Asianet Suvarna News Asianet Suvarna News

ಬಳ್ಳಾರಿ: ಕೊರೋನಾ ಸೋಂಕಿತ ಮತ್ತಿಬ್ಬರು ಗುಣಮುಖ, ಆಸ್ಪತ್ರೆಯಿಂದ ಡಿಸ್ವಾರ್ಜ್‌

ಗುಣಮುಖರಲ್ಲಿ ಒ​ಬ್ಬ​ಳು 10 ವರ್ಷದ ಬಾಲಕಿ| 15 ಸೋಂಕಿತರಲ್ಲಿ ಈ ವರೆಗೆ 11 ಜನರು ಗುಣಮುಖ|ಸೋಂಕಿತರ ಸಂಖ್ಯೆ 4ಕ್ಕೆ ಇಳಿಕೆ| ಕೊರೋನಾ ಆಸ್ಪತ್ರೆಯಲ್ಲಿ ಗುಣಮುಖರನ್ನು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಹೂಗುಚ್ಛ ನೀಡಿ, ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು|

Two Coronavirus Patients Discharge from Covid Hospital in Ballari
Author
Bengaluru, First Published May 9, 2020, 9:47 AM IST

ಬಳ್ಳಾರಿ(ಮೇ.09): ಕೊರೋನಾ ವೈರಸ್‌ ಸೋಂಕಿತ ಇಬ್ಬರು ಗುಣಮುಖರಾಗಿ ಶುಕ್ರವಾರ ಬಿಡುಗಡೆಯಾಗಿದ್ದಾರೆ. ಇದರಿಂದ ಜಿಲ್ಲೆಯ 15 ಜನ ಸೋಂಕಿತರ ಪೈಕಿ 11 ಜನರು ಗುಣಮುಖಗೊಂಡಿದ್ದು ಸೋಂಕಿತರ ಸಂಖ್ಯೆ 4ಕ್ಕೆ ಇಳಿದಿದೆ. ಗುಣಮುಖರಾಗಿ ಬಿಡುಗಡೆಯಾದವರ ಇಬ್ಬರ ಪೈಕಿ 10 ವರ್ಷದ ಬಾಲಕಿಯೂ ಇದ್ದು, ಈ ಇಬ್ಬರು ಹೊಸಪೇಟೆ ನಗರ ನಿವಾಸಿಗಳು.

ಇಲ್ಲಿನ ಕೊರೋನಾ ಆಸ್ಪತ್ರೆಯಲ್ಲಿ ಗುಣಮುಖರನ್ನು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಹೂಗುಚ್ಛ ನೀಡಿ, ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು. ಇದೇ ವೇಳೆ ಮಾತನಾಡಿದ ಗುಣಮುಖ ಮಹಿಳೆಯರು, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಸ್ಮರಿಸಿದರಲ್ಲದೆ, ಮನೆಯ ಸದಸ್ಯರಂತೆ ನೋಡಿಕೊಂಡು, ಆರೋಗ್ಯ ಸುಧಾರಿಸಲು ಸಾಕಷ್ಟು ಪ್ರಯತ್ನ ಮಾಡಿದ ಎಲ್ಲ ವೈದ್ಯ ಸಿಬ್ಬಂದಿಗೂ ನಾವು ಋುಣಿಯಾಗಿದ್ದೇವೆ ಎಂದು ಭಾವುಕರಾದರು.
ಕೊರೋನಾ ಸೋಂಕು ಹರಡಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಬಹಳ ಗಾಬರಿಗೊಂಡಿದ್ದೆವು. ಮುಂದೇನು ಎಂಬ ಆತಂಕವೂ ಸೃಷ್ಟಿಯಾಗಿತ್ತು. ಆಗ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ನಮಗೆ ಕೌನ್ಸೆಲಿಂಗ್‌ ಮಾಡಿ ಧೈರ್ಯ ತುಂಬಿದರು. ನಿಮಗೇನೂ ಆಗುವುದಿಲ್ಲ. ನಾವಿದ್ದೇವೆ. ಧೈರ್ಯವಾಗಿರಿ. ಆದಷ್ಟು ಬೇಗ ಗುಣಮುಖರಾಗಿ ನೀವು ಮನೆಗೆ ತೆರಳುತ್ತೀರಿ ಎಂದು ಹೇಳಿದರು. ಊಟ, ಉಪಾಹಾರ ಸೇರಿದಂತೆ ಯಾವುದೇ ಸಮಸ್ಯೆಯಾಗಲಿಲ್ಲ. ಗುಣಮಟ್ಟದ ಆಹಾರ ನೀಡಿ ಕಾಳಜಿ ವಹಿಸಿದರು ಎಂದು ಸ್ಮರಿಸಿದರು.

ಕೂಡ್ಲಿಗಿಯಲ್ಲಿ ಓಡಾಡಿದ್ದ ದಾವಣಗೆರೆ ಕೊರೋನಾ ಸೋಂಕಿತ..!

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸರೆಡ್ಡಿ ಮಾತನಾಡಿ, ಗುಣಮುಖರಾಗಿ ಬಿಡುಗಡೆಗೊಂಡವರನ್ನು 14 ದಿನಗಳ ಕಾಲ ಹೋಂ ಕ್ವಾರಂಟೈನ್‌ ಹಾಗೂ ಸೆಲ್ಫ್‌ ರಿಪೋರ್ಟಿಂಗ್‌ ಮಾಡಲಾಗುವುದು. ಸ್ಥಳೀಯ ಪ್ರದೇಶದಲ್ಲಿ ಜಾಗೃತಿ ಮೂಡಿಸಲಾಗುವುದು. ಉಳಿದ ಸೋಂಕಿತರು ಸಹ ಆರೋಗ್ಯವಾಗಿದ್ದಾರೆ. ಅವರ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಅವರಿಗೆ ಬೇಕಾದ ಪೌಷ್ಟಿಕ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಡಾ. ಮಲ್ಲಿಕಾರ್ಜುನ, ಡಾ. ಅನಿಲ್‌, ಡಾ. ಲಿಂಗರಾಜ್‌, ಡಾ. ವಿಜಯಶಂಕರ್‌, ಡಾ. ಸುಜಾತಾ, ಡಾ. ಚಿತ್ರಶೇಖರ್‌, ಶಾಂತಾಬಾಯಿ ಮತ್ತಿತರರಿದ್ದರು.
 

Follow Us:
Download App:
  • android
  • ios