Asianet Suvarna News Asianet Suvarna News

ಬಿಜೆಪಿ ಸೇರಿದ್ದ ಮೂವರನ್ನು ಹೊತ್ತೊಯ್ದ ಕಾಂಗ್ರೆಸ್ : ಬೆನ್ನಲ್ಲೇ ಕೈ ಮುಖಂಡೆ ಕಮಲ ಪಾಳಯಕ್ಕೆ

ರಾಜಕೀಯ ಭಾರೀ ಟ್ವಿಸ್ಟ್‌ಗಳಾಗಿದ್ದು ಹೊಸ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ಅಧಿಕಾರಕ್ಕಾಗಿ ತೀವ್ರ ಪೈಪೋಟಿ ಶುರುವಾಗಿದೆ. 

Twist in KR Pete Municipality Election snr
Author
Bengaluru, First Published Oct 28, 2020, 4:19 PM IST

ವರದಿ : ಮಂಡ್ಯ ಮಂಜುನಾಥ

 ಮಂಡ್ಯ (ಅ.28):  ತೀವ್ರ ಕುತೂಹಲ ಕೆರಳಿಸಿರುವ ಕೆ.ಆರ್‌.ಪೇಟೆ ಪುರಸಭಾ ಚುನಾವಣೆ ಅ.31ರಂದು ನಡೆಯಲಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಅಧಿಕಾರ ಹಿಡಿಯಲು ತಂತ್ರ-ಪ್ರತಿತಂತ್ರ ರೂಪಿಸುತ್ತಿದ್ದು ಕ್ಷಣ ಕ್ಷಣಕ್ಕೂ ತೀವ್ರ ಕುತೂಹಲ ಕೆರಳಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರು ಪುರಸಭೆ ಅಧಿಕಾರ ಬಿಜೆಪಿ ಮಡಿಲಿಗೆ ಸುಲಭವಾಗಿ ಬೀಳುವುದು ಖಚಿತ ಎಂಬ ಭಾವನೆಯಲ್ಲಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಅಧಿಕಾರ ಸಿಗದಂತೆ ಮಾಡಲು ಕಾಂಗ್ರೆಸ್‌ ರಣತಂತ್ರ ರೂಪಿಸುತ್ತಾ ಪ್ರತಿಷ್ಠೆಯಾಗಿ ಪರಿಗಣಿಸಿದೆ.

'ಮುಂದೊಂದು ದಿನ ಸಿದ್ದರಾಮಯ್ಯನವರು ರಾಜಕಾರಣದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಆಗ್ತಾರೆ' ..

ಪುರಸಭೆಯಲ್ಲಿರುವ 23 ಸ್ಥಾನಗಳಲ್ಲಿ ಜೆಡಿಎಸ್‌-11, ಕಾಂಗ್ರೆಸ್‌ 10 ಹಾಗೂ ಬಿಜೆಪಿ 1 ಸ್ಥಾನದಲ್ಲಿ ಜಯಗಳಿಸಿದೆ. ಕೆ.ಸಿ.ನಾರಾಯಣಗೌಡರು ಬಿಜೆಪಿ ಸೇರಿದ ಬೆನ್ನಲ್ಲೇ ಜೆಡಿಎಸ್‌ನ 10 ಸದಸ್ಯರು ಕಮಲ ಪಾಳಯ ಸೇರಿಕೊಂಡಿದ್ದಾರೆ.

ಮಹಾದೇವಿ ಪರ ಸಚಿವರ ಒಲವು:

ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ನಟರಾಜು ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ನಿಂದ ಗೆಲುವು ಸಾಧಿಸಿರುವ ಮಹಾದೇವಿ ನಂಜುಂಡ ಈಗಷ್ಟೇ ಕಮಲ ಪಡೆ ಸೇರಿದ್ದು, ನಾರಾಯಣಗೌಡರೊಂದಿಗೆ ಹೆಚ್ಚು ವಿಶ್ವಾಸದಿಂದ ಇದ್ದಾರೆ. ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ಸಚಿವರು ಒಲವು ತೋರಿರುವುದು ಬಿಜೆಪಿ ಆಕಾಂಕ್ಷಿತ ಸದಸ್ಯ ನಟರಾಜು ಅವರನ್ನು ಕೆರಳಿಸಿದೆ.

ಕೈ ಪಡೆ ಸೇರಿಕೊಂಡ ನಟರಾಜು :  ಇದರ ಮುನ್ಸೂಚನೆ ಅರಿತ ಕಾಂಗ್ರೆಸ್‌ ಬಿಜೆಪಿಯಿಂದ ಗೆಲುವು ಸಾಧಿಸಿರುವ ನಟರಾಜು ಅವರನ್ನು ತಮ್ಮ ಕಡೆ ಸೆಳೆದುಕೊಂಡು ಅವರಿಗೆ ಬೆಂಬಲ ಘೋಷಿಸಿದೆ. ಚುನಾವಣೆಯಲ್ಲಿ ಅವರ ಪರ ಮತ ಚಲಾಯಿಸುವಂತೆ ಸದಸ್ಯರಿಗೆ ವಿಪ್‌ ಜಾರಿಗೊಳಿಸಿದೆ.

