TB ಡ್ಯಾಂ ಕ್ರಸ್ಟ್‌ಡ್ ಗೇಟ್‌ ಅಳವಡಿಕೆ ಹಿನ್ನೆಲೆಯಲ್ಲಿ, ತಜ್ಞರ ತಂಡವು ಎಡದಂಡೆ ಕಾಲುವೆ ಮಾರ್ಗವನ್ನು ಪರಿಶೀಲಿಸಿದೆ. ಮುಂದಿನ ಆರು ತಿಂಗಳು ಕಾಲುವೆಗೆ ನೀರು ಸ್ಥಗಿತಗೊಳ್ಳಲಿದ್ದು, ಈ ಅವಧಿಯಲ್ಲಿ ₹430 ಕೋಟಿ ವೆಚ್ಚದಲ್ಲಿ ಕಾಲುವೆಯ ದುರಸ್ತಿ ಮತ್ತು ಸುಧಾರಣಾ ಕಾರ್ಯಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ.

ವಿಜಯನಗರ: ತುಂಗಭದ್ರಾ ಜಲಾಶಯದಲ್ಲಿ ಕ್ರಸ್ಟ್‌ಡ್ ಗೇಟ್‌ಗಳನ್ನು ಅಳವಡಿಸುವ ಮಹತ್ವದ ಯೋಜನೆಯ ಹಿನ್ನೆಲೆ, ಕರ್ನಾಟಕ ನೀರಾವರಿ ನಿಗಮದ ತಾಂತ್ರಿಕ ಉಪಸಮಿತಿಯ ತಜ್ಞರ ತಂಡವು ಜಲಾಶಯ ಹಾಗೂ ಅದರ ಎಡದಂಡೆ ಕಾಲುವೆ ಮಾರ್ಗಗಳ ಸಮಗ್ರ ಪರಿಶೀಲನೆ ನಡೆಸಿತು. ಕ್ರಸ್ಟ್‌ಡ್ ಗೇಟ್‌ಗಳ ಬದಲಾವಣೆ ಮತ್ತು ಅಳವಡಿಕೆ ಕಾರ್ಯದ ಕಾರಣದಿಂದಾಗಿ, ಮುಂದಿನ ಆರು ತಿಂಗಳು ಕಾಲುವೆಗಳಿಗೆ ನೀರು ಹರಿಸುವುದನ್ನು ತಾತ್ಕಾಲಿಕವಾಗಿ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಅವಧಿಯನ್ನು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ, ತುಂಗಭದ್ರಾ ಎಡದಂಡೆ ಕಾಲುವೆಗಳಲ್ಲಿರುವ ವಿವಿಧ ತಾಂತ್ರಿಕ ತೊಂದರೆಗಳನ್ನು ನಿವಾರಿಸಲು ದುರಸ್ತಿ ಮತ್ತು ಸುಧಾರಣಾ ಕೆಲಸಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ.

ಜಿಲ್ಲಾವಾರು ಪರಿಶೀಲನೆ

ಈ ಪರಿಶೀಲನೆಗೆ ಕರ್ನಾಟಕ ನೀರಾವರಿ ನಿಗಮದ ತಾಂತ್ರಿಕ ಉಪಸಮಿತಿಯ ಅಧ್ಯಕ್ಷರಾದ ಜಿ.ಟಿ. ಚಂದ್ರಶೇಖರಪ್ಪ ಅವರ ನೇತೃತ್ವದಲ್ಲಿ ತಜ್ಞರ ತಂಡ ಆಗಮಿಸಿತ್ತು. ತಂಡವು ಕೊಪ್ಪಳ ಜಿಲ್ಲೆಯ ಹಿಟ್ನಾಳ್, ಗಂಗಾವತಿ ತಾಲ್ಲೂಕಿನ ಪಾಪಯ್ಯ ಸುರಂಗ, ಹಾಗು ರಾಯಚೂರು ಜಿಲ್ಲೆಯ ಕೆಲ ಭಾಗಗಳಲ್ಲಿ ಸ್ಥಳೀಯ ವೀಕ್ಷಣೆ ನಡೆಸಿ, ಪ್ರಸ್ತುತ ಸ್ಥಿತಿ ಹಾಗೂ ದುರಸ್ತಿ ಅಗತ್ಯಗಳ ಕುರಿತು ಮಾಹಿತಿ ಸಂಗ್ರಹಿಸಿದೆ. ಈ ಪರಿಶೀಲನಾ ತಂಡದೊಂದಿಗೆ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಕೂಡ ಹಾಜರಿದ್ದು, ಸ್ಥಳೀಯ ರೈತರು ಹಾಗೂ ನೀರಾವರಿ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.

