ಕಾಕ್ಸ್‌ಟೌನ್‌ ನಿವಾಸಿಗಳಾದ ಯೂಸಫ್‌ ಖಾನ್‌ ಹಾಗೂ ಪಾರೇಶ್‌ ಮೃತರು. ಈ ಘಟನೆ ಸಂಬಂಧ ಟಿಪ್ಪರ್‌ ಲಾರಿ ಚಾಲಕ ಸುನೀಲ್‌ ಬಾಬು ರಾಥೋಡ್‌ ಬಂಧನವಾಗಿದೆ. 

ಬೆಂಗಳೂರು(ಜೂ.28):  ಒನ್‌ ವೇನಲ್ಲಿ ಬಂದು ಬೈಕ್‌ಗೆ ಟಿಪ್ಪರ್‌ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಹೋಟೆಲ್‌ ಕೆಲಸಗಾರರು ಸಾವನ್ನಪ್ಪಿರುವ ದಾರುಣ ಘಟನೆ ಪುಲಕೇಶಿ ನಗರ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

ಕಾಕ್ಸ್‌ಟೌನ್‌ ನಿವಾಸಿಗಳಾದ ಯೂಸಫ್‌ ಖಾನ್‌ (19) ಹಾಗೂ ಪಾರೇಶ್‌ (19) ಮೃತರು. ಈ ಘಟನೆ ಸಂಬಂಧ ಟಿಪ್ಪರ್‌ ಲಾರಿ ಚಾಲಕ ಸುನೀಲ್‌ ಬಾಬು ರಾಥೋಡ್‌ ಬಂಧನವಾಗಿದೆ. ಪುಲಕೇಶಿನಗರ ಸಮೀಪದ ಲಾಜರ್‌ ರಸ್ತೆಯ ಏಕಮುಖ ಸಂಚಾರ ಇದ್ದರೂ ಸಹ ಸೋಮವಾರ ರಾತ್ರಿ 2 ಗಂಟೆಯಲ್ಲಿ ಟಿಪ್ಪರ್‌ ಲಾರಿ ಚಾಲಕ ನುಗ್ಗಿದ್ದಾನೆ. ಅದೇ ವೇಳೆ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದ ಯೂಸಫ್‌ ಖಾನ್‌ ಹಾಗೂ ಪಾರೇಶ್‌ ಅವರಿಗೆ ಲಾರಿ ಡಿಕ್ಕಿಯಾಗಿದೆ. ಆಗ ಕೆಳಗೆ ಬಿದ್ದವರ ಮೇಲೆ ಲಾರಿ ಚಕ್ರಗಳು ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭೀಕರ ರಸ್ತೆ ಅಪಘಾತ: 'ದಿಲ್ ಸೆ ಬುರಾ ಲಗ್ತಾ ಹೇ' ಮೀಮ್ ಖ್ಯಾತಿಯ ಯೂಟ್ಯೂಬರ್ ದೇವರಾಜ್ ನಿಧನ

ಮೃತ ಪಾರೇಶ್‌ ಮೂಲತಃ ನೇಪಾಳ ದೇಶದವನಾಗಿದ್ದು, ಹಲವು ವರ್ಷಗಳಿಂದ ಕಾಕ್ಸ್‌ ಟೌನ್‌ನಲ್ಲಿ ಆತನ ಕುಟುಂಬ ನೆಲೆಸಿದೆ. ಮಾಸ್‌ ರಸ್ತೆಯ ಹೈದರಾಬಾದ್‌ ಬಿರಿಯಾನಿ ಹೋಟೆಲ್‌ನಲ್ಲಿ ಖಾನ್‌ ಹಾಗೂ ಪಾರೇಶ್‌ ಕೆಲಸ ಮಾಡುತ್ತಿದ್ದರು. ಎಂದಿನಂತೆ ರಾತ್ರಿ ಕೆಲಸ ಮುಗಿಸಿಕೊಂಡು 2 ಗಂಟೆಯಲ್ಲಿ ಅವರು ಮನೆಗೆ ಮರಳುತ್ತಿದ್ದರು. ಆಗ ಲಾಜರ್‌ ರಸ್ತೆಯಲ್ಲಿ ಏಕಾಏಕಿ ಎದುರಿನಿಂದ ಬಂದು ಬೈಕ್‌ಗೆ ಟಿಪ್ಪರ್‌ ಲಾರಿ ಚಾಲಕ ಸುನೀಲ್‌ ಗುದ್ದಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.