ಮುನಿರಾಬಾದ(ಆ.15): ತುಂಗಭದ್ರಾ ಜಲಾಶಯದ ಭರ್ತಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಶುಕ್ರವಾರದಂದು ಜಲಾಶಯದ ನೀರಿನ ಮಟ್ಟವು 1630.63 ಅಡಿಗಳಷ್ಟು ಇದ್ದು, ಜಲಾಶಯವು ಭರ್ತಿಯಾಗಲು ಇನ್ನೂ ಕೇವಲ 2 ಅಡಿ ನೀರಿನ ಅವಶ್ಯಕತೆ ಇರುತ್ತದೆ. 

ಜಲಾಶಯವು ಇನ್ನೂ 2-3 ದಿನಗಳಲ್ಲಿ ಸಂಪೂರ್ಣವಾಗಿ ಭರ್ತಿಯಗಲಿದೆ ಕಾರಣ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಹಾಗೂ ನದಿ ದಂಡೆಯಲ್ಲಿ ದನಕರುಗಳನ್ನು ಮೇಯಿಸಬಾರದು ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ನದಿಪಾತ್ರದ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಕಳೆದ ವರ್ಷ ಆಗಸ್ಟ್‌ 11 ರಂದು ಜಲಾಶಯದ ಗೇಟುಗಳ ಮೂಲಕ ನದಿಗೆ ನೀರನ್ನು ಹರಿಸಲು ಪ್ರಾರಂಭಿಸಲಾಯಿತು. ಹಾಗೂ ಕಳೆದ ವರ್ಷ ಅಗಸ್ಟ್‌ 14 ರಂದು ಜಲಾಶಯದ 33 ಗೇಟುಗಳ ಮೂಲಕ 1,11,244 ಕ್ಯುಸೆಕ್‌ ನೀರು ಹರಿಸಿದ್ದನ್ನು ಸ್ಮರಿಸಬಹುದು.

ಪ್ರತಿವರ್ಷ ಅಗಸ್ಟ್‌ 2ನೇ ವಾರದಲ್ಲಿ ತುಂಗಭದ್ರಾ ಜಲಾಶಯವು ಭರ್ತಿಯಾಗುತ್ತದೆ. ಹಾಗೂ ಅಗಸ್ಟ್‌ 15 ರಂದು ಜಲಾಶಯದ ಎಲ್ಲ 33 ಗೇಟುಗಳ ಮೂಲಕ ನದಿಗೆ ನೀರನ್ನು ಹರಿಸಲಾಗುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಜಲಾಶಯದಲ್ಲಿ ಇನ್ನೂ 2 ಅಡಿಗಳಷ್ಟು ನೀರು ಬರಬೇಕು. ಹಾಗೂ ಇನ್ನೂ 9 ಟಿಎಂಸಿ ಯಷ್ಟು ನೀರು ಸಂಗ್ರಹವಾಗಬೇಕಿದೆ. ಜಲಾಶಯವು ಇನ್ನೂ ಪೂರ್ಣವಾಗಿ ಭರ್ತಿಯಾಗದ ಹಿನ್ನಲೆಯಲ್ಲಿ ಈ ವರ್ಷ ಅಗಸ್ಟ್‌ 15 ರಂದು ಜಲಾಶಯದ ಗೇಟುಗಳ ಮೂಲಕ ಹರಿಸಲಾಗದು ಎಂಬ ಮಾಹಿತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ.

ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ 5ನೇ ದಿನವೂ ಒಂದು ಲಕ್ಷ ಕ್ಯುಸೆಕ್‌ ನೀರು

