ಸೋಮರಡ್ಡಿ ಅಳವಂಡಿ

ಕೊಪ್ಪಳ(ನ.02): ಕೋವಿಡ್‌ನಿಂದಾಗಿ ಆದ ಲಾಕ್‌ಡೌನ್‌ನಿಂದ ದೇಶದ ಬಹುತೇಕ ನದಿ, ಕೊಳ್ಳಗಳು ಮಾಲಿನ್ಯಮುಕ್ತವಾಗಿವೆ. ಆದರೆ, ಹುಲಿಗೆಮ್ಮ ದೇವಸ್ಥಾನ ಬಳಿ ತುಂಗಭದ್ರಾ ನದಿಯುದ್ದಕ್ಕೂ ಈ ಕೋವಿಡ್‌ ಸಂಕಷ್ಟದಲ್ಲಿಯೂ ಕಸದ ರಾಶಿಯೇ ಬಿದ್ದಿದ್ದು, ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕೋವಿಡ್‌ ಸಂಕಷ್ಟ ಎದುರಾದಾಗಿನಿಂದ ಇದುವರೆಗೂ ಶ್ರೀ ಹುಲಿಗೆಮ್ಮ ದೇವಸ್ಥಾನದ ಬಾಗಿಲು ತೆರೆದಿಲ್ಲ. ಆದರೂ ಆಗಮಿಸುತ್ತಿರುವ ಭಕ್ತರ ಸಂಖ್ಯೆಗೇನೂ ಕೊರತೆ ಇಲ್ಲ. ಹೀಗಾಗಿ, ಬಂದ ಜನರು ಕಸವನ್ನು ದೇವಸ್ಥಾನದ ಪಕ್ಕದಲ್ಲಿಯೇ ಇರುವ ತುಂಗಭದ್ರಾ ನದಿಯಲ್ಲಿ ಎಸೆದಿದ್ದಾರೆ. ಪೂಜೆ, ಪುನಸ್ಕಾರ ಮಾಡಿದ ಬಳಿಕ ಕಸವನ್ನೆಲ್ಲ ನದಿಯಲ್ಲಿ ಹಾಕಿರುವುದರಿಂದ ತುಂಗಭದ್ರಾ ನದಿಯು ತಿಪ್ಪೆಗುಂಡಿಯಂತಾಗಿದೆ. ಇದು ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದೆ.

ದೇವಸ್ಥಾನದ ಬಾಗಿಲು ಹಾಕಿದ ಆಡಳಿತ ಮಂಡಳಿ ದೇವಸ್ಥಾನದ ಸುತ್ತಮುತ್ತ ಏನಾಗುತ್ತದೆ ಎಂದು ಗಮನಿಸುತ್ತಲೇ ಇಲ್ಲ. ಬಾಗಿಲು ಬಂದಾಗಿದ್ದರೂ ಬರುವ ಹತ್ತಾರು ಸಾವಿರ ಭಕ್ತರಿಗೆ ಪರ್ಯಾಯ ವ್ಯವಸ್ಥೆಯನ್ನೂ ಮಾಡಿಲ್ಲ. ಅಲ್ಲದೆ ಕೇವಲ ದೇವಸ್ಥಾನದ ಬಾಗಿಲು ಬಂದ್‌ ಮಾಡಿದ ಆಡಳಿತ ಮಂಡಳಿತ ದೇವಸ್ಥಾನಕ್ಕೆ ಬರುವ ಭಕ್ತರನ್ನು ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ. ಅಲ್ಲದೆ ಮೇಲುಸ್ತುವಾರಿಯಲ್ಲಿಯೂ ವಿಫಲವಾಗಿದ್ದರಿಂದ ತುಂಗಭದ್ರಾ ನದಿಯುದ್ದಕ್ಕೂ ಕಸ ರಾಶಿ ರಾಶಿ ಬಿದ್ದಿದೆ.

'ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದೆಲ್ಲವೂ ವೇದವಾಕ್ಯವಲ್ಲ'

