ಬಳ್ಳಾರಿ(ಮೇ.02): ಇಲ್ಲಿನ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಂಕಿತರು ಗುಣಮುಖರಾಗಿದ್ದು, ಶುಕ್ರವಾರ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯ 13 ಜನ ಸೋಂಕಿತರ ಪೈಕಿ ಈಗಾಗಲೇ ಐದು ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಶುಕ್ರವಾರ ಹೊಸಪೇಟೆಯ ಇಬ್ಬರ ಬಿಡುಗಡೆಯಿಂದಾಗಿ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆ ಆರಕ್ಕೆ ಇಳಿದಿದೆ. ಕೊರೋನಾ ವೈರಸ್‌ ಸೋಂಕಿತರ ಪೈಕಿ 11 ಜನರು ಹೊಸಪೇಟೆಯ ನಿವಾಸಿಗಳಾಗಿದ್ದರು. ಈ ಮುಂಚೆ ಬಿಡುಗಡೆಯಾದ ಜಿಲ್ಲೆಯ ಮೊದಲ ಸೋಂಕಿತರ ಮಕ್ಕಳು ಹಾಗೂ ಪ್ರಥಮ ಸಂಪರ್ಕಿತರಾಗಿದ್ದಾರೆ.

ಕೊರೋನಾ ಭೀತಿ: ಆಂಧ್ರಪ್ರದೇಶದಿಂದ ಬಂದವರಿಗೆ ಜ್ವರ, ಆತಂಕದಲ್ಲಿ ಜನತೆ

ಚಪ್ಪಾಳೆ ತಟ್ಟಿ ಅಭಿನಂದನೆ...

ಕೊರೋನಾ ಸೋಂಕಿನಿಂದ ಶುಕ್ರವಾರ ಬಿಡುಗಡೆಗೊಂಡ ಹೊಸಪೇಟೆಯ ಇಬ್ಬರನ್ನು ವೈದ್ಯರು, ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಆಸ್ಪತ್ರೆಯಿಂದ ಹೊರಗಡೆ ಸ್ವಾಗತ ಕೋರಿ, ಅಭಿನಂದಿಸಿದರು. ಇದೇ ವೇಳೆ ಹೂಗುಚ್ಛ, ಹಣ್ಣು-ಹಂಪಲು ನೀಡಿ ಶುಭ ಕೋರಿದರು. ನಂತರ ಪಡಿತರ ಕಿಟ್‌ ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ ಗುಣಮುಖರು, ನಮಗೂ ಕೊರೋನಾ ಸೋಂಕು ತಗುಲಿದೆ ಎಂದಾಗ ಭೀತಿಗೊಂಡಿದ್ದೆವು. ಆಸ್ಪತ್ರೆಗೆ ಬಂದಾಗ ನಮ್ಮ ಭಯ ದೂರವಾಯಿತು. ಆಸ್ಪತ್ರೆಯ ವೈದ್ಯರು, ವೈದ್ಯಾಧಿಕಾರಿಗಳು ಹಾಗೂ ಸ್ಥಳೀಯ ಸಿಬ್ಬಂದಿ ನಮಗೆ ನಿತ್ಯವೂ ಧೈರ್ಯ ತುಂಬುತ್ತಿದ್ದರು. ಊಟ, ಉಪಾಹಾರಕ್ಕೆ ಯಾವುದೇ ಕೊರತೆಯಾಗಲಿಲ್ಲ. ಕುಟುಂಬ ಸದಸ್ಯರಂತೆ ನೋಡಿಕೊಂಡರು. ನಿತ್ಯವೂ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡುತ್ತಿದ್ದರು. ಹೀಗಾಗಿ ನಮಗೆ ಯಾವ ತೊಂದರೆ ಎನಿಸಲಿಲ್ಲ ಎಂದು ತಿಳಿಸಿದರು.

28 ದಿನಗಳ ಕಾಲ ನಿಗಾ...