ಪ್ರವಾಸಿಗರಿಗೆ ಅವಕಾಶವಿಲ್ಲ

ಪ್ರತಿ ವರ್ಷ ಆಗಸ್ಟ್‌ 15 ರಂದು ತುಂಗಭದ್ರಾ ಜಲಾಶಯದ ಮಡಿಲಲ್ಲಿ ನೀರಿನ ಜಾತ್ರೆ ನಡೆಯುತ್ತಿತ್ತು. ಅಂದು ಧ್ವಜಾರೋಹಣದ ನಂತರ ತುಂಗಭದ್ರಾ ಮಂಡಳಿಯ ಅಧಿಕಾರಿಗಳು ಜಲಾಶಯದ ಎಲ್ಲ 33 ಗೇಟುಗಳನ್ನು ತೆರೆದು ನದಿಗೆ ನೀರನ್ನು ಹರಿಸಲಾಗುತ್ತಿತ್ತು. ಹಾಗೂ ಸಂಜೆ ವೇಳೆಗೆ ರಾಷ್ಟ್ರಧ್ವಜದ ಬಣ್ಣಗಳಾದ ಕೇಸರಿ, ಬಿಳಿ ಹಾಗೂ ಹಸಿರು ದೀಪಗಳನ್ನು ಹರಿಯುತ್ತಿರುವ ನೀರಿನ ಮೇಲೆ ಬಿಡಲಾಗುತ್ತಿತ್ತು. ಈ ಸುಂದರ ದೃಶ್ಯವನ್ನು ವೀಕ್ಷಿಸಲು ಬಳ್ಳಾರಿ, ಕೊಪ್ಪಳ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಲಕ್ಷಾಂತರ ಪ್ರವಾಸಿಗರು ತುಂಗಭದ್ರಾ ಜಲಾಶಯಕ್ಕೆ ಆಗಮಿಸುತ್ತಿದ್ದರು. ಆದರೆ, ಪ್ರಸಕ್ತ ಸಾಲಿನಲ್ಲಿ ಕೊರೋನಾ ಮಹಾಮಾರಿ ಆಘಾತದಿಂದ ಮಾರ್ಚ್‌ 20 ರಿಂದಲೇ ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತುಂಗಭದ್ರಾ ಜಲಾಶಯ ವೀಕ್ಷಣೆಯನ್ನು ನಿಷೇಧಿಸಿದ್ದಾರೆ. ಅದಲ್ಲದೇ ಆ. 15 ರಿಂದ ಜಲಾಶಯಕ್ಕೆ ಲಕ್ಷಾಂತರ ಪ್ರವಾಸಿಗರು ಅಗಮಿಸುವ ನಿರೀಕ್ಷೆ ಇದ್ದು, ತುಂಗಭದ್ರಾ ಮಂಡಳಿಯ ಕಾರ್ಯದರ್ಶಿಗಳು ಪತ್ರಿಕಾ ಪ್ರಕಟಣೆ ನೀಡಿ ಪ್ರವಾಸಿಗರು ಆಗಮಿಸಬಾರದು ಎಂದು ಮನವಿ ಮಾಡಿದ್ದಾರೆ. 

ಇದು ಜಲಾಶಯದ 70 ವರ್ಷದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಸ್ವಾತಂತ್ರ್ಯೋತ್ಸವದ ದಿನದಂದು ಪ್ರವಾಸಿಗರನ್ನು ಜಲಾಶಯ ವೀಕ್ಷಿಸಲು ನಿರ್ಬಂಧಿಸಲಾಗಿದೆ. ಸುಮಾರು ಕಳೆದ 5 ತಿಂಗಳಿಂದ ತುಂಗಭದ್ರಾ ಜಲಾಶಯವು ಪ್ರವಾಸಿಗರಿಗಾಗಿ ಮುಚ್ಚಲ್ಪಟ್ಟಿದೆ.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಕಾಮಧೇನು ಆದ ತುಂಗಭದ್ರಾ ಜಲಾಶಯವು ಭರ್ತಿಯಾಗುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಇದರಿಂದ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಭಾಗದ ರೈತರ ಬದುಕು ಉಜ್ವಲವಾಗಲಿದೆ. ರೈತರು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಬೆಳೆಯನ್ನು ಬೆಳೆಯಬೇಕು ಎಂದು ಸಂಸದ ಕರಡಿ ಸಂಗಣ್ಣ ಅವರು ಹೇಳಿದ್ದಾರೆ.