ಹುಕ್ಕೇರಿ [ಆ.24] : ಶೌಚಾಲಯದ ಕಿಟಕಿ ಸಲಾಕೆಗಳನ್ನು ಕಿತ್ತು ಹಾಕಿ ಇಬ್ಬರು ಕೈದಿಗಳು ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹಳೆ ತಹಸೀಲ್ದಾರ್‌ ಕಚೇರಿ ಆವರಣದಲ್ಲಿರುವ ಉಪ ಬಂದಿಖಾನೆಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಅನಿಲ ತಮ್ಮಾಣ್ಣಿ ಲಂಬುಗೋಳ (26), ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ಪರಶುರಾಮ ಅಶೋಕ ಕಮಟೇಕರ (19) ಪರಾರಿಯಾದ ಕೈದಿಗಳು. ಉಪ ಬಂದಿಖಾನೆಯ ಶೌಚಾಲಯದಲ್ಲಿ ಇರುವ ಕಿಟಕಿಯ ಸಲಾಕೆಗಳನ್ನು ಕಿತ್ತು ಹಾಕಿ ಪರಾರಿಯಾಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇವರ ವಿರುದ್ಧ ಚಿಕ್ಕೋಡಿ ಹಾಗೂ ಅಂಕಲಿ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಕೈದಿಗಳು ಪರಾರಿಯಾದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಜೈಲಿನಲ್ಲಿರುವ ಇನ್ನುಳಿದ ಕೈದಿಗಳನ್ನು ವಿಚಾರಣೆ ನಡೆಸಿದರು. ಜತೆಗೆ ಪೊಲೀಸರು ಶ್ವಾನ ದಳದೊಂದಿಗೆ ಕೈದಿಗಳು ಪರಾರಿಯಾದ ಸ್ಥಳಗಳನ್ನು ಹುಡುಕಾಟ ನಡೆಸಿದರು. ಈ ಕುರಿತು ಹುಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಕೈದಿಗಳ ಹುಡುಕಾಟ ನಡೆದಿದೆ.