ತುಂಗಭದ್ರಾ ಎಡದಂಡೆ ಕಾಲುವೆ ಸುಮಾರು 241 ಕಿಲೋಮೀಟರ್ ಉದ್ದವಿದ್ದು, 6.30 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುವ ಪ್ರಮುಖ ಕಾಲುವೆಯಾಗಿದೆ. ಆದರೆ ವರ್ಷಗಳ ಹಿಂದೆ ನಿರ್ಮಿಸಲಾದ ಈ ಕಾಲುವೆಯಲ್ಲಿ ಈಗ ಹಲವು ತಾಂತ್ರಿಕ ಹಾಗೂ ರಚನಾತ್ಮಕ ಸಮಸ್ಯೆಗಳು ಉಂಟಾಗಿದ್ದು, ಸಮಗ್ರ ದುರಸ್ತಿ ಅಗತ್ಯವಾಗಿದೆ. ಇದೀಗ ಕಾಲುವೆಗೆ ನೀರು ಬಿಡದ ಅವಧಿ ದೊರೆತಿರುವುದರಿಂದ ದುರಸ್ತಿ ಕಾರ್ಯಕ್ಕೆ ಇದು ಉತ್ತಮ ಅವಕಾಶವಾಗಿದೆ.

ಸುಮಾರು ₹430 ಕೋಟಿ ವೆಚ್ಚ

ಈ ದುರಸ್ತಿ ಹಾಗೂ ಸುಧಾರಣಾ ಕಾರ್ಯಗಳಿಗಾಗಿ ಈಗಾಗಲೇ ಸುಮಾರು ₹430 ಕೋಟಿ ವೆಚ್ಚದ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ. ತಜ್ಞರ ತಂಡ ತಮ್ಮ ಪರಿಶೀಲನಾ ವರದಿಯನ್ನು ಸಲ್ಲಿಸಿದ ನಂತರ, ಸರ್ಕಾರದ ಸಂಪುಟದಲ್ಲಿ ಒಪ್ಪಿಗೆ ಪಡೆದು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಿಶೀಲನೆಯ ಭಾಗವಾಗಿ, ಪಾಪಯ್ಯ ಸುರಂಗ ಮಾರ್ಗದ ಸ್ಥಿತಿಗತಿಯ ಮೇಲೂ ವಿಶೇಷ ಗಮನ ಹರಿಸಲಾಯಿತು. ಸುಮಾರು ಒಂದು ಕಿಲೋಮೀಟರ್ ಉದ್ದದ ಈ ಸುರಂಗದ ಮೂಲಕ ಪ್ರಸ್ತುತ 4,200 ಕ್ಯೂಸೆಕ್ ಪ್ರಮಾಣದ ನೀರು ಮಾತ್ರ ಹರಿಯುತ್ತಿದೆ. ಸುರಂಗವನ್ನು ಅಗಲಗೊಳಿಸಿದಲ್ಲಿ 5,000 ಕ್ಯೂಸೆಕ್ ವರೆಗೆ ನೀರು ಹರಿಸಲು ಸಾಧ್ಯವಾಗಲಿದೆ, ಇದರಿಂದ ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆಯ ಭಾಗಗಳಿಗೂ ನೀರು ಸರಾಗವಾಗಿ ತಲುಪುವಂತಾಗುತ್ತದೆ. ತುಂಗಭದ್ರಾ ಜಲಾಶಯ ಹಾಗೂ ಎಡದಂಡೆ ಕಾಲುವೆಗಳ ಈ ಸುಧಾರಣಾ ಕಾರ್ಯಗಳು ಪೂರ್ಣಗೊಂಡಲ್ಲಿ, ಉತ್ತರ ಕರ್ನಾಟಕದ ಸಾವಿರಾರು ರೈತರಿಗೆ ಶಾಶ್ವತ ಪರಿಹಾರ ದೊರಕುವ ನಿರೀಕ್ಷೆ ವ್ಯಕ್ತವಾಗಿದೆ.

