Asianet Suvarna News Asianet Suvarna News

  ತುರುವೇಕೆರೆ : ಒತ್ತುವರಿಯಾಗಿದ್ದ ಸರ್ಕಾರಿ ಜಾಗ ತೆರುವು

  ಸಾರ್ವಜನಿಕರಿಗೆ ಓಡಾಡಲು ಇದ್ದ ರಸ್ತೆಗೆ ಅಡ್ಡಲಾಗಿ ಹೊಂಡವನ್ನು ತೋಡಿ ತೊಂದರೆ ನೀಡಿದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಸಪ್ತಾಶ್ರೀ ಮತ್ತು ತಾಲೂಕು ದಂಡಾಧಿಕಾರಿ ವೈ.ಎಂ. ರೇಣುಕುಮಾರ್ ಅವರು ತಮ್ಮ ಸಿಬ್ಬಂದಿಯೊಂದಿಗೆ ತೆರಳಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಘಟನೆ ನಡೆದಿದೆ.

Turuvekere Occupied government land will be cleared snr
Author
First Published Dec 28, 2023, 9:36 AM IST

  ತುರುವೇಕೆರೆ :  ಸಾರ್ವಜನಿಕರಿಗೆ ಓಡಾಡಲು ಇದ್ದ ರಸ್ತೆಗೆ ಅಡ್ಡಲಾಗಿ ಹೊಂಡವನ್ನು ತೋಡಿ ತೊಂದರೆ ನೀಡಿದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಸಪ್ತಾಶ್ರೀ ಮತ್ತು ತಾಲೂಕು ದಂಡಾಧಿಕಾರಿ ವೈ.ಎಂ. ರೇಣುಕುಮಾರ್ ಅವರು ತಮ್ಮ ಸಿಬ್ಬಂದಿಯೊಂದಿಗೆ ತೆರಳಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಘಟನೆ ನಡೆದಿದೆ.

ತಾಲೂಕಿನ ತಂಡಗ ಮತ್ತು ಹುಣಸೇ ಮರದಹಳ್ಳಿಗೆ ಸೇರಿದ ಸರ್ವೇ ನಂಬರ್‌ಗಳಲ್ಲಿ ಇದ್ದ ಸರ್ಕಾರಿ ಜಮೀನನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಅದರಂತೆಯೇ ಬೋರಮ್ಮ ಮತ್ತು ನವೀನ್ ಎಂಬುವವರು ತಮ್ಮದೇ ಜೆಸಿಪಿ ಸಹಾಯದಿಂದ ಕೆಲ ಗುಂಟೆಯ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿ ತೆಂಗಿನ ಸಸಿಗಳನ್ನು ನೆಟ್ಟಿದ್ದರು. ಆದರೆ ಇವರು ಹಲವಾರು ವರ್ಷಗಳಿಂದ ಸಾರ್ವಜನಿಕರು ಓಡಾಡಲು ಇದ್ದ ರಸ್ತೆಯನ್ನೂ ಸಹ ಮುಚ್ಚಿ ಓಡಾಡಲು ತೊಂದರೆ ನೀಡಿದ್ದಾರೆ ಎಂದು ಚಂದ್ರಕಲಾ ಎಂಬುವವರು ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರರಿಗೆ ದೂರು ಸಲ್ಲಿಸಿದ್ದರು.

ಇವರ ದೂರಿನನ್ವಯ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದರು. ಸರ್ವೇ ನಂಬರ್ ವ್ಯಾಪ್ತಿಯಲ್ಲಿ ಸುಮಾರು ೪೯ ಎಕರೆಯಷ್ಟು ಸರ್ಕಾರಿ ಜಮೀನನ್ನು ಅಕ್ರಮವಾಗಿ ಹಲವಾರು ಮಂದಿ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲದೇ ಸಾರ್ವಜನಿಕರ ಬಳಕೆಯ ಉದ್ದೇಶದಿಂದ ಈ ಹಿಂದೆ ಗ್ರಾಮ ಪಂಚಾಯ್ತಿಯಿಂದಲೂ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಆ ರಸ್ತೆಯನ್ನೇ ಮುಚ್ಚಿ ಸರ್ಕಾರಿ ಭೂಮಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸಾರ್ವಜನಿಕರು ದೂರಿದರು.

ತೆರವು: ಕೆಲವು ವರ್ಷಗಳಿಂದ ಹಲವಾರು ಮಂದಿ ಸರ್ಕಾರಿ ಗೋಮಾಳ ಮತ್ತು ಹುಲ್ಲುಬನ್ನಿ ಕಾವಲನ್ನು ಅನಧಿಕೃತವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಕಾನೂನಿನ ದುರುಪಯೋಗವಾಗಿದೆ. ತಂಡಗದ ಸರ್ವೇ ನಂಬರ್ ೩೫೫ ಮತ್ತು ಹುಣುಸೇಮರದಹಳ್ಳಿಯ ಸರ್ವೇನಂಬರ್ ೧೩ ಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಜಿಪಿಎಸ್ ಮುಖಾಂತರ ಅಳತೆ ಮಾಡಿಸಿ ಒತ್ತುವರಿ ಮಾಡಿರುವ ಎಲ್ಲಾ ಜಮೀನುಗಳನ್ನೂ ಸಹ ಸರ್ಕಾರದ ವಶಕ್ಕೆ ಪಡೆಯಲಾಗುವುದು ಎಂದು ಉಪ ವಿಭಾಗಾಧಿಕಾರಿ ಸಪ್ತಶ್ರೀ ತಿಳಿಸಿದರು.

