ಮಂಗಳೂರು (ಫೆ.04): ಖಾಸಗಿ ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಪೊಲೀಸರು ಕರೆದ ಸುದ್ದಿಗೋಷ್ಠಿ ವೇಳೆ ಯುವತಿ ಕಪಾಳಮೋಕ್ಷ ಮಾಡಿದ ಪ್ರಕರಣ ಈಗ ಮತ್ತೊಂದು ತಿರುವು ಪಡೆದಿದೆ.

ಮಾಧ್ಯಮ ಮತ್ತು ಪೊಲೀಸರ ಮುಂದೆ ಆರೋಪಿಗೆ ಕಪಾಳಕ್ಕೆ ಹೊಡೆದಿದ್ದುದು ಮಾನವ ಹಕ್ಕು ಉಲ್ಲಂಘನೆಯೆಂದು ಆರೋಪಿಸಿ ವ್ಯಕ್ತಿಯೊಬ್ಬರು ಮಂಗಳೂರು ಪೊಲೀಸ್‌ ಆಯುಕ್ತರು ಸೇರಿದಂತೆ ಪೊಲೀಸರ ವಿರುದ್ಧ ಮಂಗಳೂರಿನ ಜಿಲ್ಲಾ ಪ್ರಧಾನ ಹಾಗೂ ಸೆಶಸ್ಸ್‌ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.

ಮಂಗಳೂರಿನ ಬಸ್ಸಲ್ಲಿ ಎಲ್ಲರೆದುರೇ ಯುವತಿ ಜೊತೆ ಕಾಮುಕನ ಅಸಭ್ಯ ನಡೆ

ಮೂಲತಃ ಸುರತ್ಕಲ್‌ ಚೊಕ್ಕಬೆಟ್ಟು ನಿವಾಸಿಯಾಗಿರುವ, ಸದ್ಯ ದುಬೈನಲ್ಲಿ ಉದ್ಯೋಗದಲ್ಲಿ ಎಂಜಿನಿಯರ್‌ ಆಗಿರುವ ಜೊಹಾನ್‌ ಸೆಬಾಸ್ಟಿಯನ್‌ ಸಿಕ್ವೇರಾ (34), ಈ ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡ ವಿಚಾರವನ್ನು ಟೀಕಿಸಿ ಮತ್ತು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಇ-ಮೇಲ್‌ ಕಳುಹಿಸಿದ್ದಾರೆ. ನ್ಯಾಯಾಧೀಶರನ್ನು ಒಳಗೊಂಡಂತೆ ಮಂಗಳೂರು ಪೊಲೀಸ್‌ ಆಯುಕ್ತರು, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ಇ-ಮೇಲ್‌ನಲ್ಲಿ ಟ್ಯಾಗ್‌ ಮಾಡಲಾಗಿದೆ.

ಪೊಲೀಸ್‌ ಕಸ್ಟಡಿಯಲ್ಲಿರುವಾಗ ಆರೋಪಿಯ ಮೇಲೆ ಹಲ್ಲೆ ನಡೆಸುವುದು ಮಾನವ ಹಕ್ಕಿನ ಉಲ್ಲಂಘನೆ. ಮಂಗಳೂರು ಪೊಲೀಸ್‌ ಕಮಿಷನರನ್ನು ಕೋರ್ಟಿಗೆ ಕರೆಸಿ ವಿಚಾರಣೆ ನಡೆಸಬೇಕು. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹಲ್ಲೆ ಮಾಡಿದ್ದ ಯುವತಿ ವಿರುದ್ಧ ತನಿಖೆ ನಡೆಸಬೇಕು ಎಂದು ನ್ಯಾಯಾಧೀಶರಿಗೆ ಇ-ಮೇಲ್‌ ಮೂಲಕ ದೂರು ಸಲ್ಲಿಸಿದ್ದಾರೆ.