Asianet Suvarna News Asianet Suvarna News

ರಾಯಚೂರು: ಆತ್ಮಹತ್ಯೆ ನಂತರ ಅವ್ಯವಹಾರ ಬಯಲು

*  ನಕಲಿ ಸಹಿ ಬಳಸಿ ಸಂಬಂಧಿಕರ ಖಾತೆಗೆ ಸುಮಾರು ಲಕ್ಷ ಲಕ್ಷ ಜಮಾ ಮಾಡಿದ್ದ ಪ್ರಕಾಶಬಾಬು
*  ಡೆತ್‌ನೋಟ್‌ಆಧರಿಸಿ ಪೊಲೀಸರು ಹಾಗೂ ಎಸಿ ಕಚೇರಿಯಿಂದ ಪ್ರತ್ಯೇಕ ತನಿಖೆ
*  ಆತ್ಮಹತ್ಯೆಗೆ ಶರಣಾಗಿದ್ದ ಪ್ರಕಾಶಬಾಬು 
 

Twist on After Governnment Employee Committs Suicide in Raichur grg
Author
Bengaluru, First Published Sep 2, 2021, 2:58 PM IST

ರಾಮಕೃಷ್ಣ ದಾಸರಿ

ರಾಯಚೂರು(ಸೆ.02): ನಾಪತ್ತೆಯಾಗಿದ್ದ ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಕಾಶಬಾಬು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಿನೇ ದಿನೆ ತಿರುವು ಪಡೆದುಕೊಳ್ಳುತ್ತಿದೆ.

ಕಳೆದ ವಾರದಿಂದ ನೌಕರರ ಕಣ್ಮರೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯ ಒಂದೊಂದು ವಿಷಯಗಳು ಹೊರಬೀಳುತ್ತಿದ್ದವು. ಬೆಂಗಳೂರಿನ ಹೋಟೆಲ್‌ನಲ್ಲಿ ಸಿಬ್ಬಂದಿ ಪ್ರಕಾಶಬಾಬು ಆತ್ಮಹತ್ಯೆ ಮಾಡಿಕೊಂಡ ಮರುದಿನವೇ ಅನೇಕ ಅವ್ಯವಹಾರಗಳು ಬಯಲಾಗುತ್ತಿವೆ.

50 ಲಕ್ಷ ರು. ದುರ್ಬಳಕೆ: 

ರಾಯಚೂರು ವಿಭಾಗೀಯ ಸಹಾಯಕ ಆಯುಕ್ತರ ಕಚೇರಿಯ ಭೂ ಸ್ವಾಧೀನ ವಿಭಾಗದಲ್ಲಿ ಕಳೆದ ಹತ್ತು ವರ್ಷಗಳಿಂದ ಎಫ್‌ಡಿಎ ಆಗಿ ಕೆಲಸ ಮಾಡುತ್ತಿದ್ದ ಪ್ರಕಾಶಬಾಬು, ಕಳೆದ ಎರಡ್ಮೂರು ವರ್ಷಗಳಿಂದ ಹಲವಾರ ಅಕ್ರಮ, ಅವ್ಯವಹಾರಗಳನ್ನು ನಡೆಸಿದ್ದಾರೆ. ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಅರ್ಹ ರೈತರಿಗೆ ಸೇರಬೇಕಾದ ಹಣವನ್ನು ನಕಲಿ ಸಹಿ ಬಳಸಿ ತಮ್ಮ ಕುಟುಂಬಸ್ಥರ ಖಾತೆಗಳಿಗೆ ಆರ್‌ಟಿಜಿಎಸ್‌ಮಾಡಿಸಿದ್ದಾರೆ. ಸುಮಾರು 50 ಲಕ್ಷ ಮೊತ್ತವನ್ನು ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಸಹಾಯಕ ಅಯುಕ್ತರ ಕಚೇರಿಯಲ್ಲಿ ಲೆಕ್ಕಪರಿಶೋಧನೆ ಕಾರ್ಯ ನಡೆಯುವುದಕ್ಕೂ ಮುನ್ನ ಪ್ರಕಾಶಬಾಬು ತನ್ನ ಅಕ್ರಮ ಬಯಲಾಗುತ್ತದೆ ಎಂದು ಆತಂಕಗೊಂಡು ಕಚೇರಿಯಲ್ಲಿ ಕೀಲಿ ಹಾಗೂ ಡೆತ್‌ನೋಟ್‌ಇಟ್ಟು ನಾಪತ್ತೆಯಾಗಿದ್ದರು. ಅವರ ಪತ್ನಿ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಎರಡು ತನಿಖಾ ತಂಡವನ್ನು ರಚಿಸಿದ್ದು, ಆತ ಗೋವಾದಲ್ಲಿರುವ ಸುಳಿವು ಪಡೆದ ಪೊಲೀಸರು ಆತನ ಜಾಡು ಹಿಡಿದಿದ್ದರು. ಆದರೆ ಪ್ರಕಾಶ ಬಾಬು ಕಳೆದ ಆ.27ರಂದು ಬೆಂಗಳೂರಿಗೆ ತೆರಳಿ ಹೋಟೆಲ್‌ಮಾಡಿಕೊಂಡಿದ್ದು, ಅಲ್ಲಿಯ ಹೋಟೆಲ್‌ಸಿಬ್ಬಂದಿ ಆತನು ತಂಗಿದ್ದ ಕೊಠಡಿ ಪರಿಶೀಲಿಸಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು.