ದುರುದ್ದೇಶ: ತಂಡಗ ಮತ್ತು ಹುಣುಸೇಮರದ ಹಳ್ಳಿಯ ಸರ್ವೇ ನಂಬರ್‌ಗಳಲ್ಲಿರುವ ಸುಮಾರು ೪೯ ಎಕರೆ ಜಮೀನನ್ನು ಹಲವಾರು ಹಣವಂತರು ಕಬಳಿಸಿದ್ದಾರೆ. ತಮಗೆ ಕೆಲವೇ ಗುಂಟೆ ಜಮೀನಿದೆ. ಜೀವನೋಪಾಯಕ್ಕಾಗಿ ಒಂದಿಷ್ಟು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿರುವುದು ಸರಿಯಷ್ಠೆ. ಆದರೆ ಈಗಾಗಲೇ ಹಲವಾರು ವರ್ಷಗಳಿಂದ ಸರ್ಕಾರಿ ಜಮೀನನ್ನು ಅಕ್ರಮವಾಗಿ ಉಳುಮೆ ಮಾಡುತ್ತಿರುವವರ ಬಗ್ಗೆ ತಾಲೂಕು ಆಡಳಿತ ಚಕಾರ ಎತ್ತುತ್ತಿಲ್ಲ ಎಂದು ಬೋರಮ್ಮ ಮತ್ತು ನವೀನ್ ಅಧಿಕಾರಿಗಳ ಸಮಕ್ಷಮವೇ ತಗಾದೆ ತೆಗೆದರು.

ಅಧಿಕಾರಿಗಳು ಬಡವರ ಮೇಲಷ್ಟೆ ತಮ್ಮ ಪರಾಕ್ರಮ ಮೆರೆಯುತ್ತಾರೆ. ಆದರೆ ಬಲಾಢ್ಯರು ಮತ್ತು ರಾಜಕೀಯ ಬೆಂಬಲ ಇರುವವರ ತಂಟೆಗೆ ಹೋಗುವುದಿಲ್ಲ ಎಂದು ಬೋರಮ್ಮ ಮತ್ತು ನವೀನ್ ಮಾಧ್ಯಮದ ಎದುರು ತಮ್ಮ ಅಳಲನ್ನು ತೋಡಿಕೊಂಡರು.

ತಮ್ಮ ಜಮೀನನ್ನು ತೆರವುಗೊಳಿಸಿದಂತೆ ಎಲ್ಲಾ ಬಲಾಢ್ಯರು ವಶಪಡಿಸಿಕೊಂಡಿರುವ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು. ಸರ್ಕಾರದ ಜಮೀನನ್ನು ಬಡವರಿಗೆ ಹಂಚಬೇಕು. ಹಲವರು ಮಂದಿ ಹಿಂದುಳಿದ ವರ್ಗಗಳ ಜನರು ಮತ್ತು ಆರ್ಥಿಕವಾಗಿ ಹಿಂದುಳಿದವರು ಅಲ್ಲದೇ ಜಮೀನೆ ಇಲ್ಲದವರೂ ಸಹ ಇದ್ದಾರೆ. ಅವರೆಲ್ಲರಿಗೂ ಸಹ ಸರ್ಕಾರದ ಜಮೀನನ್ನು ಸಮನಾಗಿ ಹಂಚಬೇಕೆಂದು ಆಗ್ರಹಿಸಿದ್ದಾರೆ.

ಆಗ್ರಹ: ತಂಡಗ ಮತ್ತು ಹುಣುಸೇಮರದಹಳ್ಳಿಯ ಸರ್ವೇ ನಂಬರ್ ನಲ್ಲಿ ಹಲವು ಮಂದಿ ಸಾರ್ವಜನಿಕರು ಬಳಸುತ್ತಿದ್ದ ರಸ್ತೆಯನ್ನೇ ಮುಚ್ಚಿದ್ದಾರೆ. ಅಲ್ಲದೇ ಸರ್ಕಾರದಿಂದ ಮಂಜೂರಾಗಿ ನಿರ್ಮಾಣ ಮಾಡಲಾಗಿದ್ದ ರಸ್ತೆಯನ್ನೂ ಸಹ ಹಾಳುಗೆಡವಿ ಜಮೀನನ್ನು ಮಾಡಿಕೊಂಡಿದ್ದಾರೆ. ಹಾಗಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆ ನಿರ್ಮಾಣ ಮಾಡಿಕೊಡಬೇಕೆಂದು ತಂಡಗದ ರಂಗಸ್ವಾಮಿ ಮತ್ತು ರಮೇಶ್ ಆಗ್ರಹಿಸಿದ್ದಾರೆ.

ಈ ಸಂಧರ್ಭದಲ್ಲಿ ಕಂದಾಯ ತನಿಖಾಧಿಕಾರಿಗಳಾದ ಮಲ್ಲಿಕ್, ಶಿವಕುಮಾರ್, ಸರ್ವೇ ಇಲಾಖಾ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಹಾಜರಿದ್ದರು.

Follow Us:
Download App:
  • android
  • ios