ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ಗೇಟ್‌ಗಳನ್ನು ಬದಲಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈ ಯೋಜನೆಗೆ ರಾಜ್ಯ ಸರ್ಕಾರ ನೀಡಿದ್ದ ₹10 ಕೋಟಿ ಅನುದಾನವನ್ನು ಹಿಂಪಡೆದಿದೆ. ಅನುದಾನದ ಗೊಂದಲದ ನಡುವೆಯೂ, ಮೇ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಹೊಸಪೇಟೆ: ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ಗೇಟ್‌ಗಳನ್ನು ಬದಲಿಸಿ ಹೊಸ ಗೇಟ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಈ ನಡುವೆ ರಾಜ್ಯ ಸರ್ಕಾರ ₹10 ಕೋಟಿ ಅನುದಾನ ಬಿಡುಗಡೆ ಮಾಡಿದ್ದನ್ನು ಮರಳಿ ಪಡೆದಿದೆ.

ಜಲಾಶಯದ ಗೇಟ್ ನಿರ್ಮಾಣ ಮತ್ತು ಅಳವಡಿಕೆಗೆ ರಾಜ್ಯ ಸರ್ಕಾರ ₹10 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಇನ್ನೊಂದೆಡೆ ಆಂಧ್ರಪ್ರದೇಶ ಸರ್ಕಾರ ಗೇಟ್ ಗಳ ನಿರ್ಮಾಣ ಮತ್ತು ಅಳವಡಿಕೆಗೆ ₹20 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ತುಂಗಭದ್ರಾ ಮಂಡಳಿ ನೌಕರರ ವೇತನಕ್ಕಾಗಿ ₹15 ಕೋಟಿ ಬಿಡುಗಡೆ ಮಾಡಿತ್ತು. ಇದರಲ್ಲಿ ಕರ್ನಾಟಕ ಸರ್ಕಾರ ತಾನು ನೀಡಿದ ಹಣದಲ್ಲಿ ₹10 ಕೋಟಿ ಮುರಿದುಕೊಂಡಿದೆ. ಇದರಿಂದ ತುಂಗಭದ್ರಾ ಮಂಡಳಿ ಕೂಡ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ₹10 ಕೋಟಿ ಮರಳಿ ನೀಡಲು ಕೋರಿದೆ ಎಂದು ಮಂಡಳಿ ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ತಿಳಿದು ಬಂದಿದೆ.

ಕ್ರಸ್ಟ್‌ಗೇಟ್‌ಗಳ ಎರೆಕ್ಷನ್ ಮತ್ತು ಡಿಸ್‌ಮೆಟಲಿಂಗ್ ಕಾರ್ಯಕ್ಕೆ ತಲಾ ಎರಡು ತಂಡಗಳಾಗಿ ಕಾರ್ಯನಿರ್ವಹಿಸುತ್ತಿವೆ. ಮೊದಲ ಬಾರಿಗೆ ಗೇಟ್ ಸಂಖ್ಯೆ 18ರಿಂದ ಕೆಲಸ ಆರಂಭಿಸಿದ್ದು, ಇದನ್ನು ಪೂರ್ಣಗೊಳಿಸಲು 8 ದಿನ ತೆಗೆದುಕೊಂಡಿದ್ದಾರೆ. ಗೇಟ್ ಸಂಖ್ಯೆ 15 ಕೆಲಸ ಸಹ ಪೂರ್ಣಗೊಳ್ಳುವ ಹಂತದಲ್ಲಿದೆ. ಆರಂಭದಲ್ಲಿ ತಿಂಗಳಲ್ಲಿ 6 ಗೇಟ್ ಅಳವಡಿಸುವುದಾಗಿ ಕಂಪನಿಯವರು ಹೇಳಿದ್ದರು. ಈಗ ಒಂದು ತಿಂಗಳಲ್ಲಿ 8 ಗೇಟ್‌ ಅಳವಡಿಸುವುದಾಗಿ ಹೇಳುತ್ತಿದ್ದಾರೆ. ತುಂಗಭದ್ರಾ ಜಲಾಶಯದ ಎಲ್ಲ 33 ನೂತನ ಕ್ರಸ್ಟ್‌ಗೇಟ್‌ ಅಳವಡಿಸಲು ಜೂನ್ ತಿಂಗಳೊಳಗಾಗಿ ಪೂರ್ಣಗೊಳಿಸಲು ಟೈಮ್ ಬಾಂಡ್ ನೀಡಲಾಗಿದ್ದು, ಮೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಟೆಂಡರ್ ಪಡೆದ ಕಂಪನಿಯವರು ತಿಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು.