆ - ಪುಣೆಯಲ್ಲೇ ಇರುತ್ತಿದ್ದಿದ್ದರೆ ಏನಾದರೂ ವ್ಯವಸ್ಥೆ ಮಾಡಬಹುದಿತ್ತು ಎನ್ನುತ್ತಿದ್ದಾರೆ. ದಿಕ್ಕೇ ತೋಚದಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ತಂದೆ ತಾಯಿಗೆ ಹೇಳಿಲ್ಲ...

ನಾನು ಹೀಗೆ ದಾರಿಮಧ್ಯೆ ಅನ್ನಾಹಾರ ಇಲ್ಲದೆ ಸಿಲುಕಿದ ವಿಷಯ ಗೊತ್ತಾದರೆ ತೀವ್ರ ಬೇಸರ ಮಾಡಿಕೊಳ್ಳುತ್ತಾರೆ ಎಂದು ತಂದೆ- ತಾಯಿಗೆ ಹೇಳಿಲ್ಲ. ಆದರೆ, ನನ್ನ ಅಣ್ಣಂದಿರಿಗೆ ಗೊತ್ತಿದೆ. ಕರೆತರಲು ಅವರೂ ಯತ್ನಿಸುತ್ತಿದ್ದಾರೆ. ನಾವಂತೂ ಇಲ್ಲಿ ಇರಲೂ ಆಗದೆ, ಹೋಗಲೂ ಆಗದಂತಹ ಸ್ಥಿತಿಯಲ್ಲಿದ್ದೇವೆ ಎಂದು ಮಹಮ್ಮದ್‌ ಸಿನಾನ್‌ ಹೇಳಿದ್ದಾರೆ.

-ಸಂದೀಪ್‌ ವಾಗ್ಲೆ