ತುಂಗಭದ್ರಾ ನದಿಯಾಶ್ರಿತ ಜನರಲ್ಲಿ ಆತಂಕ ಹೆಚ್ಚಳ

ಕೊಪ್ಪಳ: ಕೋಟ್ಯಂತರ ಜನರ ಜೀವನಾಡಿ ತುಂಗಭದ್ರಾ ನದಿಗೆ ಕಾರ್ಖಾನೆಗಳ ತ್ಯಾಜ್ಯ, ನಗರಗಳ ಒಳಚರಂಡಿ ನೀರು ಹರಿಬಿಡುತ್ತಿದ್ದು, ಈ ನೀರು ಕುಡಿಯುವ ಜನರು, ಪ್ರಾಣಿ, ಪಕ್ಷಿ, ಜಲಚರಗಳು ಸಾಯುವಂತಾಗಿದೆ. ಇತ್ತೀಚಿನ ತಾಂತ್ರಿಕ ಅಧ್ಯಯನ ಸಮಿತಿಗಳು ಈ ನೀರನ್ನು ಬಳಸಲು ಕೂಡ ಯೋಗ್ಯವಿಲ್ಲವೆಂದು ಹೇಳಿದ್ದು ನದಿಯಾಶ್ರಿತ ಜನರಿಗೆ ಭಯ ಮತ್ತು ಆತಂಕ ಹೆಚ್ಚು ಮಾಡಿದೆ ಎಂದು ನಿರ್ಮಲ ತುಂಗಭದ್ರಾ ಅಭಿಯಾನದ ಶಿವಕುಮಾರ ಹಾದಿಮನಿ ಹೇಳಿದರು.

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ದಿಷ್ಠಾವಧಿ ಧರಣಿಯ 48ನೇ ದಿನವಾದ ಬುಧವಾರ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿ, ಇಲ್ಲಿ ನಡೆಸುತ್ತಿರುವ ಹೋರಾಟದ ಮುಖ್ಯ ಬೇಡಿಕೆಯಲ್ಲಿ ತುಂಗಭದ್ರಾ ಮಾಲಿನ್ಯದಿಂದ ರಕ್ಷಿಸಿ ಎಂದಾಗ ನಮಗೂ ಈ ಹೋರಾಟದ ಸಂಬಂಧ ಹತ್ತಿರದ್ದಾಗಿದೆ. ಕಾರ್ಖಾನೆ ತ್ಯಾಜ್ಯ ನದಿಗೆ ಸೇರುತ್ತಿದ್ದು, ಈ ಘಟಕಗಳ ನಿಲುಗಡೆಗೆ ಸರ್ಕಾರ ಮುಂದಾಗಲಿ.ನಮ್ಮ ಆಂದೋಲನದಲ್ಲಿ ಈ ಹೋರಾಟವನ್ನು ಭಾಗವಾಗಿಸಿ ಸಾಥ್ ನೀಡಲು ಉದ್ದೇಶಿಸಲಾಗಿದೆ. ಇದರಿಂದ ಹೋರಾಟ ಶಿವಮೊಗ್ಗದಿಂದ ಮಂತ್ರಾಲಯದವರೆಗೆ ತೆಗೆದುಕೊಂಡು ಹೋಗಲು ಸಹಕಾರಿಯಾಗುತ್ತದೆ ಎಂದರು.

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ ಮಾತನಾಡಿ, ಜಿಲ್ಲಾ ಕೆಂದ್ರದ ಹತ್ತಿರವಿರುವ ಬಲ್ಡೋಟಾ ಎಂಎಸ್ಪಿಎಲ್ ಪೆಲ್ಲೆಟ್ ಘಟಕದ ಒಂದು ಚಿಮಣಿಯಿಂದ ಬರುವ ಕಪ್ಪುಧೂಳು, ದಟ್ಟ ವಿಷಾನೀಲ, ಹೊಗೆಯಿಂದ ನಗರದ ಅರ್ಧಭಾಗ ಬಾಧಿತವಾಗಿದೆ. ಬಲ್ಡೋಟಾ (ಬಿ.ಎಸ್.ಪಿ.ಎಲ್) ಸೇರಿದಂತೆ ತಾಲೂಕಿನ ನಾಲ್ಕು ಬೃಹತ್ ಕಾರ್ಖಾನೆಗಳ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗೆ ಅನುಮತಿ ಕೊಟ್ಟರೆ ಗತಿಯೇನು ಎಂಬುದು ನಮ್ಮ ಆತಂಕ. ತುಂಗಭದ್ರಾ ವಿಷಗೊಳಿಸುವ 28 ಕಾರ್ಖಾನೆಗಳನ್ನು ಬಂದ್ ಮಾಡಬೇಕು. ಬಲ್ಡೋಟಾ ಅತಿಕ್ರಮಿಸಿದ 44.35 ಎಕರೆ ವಿಸ್ತೀರ್ಣದ ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತವಾಗಿಸಬೇಕು ಎಂದು ಆಗ್ರಹಿಸಿದರು.