ತುಂಗಭದ್ರಾ ನದಿ ಹೀಗಿತ್ತಾ? ಎಂದು ಅನುಮಾನ ಬರುವಷ್ಟುಕಸದ ರಾಶಿ ಬಿದ್ದಿದೆ. ಅದೆಲ್ಲವನ್ನು ನೋಡಿದರೆ ಗಂಗಾ ಸ್ನಾನ ತುಂಗಾ ಪಾನ ಎನ್ನುವ ನಾಣ್ನುಡಿಗೆ ಕಳಂಕ ಬರುವಂತೆ ಇದೆ. ಹುಲಿಗೆಮ್ಮ ದೇವಸ್ಥಾನದ ಪಕ್ಕದಲ್ಲಿ ಇರುವ ತುಂಗಭದ್ರಾ ನದಿಯ ನಾಲ್ಕಾರು ಕಿಲೋಮೀಟರ್‌ ಉದ್ದಕ್ಕೂ ಹೀಗೆ ಕಸದ ರಾಶಿ ಬಿದ್ದಿದೆ. ಹಿಂದೆಂದು ಈ ರೀತಿಯ ಕಸದ ರಾಶಿ ಬಿದ್ದಿರುವ ಉದಾಹರಣೆ ಇಲ್ಲ. ಈ ಬಾರಿ ದೇವಸ್ಥಾನದ ಬಾಗಿಲು ಬಂದ್‌ ಆದ ವೇಳೆಯಲ್ಲಿ ಈ ರೀತಿಯ ಕಸ ಬಿದ್ದಿದ್ದಾರೂ ಹೇಗೆ? ಇದೆಲ್ಲವನ್ನು ನೋಡಿಕೊಂಡು ದೇವಸ್ಥಾನ ಆಡಳಿತ ಮಂಡಳಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಏನು ಮಾಡುತ್ತಿದ್ದಾರೆ? ಇನ್ನು ನದಿಯ ಪಾವಿತ್ರ್ಯ ಕಾಪಾಡಬೇಕಾದ ಜಿಲ್ಲಾಡಳಿತ ಮಾಡುತ್ತಿರುವುದಾದರೂ ಏನು? ಅಯ್ಯೋ, ದೇವರೇ ಬಂದರೂ ತುಂಗಭದ್ರಾ ನದಿಯ ಮಾಲಿನ್ಯ ತಡೆಯಲು ಆಗುವುದಿಲ್ಲ! ಅಂಥ ದುಸ್ಥಿತಿಗೆ ಬಂದಿದೆ.

ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ:

ಹುಲಿಗೆಮ್ಮ ದೇವಸ್ಥಾನದ ಪಕ್ಕದಲ್ಲಿಯೇ ಹರಿಯುತ್ತಿರುವ ತುಂಗಭದ್ರಾ ನದಿಯನ್ನು ಈ ರೀತಿ ಮಲಿನ ಮಾಡಿದ್ದರೂ ಕಣ್ಣುಮುಚ್ಚಿ ಕುಳಿತಿರುವ ಆಡಳಿತವನ್ನು ನೋಡಿದರೆ ಇದು ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿ ಎನಿಸುತ್ತದೆ.
ದೇವಸ್ಥಾನಕ್ಕೆ ಬರುವ ಭಕ್ತರು ದೇವಸ್ಥಾನ ತೆರೆಯದೇ ಇರುವುದರಿಂದ ತುಂಗಭದ್ರಾ ನದಿಯ ದಡದಲ್ಲಿಯೇ ಎಲ್ಲ ಕರ್ಮಾದಿಗಳನ್ನು ಮಾಡುತ್ತಿದ್ದಾರೆ. ವಿಧಿ-ವಿಧಾನಗಳನ್ನು ಮಾಡುತ್ತಿದ್ದಾರೆ. ಇನ್ನು ಸುತ್ತಮುತ್ತಲ ಪ್ರದೇಶದವರು ಇಲ್ಲಿಗೆ ಕಸ ತಂದು ಹಾಕುತ್ತಿರುವಂತೆ ಕಾಣುತ್ತದೆ. ಇನ್ನು ದುರಂತ ಎಂದರೆ ದೇವಸ್ಥಾನ ಸಿಬ್ಬಂದಿಯೇ ಇತ್ತೀಚೆಗೆ ನಡೆದ ದಸರಾ ಕಾರ್ಯಕ್ರಮದ ಪೂಜೆ, ಪುನಸ್ಕಾರಗಳ ತ್ಯಾಜ್ಯಗಳನ್ನು ನದಿಗೆ ಎಸೆದಿದ್ದಾರೆ ಎನ್ನಲಾಗಿದೆ.

ಹುಲಿಗೆಮ್ಮ ದೇವಸ್ಥಾನದ ಬಾಗಿಲು ಬಂದಾಗಿದ್ದರೂ ತುಂಗಭದ್ರಾ ನದಿಯಲ್ಲಿ ಇಷ್ಟೊಂದು ಕಸದ ರಾಶಿ ಬಿದ್ದಿರುವುದು ಅಚ್ಚರಿ ಮೂಡಿಸಿದೆ. ಜನರಲ್ಲಿನ ಪ್ರಜ್ಞೆಯ ಕೊರತೆಯಿಂದಲೇ ಹೀಗಾಗಿದೆ ಎಂದು ಆಡಳಿತ ಮಂಡಳಿಯ ಸದಸ್ಯ ಟಿ. ಜನಾರ್ದನ ತಿಳಿಸಿದ್ದಾರೆ.

ಹುಲಿಗೆಮ್ಮ ದೇವಸ್ಥಾನದ ಬಳಿಯ ತುಂಗಭದ್ರಾ ನದಿಯನ್ನು ನೋಡಿದರೆ ವಾಕರಿಗೆ ಬರುತ್ತದೆ. ಅದು ನದಿಯ ಬದಲು ತಿಪ್ಪೆಗುಂಡಿಯಂತಾಗಿದೆ. ನದಿಯನ್ನು ದೇವರೇ ಕಾಪಾಡಬೇಕು ಎಂದು ಹೆಸರು ಹೇಳದ ಸ್ಥಳೀಯರು ಹೇಳಿದ್ದಾರೆ.