ಹತ್ತು ಸದಸ್ಯಬಲ ಹೊಂದಿರುವ ಕಾಂಗ್ರೆಸ್‌ ಪಕ್ಷದಿಂದ ಓರ್ವ ಸದಸ್ಯರನ್ನು ಬಿಜೆಪಿ ಹೈಜಾಕ್‌ ಮಾಡಿಸಿದೆ. ಉಳಿದ ಒಂಭತ್ತು ಸದಸ್ಯರೊಂದಿಗೆ ಜೆಡಿಎಸ್‌ನ ಒಬ್ಬ ಸದಸ್ಯ ಹಾಗೂ ಕಮಲ ಪಾಳಯ ಸೇರಿರುವ ಇಬ್ಬರು ಜೆಡಿಎಸ್‌ ಸದಸ್ಯರ ಬೆಂಬಲ ಸಿಗುವಂತೆ ನೋಡಿಕೊಳ್ಳಲು ಕಾಂಗ್ರೆಸ್‌ ತಂತ್ರ ಹೆಣೆದಿದೆ.

ಚುನಾವಣೆಯಲ್ಲಿ ರಾಜಕೀಯ ಜಾಣ್ಮೆ ಪ್ರದರ್ಶಿಸಿರುವ ಕಾಂಗ್ರೆಸ್‌ ತನ್ನ ಅಸ್ತಿತ್ವ ಕಾಪಾಡಿಕೊಳ್ಳುವ ದೃಷ್ಟಿಯಿಂದ ನಟರಾಜುರವರಿಗೆ ಬೆಂಬಲ ನೀಡುವುದರ ಮೂಲಕ ನಟರಾಜುರವರನ್ನು ಅಧ್ಯಕ್ಷರನ್ನಾಗಿ ಮಾಡಿ ಬಿಜೆಪಿಗೆ ಪ್ರತ್ಯುತ್ತರ ನೀಡಲು ಸಿದ್ದತೆ ಮಾಡಿಕೊಂಡಿದೆ.

ಅಜ್ಞಾತ ಸ್ಥಳದಲ್ಲಿ ಮೂವರು ಸದಸ್ಯರು:

ಜೆಡಿಎಸ್‌ನಿಂದ ಗೆದ್ದು ನಾರಾಯಣಗೌಡರ ಪರ ಗುರುತಿಸಿಕೊಂಡಿರುವ 20 ನೇ ವಾರ್ಡ್‌ನ ಗಾಯಿತ್ರಿ, 10 ನೇ ವಾರ್ಡ್‌ನ ಇಂದ್ರಾಣಿ ವಿಶ್ವನಾಥ್‌, 2 ನೇವಾರ್ಡ್‌ನ ಗಿರೀಶ್‌ ಈ ಮೂವರೂ ಬಿಜೆಪಿ ಪಾಳಯಕ್ಕೆ ಕೈಕೊಟ್ಟು ಕಾಂಗ್ರೆಸ್‌ ಸಂಪರ್ಕಕ್ಕೆ ಬಂದಿರುವುದು. ಅವರನ್ನು ಅಜ್ಞಾತ ಸ್ಥಳದಲ್ಲಿ ಇಟ್ಟಿರುವುದು ಬಿಜೆಪಿಗರ ಕಣ್ಣು ಕೆಂಪಗಾಗುವಂತೆ ಮಾಡಿದೆ.

ಇದೇ ವೇಳೆ 18 ನೇ ವಾಡಿನ ಕಾಂಗ್ರೆಸ್‌ ಸದಸ್ಯೆ ಕಲ್ಪನಾ ಅವರನ್ನು ಬಿಜೆಪಿ ಪಕ್ಷ ಹೈಜಾಕ್‌ ಮಾಡಿದೆ. ಸಂಪರ್ಕಕ್ಕೆ ಸಿಗದ ಮೂವರು ಸದಸ್ಯರನ್ನು ವಾಪಸ್‌ ಕರೆತರುವ ಎಲ್ಲಾ ಪ್ರಯತ್ನಗಳನ್ನು ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್‌ ಹೇಗಾದರೂ ಮಾಡಿ ಅಧಿಕಾರ ಪಡೆಯಬೇಕೆಂದು ಪಣತೊಟ್ಟು ಅಖಾಡದಲ್ಲಿ ಬಿರುಸಿನ ರಾಜಕೀಯ ಸ್ಪರ್ಧೆ ನೀಡುತ್ತಿದೆ. ಕಾಂಗ್ರೆಸ್‌ನ ಆಸೆ ಈಡೇರುವುದೇ ಅಥವಾ ನಾಟಕೀಯ ಬೆಳವಣಿಗೆಗಳು ನಡೆಯುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕಾರ ಕೈತಪ್ಪುವ ಸನ್ನಿವೇಶಗಳು ನಿರ್ಮಾಣವಾದಲ್ಲಿ ಸಣ್ಣಪುಟ್ಟ ಕಾರಣಗಳನ್ನು ನೆಪಮಾಡಿಕೊಂಡು ಚುನಾವಣಾಧಿಕಾರಿ ಮೂಲಕ ಚುನಾವಣೆಯನ್ನು ಮುಂದೂಡುವ ಬಗ್ಗೆ ಬಿಜೆಪಿ ಚಿಂತಿಸುತ್ತಿದೆ ಎನ್ನಲಾಗುತ್ತಿದೆ.

Follow Us:
Download App:
  • android
  • ios