ಈಗಾಗಲೇ 35 ವರ್ಷಗಳಿಂದ 28 ಸ್ಪಾಂಜ್ ಐರನ್, ಸ್ಟೀಲ್, ಪೆಲ್ಲೆಟ್ ಬೃಹತ್ ಕಾರ್ಖಾನೆಗಳಿಂದ 20 ಹಳ್ಳಿಗಳು ಗಂಭೀರ ಬಾಧೆಗೊಳಗಾಗಿದ್ದು ಸಾಕಾಗಿದೆ. ಹೀಗಿರುವಾಗ ಕೊಪ್ಪಳ ನಗರದ ಹತ್ತಿರದಲ್ಲಿ 54 ಸಾವಿರ ಕೋಟಿ ವೆಚ್ಚದ ಬಲ್ಡೋಟಾ ವಿಸ್ತರಣೆಯಿಂದ ಇನ್ನೆಷ್ಟು ಪರಿಸರ ಹಾಳಾಗಲಿದೆ.ಇದರಿಂದಾಗುವ ಪರಿಸರ ಲೆಕ್ಕಾಚಾರವೆನು? ಎಂದು ಹೇಳಬೇಕೆಂದರು.

ಧರಣಿಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಉಪನ್ಯಾಸಕ ಶಾಂತವೀರ ಎಂ.ಕಂಬಾಳಿಮಠ, ಶಂಭುಲಿಂಗಪ್ಪ ಹರಗೇರಿ, ಡಿ.ಎಂ. ಬಡಿಗೇರ, ನಿವೃತ್ತ ಸರ್ಕಾರಿ ನೌಕರರ ಸಹಕಾರಿ ಸಂಘದ ಅಧ್ಯಕ್ಷ ಎನ್. ಬೀರನಾಯಕ, ನಿವೃತ್ತ ಪ್ರಾಚಾರ್ಯ ಎಸ್.ಬಿ ರಾಜೂರು, ಸಿ.ವಿ. ಜಡಿ, ಬಿ.ಜಿ.ಕರಿಗಾರ, ನಿವೃತ್ತ ಕೋರ್ಟ್ ಅಧಿಕಾರಿ ಜಿ.ಬಿ. ಪಾಟೀಲ್, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ನಿವೃತ್ತ ಕಾರ್ಮಿಕ ಅಧಿಕಾರಿ ಶಾಂತಯ್ಯ ಅಂಗಡಿ, ಮಹಾದೇವಪ್ಪ ಎಸ್. ಮಾವಿನಮಡು, ಪರಸಪ್ಪ ಪೂಜಾರ ನರೇಗಲ್, ರೈತ ಸಂಘದ ಬಸವರಾಜ ಹೂಗಾರ, ದೇವೇಂದ್ರಪ್ಪ ಹಳ್ಳಿ, ಶಿವಕುಮಾರ ಹಾದಿಮನಿ, ವೆಂಕಣ್ಣಾಚಾರ ಕಟ್ಟಿ, ಬಸವರಾಜ ನರೇಗಲ್, ವೀರಣ್ಣ ಹಳ್ಳೇರ್, ಬಸವರಾಜ್ ವದ್ನಾಳ, ಬಸವರಾಜ ಶೀಲವಂತರ, ಭೀಮಪ್ಪ ಯಲಬುರ್ಗಾ, ನಿಂಗನಗೌಡ, ದೇವೇಂದ್ರಪ್ಪ ಹಳ್ಳಿ, ಶಶಿಕಲಾ ಕುರುಗೋಡ, ತಿಮ್ಮಣ್ಣ ಭೋವಿ, ಮಕ್ಬುಲ್ ರಾಯಚೂರು, ಶಿವಪ್ಪ ಹಡಪದ ಧರಣಿಯಲ್ಲಿ ಪಾಲ್ಗೊಂಡಿದ್ದರು.