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸರೆಡ್ಡಿ ಮಾತನಾಡಿ, ಕೊರೋನಾ ಸೋಂಕಿತರು ಆಸ್ಪತ್ರೆಗೆ ಬಂದಾಗ ತುಂಬಾ ಭಯಭೀತರಾಗಿದ್ದರು. ಅವರಿಗೆ ಧೈರ್ಯ ನೀಡಿದೆವು. ಆಪ್ತ ಸಮಾಲೋಚನೆ ಮಾಡಿದೆವು. ಇದೀಗ ಗುಣಮುಖರಾಗಿ ಬಿಡುಗಡೆಗೊಂಡವರನ್ನು 14 ದಿನಗಳ ಕಾಲ ಹೋಂ ಕ್ವಾರಂಟೈನ್‌ ಮಾಡಲಾಗುವುದು. 14 ದಿನಗಳ ಸೆಲ್‌್ಫ ರಿಪೋರ್ಟಿಂಗ್‌ ಮಾಡಲಾಗುವುದು. ಜಿಲ್ಲಾ ಕಂಟ್ರೋಲ್‌ ರೂಂ ಮತ್ತು ರಾರ‍ಯಪಿಡ್‌ ರೆಸ್ಪಾನ್ಸ್‌ ತಂಡದಿಂದ 28 ದಿನಗಳ ಕಾಲ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.

ಕೊರೋನಾ ಸೋಂಕಿತರಾಗಿ ಗುಣಮುಖರಾಗಿರುವ ಕುಟುಂಬಗಳ ಸುತ್ತಮುತ್ತಲ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು. ಕೋವಿಡ್‌ ನೋಡಲ್‌ ಅಧಿಕಾರಿ ಡಾ. ಮಲ್ಲಿಕಾರ್ಜುನ, ಡಾ. ಅನಿಲ್‌, ಡಾ. ಲಿಂಗರಾಜು, ಡಾ. ವಿಜಯಶಂಕರ್‌, ಡಾ. ಸುನಿಲ್‌, ಡಾ. ವಿನಯ್‌, ಡಾ. ಸುಜಾತಾ, ಶುಶ್ರೂಷಾ ಅಧೀಕ್ಷಕಿ ಶಾಂತಾಬಾಯಿ, ಡಾ. ಚಿತ್ರಶೇಖರ್‌, ಡಾ.ಉಮಾಮಹೇಶ್ವರಿ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಹಾಜರಿದ್ದರು.

ಗುಣಮುಖರು ಬಿಡುಗಡೆ ತಂದ ನಿರಾಳ...

ಜಿಲ್ಲೆಯ ಕೊರೋನಾ ಸೋಂಕಿತರು ಬಿಡುಗಡೆಯಾಗುತ್ತಿರುವುದು ಸಾರ್ವಜನಿಕರಲ್ಲಿ ನಿರಾಳ ತಂದಿದೆ. ಸಿರುಗುಪ್ಪ ತಾಲೂಕಿನ ಹೊಸಹಳ್ಳಿ ಗ್ರಾಮವನ್ನು ಕಂಟೈನ್ಮೆಂಟ್‌ ಮುಕ್ತ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರು ಆದೇಶ ಮಾಡಿದ್ದಾರೆ. ಇನ್ನೆರೆಡು ದಿನಗಳಲ್ಲಿ ಯಾವುದೇ ಹೊಸ ಪ್ರಕರಣ ಕಂಡು ಬರದಿದ್ದರೆ ನಗರದ ಗುಗ್ಗರಹಟ್ಟಿಪ್ರದೇಶವೂ ಸಹ ಕಂಟೈನ್ಮೆಂಟ್‌ ಮುಕ್ತವಾಗಲಿದೆ. ಇನ್ನು ಹೊಸಪೇಟೆ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಕಂಡು ಬಂದಿರುವುದರಿಂದ ಕಂಟೈನ್ಮೆಂಟ್‌ ಮುಕ್ತ ಎಂದು ಘೋಷಣೆ ಮಾಡುವುದು ತಡವಾಗುವ ಸಾಧ್ಯತೆ ಇದೆ.