ರಾಯಚೂರು: ನಾಪತ್ತೆಯಾಗಿದ್ದ ಸರ್ಕಾರಿ ನೌಕರ ಬೆಂಗ್ಳೂರಲ್ಲಿ ಆತ್ಮಹತ್ಯೆ

ಘಟನೆ ಹಿಂದೆ ಅನುಮಾನ:

ಈ ಘಟನೆಯ ಹಿಂದೆ ಹಲವು ಅನುಮಾನಗಳು ಸಹ ವ್ಯಕ್ತವಾಗಿದ್ದವು. ಆದರೆ ಮೃತ ವ್ಯಕ್ತಿಯ ಕುಟುಂಬಸ್ಥರು ಯಾರಿಗೂ ಹೇಳಿಕೊಳ್ಳಲಾದ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಸಾವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಇತ್ತ ನೌಕರರ ಆತ್ಮಹತ್ಯೆ ಘಟನೆ ನಡೆದ ತಕ್ಷಣವೇ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದಿರುವ ಅಕ್ರಮವು ಸಹ ಬಹಿರಂಗಗೊಂಡಿದ್ದು, ಇನ್ನೂ ಅನೇಕ ಅಕ್ರಮಗಳಲ್ಲಿ ಮೃತ ವ್ಯಕ್ತಿ ಶಾಮೀಲಾಗಿದ್ದು ಅದರ ಬಗ್ಗೆಯೂ ತನಿಖೆ ನಡೆಸಲು ಇಲಾಖೆಯು ಮುಂದಾಗಿದೆ.

ಈ ಎಲ್ಲ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಎಸಿ ಹಾಗೂ ಪೊಲೀಸ್‌ಇಲಾಖೆಯು ಹೆಚ್ಚಿನ ತನಿಖೆ ನಡೆಸಲು ತೀರ್ಮಾನಿಸಿದೆ. ಪ್ರಕಾಶಬಾಬು ನಾಪತ್ತೆಯಾಗುವುದಕ್ಕೂ ಮುನ್ನ ಬರೆದಿಟ್ಟಿರುವ ಡೆತ್‌ನೋಟ್‌ಆಧರಿಸಿ ತನಿಖೆ ನಡೆಸಲು ಪೊಲೀಸ್‌ಇಲಾಖೆಯು ನಿರ್ಧರಿಸಿದ್ದು, ಕಳೆದ ವರ್ಷಗಳಿಂದ ಎಸಿ ಕಚೇರಿಯಲ್ಲಿ ಅವರು ಮಾಡಿದಂತಹ ಕೆಲಸ-ಕಾರ್ಯಗಳು ಹಾಗೂ ಅಕ್ರಮಗಳನ್ನು ಪತ್ತೆ ಹಚ್ಚಲು ಇತ್ತ ಸಹಾಯಕ ಆಯುಕ್ತರ ಕಚೇರಿಯ ಅಧಿಕಾರಿಗಳು ಸಹ ಮುಂದಾಗಿದ್ದಾರೆ.

ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿ ಪ್ರಕಾಶಬಾಬು ಕಳೆದ ಆ.23ರಿಂದ ಕಾಣೆಯಾಗಿದ್ದರು. ವೈಯಕ್ತಿಕ ಕಾರಣಕ್ಕಾಗಿ ಹೋಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಕುಟುಂಬ ಸದಸ್ಯರು ದೂರು ನೀಡಿದಾಗ ಅನುಮಾನ ಮೂಡಿತು. ಇಲಾಖೆಯಿಂದ ಹಣಕಾಸಿನ ವ್ಯವಹಾರ ಲೆಕ್ಕಪತ್ರಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಸುಮಾರು 40ರಿಂದ 50 ಲಕ್ಷ ಹಣ ದುರ್ಬಳಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ರಾಯಚೂರಿನ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ತಿಳಿಸಿದ್ದಾರೆ. 
 

Follow Us:
Download App:
  • android
  • ios