ಅರಸೀಕೆರೆ(ಮೇ.10): ಸಂಜೆ ಹಾಲು ಕರೆದು ಮೇವು ಹಾಕಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಎರಡು ಹಸುಗಳು ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಅರಸೀಕೆರೆ ತಾಲೂಕಿನ ಬೆಂಡೆಕೆರೆ ಗ್ರಾಮದಲ್ಲಿ ನಡೆದಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮೂಕ ಪ್ರಾಣಿಗಳಿಗೆ ವಿಷ ಉಣಿಸಿ ಸಾಯಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 

ಒಂದು ಹಸು ಗರ್ಭಧರಿಸಿತ್ತು, ಇನ್ನೊಂದು ಹಾಲು ಕೊಡುತ್ತಿತ್ತು. ಲಾಭದಾಯಕವಾಗಿದ್ದ ಈ ಎರಡು ಹಸುಗಳು ಮೃತಪಟ್ಟಿವೆ. ಈ ಹಸುಗಳ ಹಿಂಬದಿಗೆ ಕಟ್ಟಿ ಹಾಕಲಾಗಿದ್ದ ಎರಡೂವರೆ ತಿಂಗಳ ಕರು ಅದೃಷ್ಟವಶಾತ್‌ ಪಾರಾಗಿದೆ. ರಾತ್ರಿ ವೇಳೆ ತೋಟದಲ್ಲಿರುವ ಕೊಟ್ಟಿಗೆಯಲ್ಲಿ ಪ್ರತಿದಿನದಂತೆ ಹಸುಗಳು ಹಾಗೂ ಕರುವನ್ನು ಕಟ್ಟಿಬೀಗ ಹಾಕಲಾಗಿತ್ತು. 

ಸಹಜ ಸ್ಥಿತಿಯತ್ತ ಕರ್ನಾಟಕ; 'ಅನ್‌ಲಾಕ್'‌ ಗೆ ಬೇರೆ ಬೇರೆ ಜಿಲ್ಲೆಗಳ ಸ್ಪಂದನೆ ಹೀಗಿದೆ

ಬೆಳಗಿನ ಜಾವ ಎದ್ದು ನೋಡುವಷ್ಟರಲ್ಲಿ ಎರಡೂ ಹಸುಗಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಯಾರೋ ಕಿಡಿಗೇಡಿಗಳು ಬಾಳೆ ಹಣ್ಣಿನಲ್ಲಿ ವಿಷ ಬೆರೆಸಿ ಕೊಟ್ಟಿಗೆ ಛಾವಣಿಯಿಂದ ಎಸೆದಿದ್ದು, ಅಲ್ಲಲ್ಲಿ ವಿಷದ ಪುಡಿ ಚೆಲ್ಲಿದ ಗುರುತು ಇದೆ ಎಂದು ಮಾಲೀಕ ವಸಂತ್‌ ಕುಮಾರ್‌ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಾವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.