ರಾಜ್ಯದ ಎಲ್ಲಡೆ ಗಾಂಜಾ ಘಾಟು ಹೆಚ್ಚಾಗಿದೆ. ಎಲ್ಲಾ ಕಡೆಯೂ ಸದ್ದು ಮಾಡುತ್ತಿರುವ ಡ್ರಗ್ ಮಾಫಿಯಾ ಇದೀಗ ಇಲ್ಲಿಯೂ ಕಾಣಿಸಿಕೊಂಡಿದೆ.
ಹುಬ್ಬಳ್ಳಿ (ಸೆ.04): ರಾಜ್ಯದೆಲ್ಲೆಡೆ ಮಾದಕ ದ್ರವ್ಯ ಘಮಲು ಸುದ್ದಿ ಮಾಡುತ್ತಿರುವ ನಡುವೆ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಒಬ್ಬ ವಿದ್ಯಾರ್ಥಿ ಸೇರಿ ಇಬ್ಬರನ್ನು ಬಂಧಿಸಿರುವ ಇಲ್ಲಿನ ಉಪನಗರ ಪೊಲೀಸರು ಅವರಿಂದ 5 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಗದುಗಿನ ತಿಮ್ಮಾಪುರ ಗ್ರಾಮ ಮೂಲದ ಮಾರುತಿ ಹರಣಶಿಕಾರಿ (21) ಮತ್ತು ಈತನ ಸಂಬಂಧಿ ಚಂದಪ್ಪ ಹರಣಶಿಕಾರಿ (25) ಆರೋಪಿಗಳು. ಇವರನ್ನು ಇಲ್ಲಿನ ದೇಸಾಯಿ ಸರ್ಕಲ್ ಬಳಿ ಬಂಧಿಸಿ .97 ಸಾವಿರ ಮೌಲ್ಯದ 5 ಕೆಜಿ 100 ಗ್ರಾಂ ಗಾಂಜಾ, ಬೈಕ್ ವಶಕ್ಕೆ ಪಡೆಯಲಾಗಿದೆ. ಈ ಕುರಿತಂತೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಬಿ ಬಲೆಯಿಂದ ತಪ್ಪಿಸಿಕೊಳ್ಳಲು ರಾಗಿಣಿ ಖತರ್ನಾಕ್ ಪ್ಲಾನ್; ಏನ್ ಐಡ್ಯಾ ಅಂತೀರಾ..!
ಈ ಕುರಿತು ಮಾತನಾಡಿದ ಡಿಸಿಪಿ ಕೃಷ್ಣಕಾಂತ ಅವರು, ನಿಖರ ಮಾಹಿತಿ ಮೇರೆಗೆ ತಂಡ ರಚಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಸಾಧಾರಣ ಮಟ್ಟದ ಗಾಂಜಾ ಇದಾಗಿದೆ. ಇದರಲ್ಲಿನ ಪ್ರಮುಖ ಆರೋಪಿ ಮಾರುತಿ ಹರಣಶಿಕಾರಿ ಗದುಗಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಾಲೇಜಿನ ವಿದ್ಯಾರ್ಥಿ. ಇವರು ಹೊರಗಿನಿಂದ ಬಂದ ಮಕ್ಕಳಿಗೆ ಗಾಂಜಾ ಪೂರೈಸುತ್ತಿದ್ದರು. ಸಾರ್ವಜನಿಕರಲ್ಲಿ ಮಾದಕ ದ್ರವ್ಯದ ಕುರಿತು ಮಾಹಿತಿ ಇದ್ದರೆ ತಿಳಿಸಿ ಎಂದು ಮನವಿ ಮಾಡಿದರು.
