ಹಾಲು ಸರಬರಾಜು ಮಾಡುವ ರೈತರು ಮಹಾಮಾರಿ ಕೋವಿಡ್‌- 19 ಗೆ ತುತ್ತಾಗಿ ಮೃತಪಟ್ಟಿದ್ದರೆ  1 ಲಕ್ಷ ಪರಿಹಾರ ಸಹಾಯಧನ ಕಲ್ಪಿಸಲಾಗುವುದು ಎಂದು ತುಮುಲ್‌ ನಿರ್ದೇಶಕರ ಮಾಹಿತಿ

ಚಿಕ್ಕನಾಯಕನಹಳ್ಳಿ (ಸೆ.21): ತುಮಕೂರು ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಡೇರಿಗಳಿಗೆ ಹಾಲು ಸರಬರಾಜು ಮಾಡುವ ರೈತರು ಮಹಾಮಾರಿ ಕೋವಿಡ್‌- 19 ಗೆ ತುತ್ತಾಗಿ ಮೃತಪಟ್ಟಿದ್ದರೆ ಅಂತಹ ಕುಟುಂಬಕ್ಕೆ ಹಾಲು ಒಕ್ಕೂಟದಿಂದ 1 ಲಕ್ಷ ರು. ಸಹಾಯಧನ ಕಲ್ಪಿಸಲಾಗುವುದು ಎಂದು ತುಮುಲ್‌ ನಿರ್ದೇಶಕ ಹಳೆಮನೆ ಶಿವನಂಜಪ್ಪ ತಿಳಿಸಿದರು.

ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆಗ್ರಾಮದ ಹಾಲು ಉತ್ಪಾಧಕರ ಸಂಘದ ಪ್ರಸಕ್ತ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಅನುಕೂಲವಾಗುವ ಯಾಂತ್ರಿಕ ಉಪಕರಣಗಳಾದ ಹಾಲು ಕರೆಯುವ ಯಂತ್ರಕ್ಕೆ 17500 ರೂ, ಹಾಗೂ ಚಾಪ್‌ ಕಟ್ಟರ್‌ ಯಂತ್ರಕ್ಕೆ 12500 ರೂ ಒಕ್ಕೂದಿಂದ ರಿಯಾಯಿತಿ ದೊರೆಯುತ್ತವೆ ಎಂದರು.

ಕೋವಿಡ್‌ನಿಂದ ಆತ್ಮಹತ್ಯೆ ಮಾಡಿಕೊಂಡವರಿಗೂ ಪರಿಹಾರ: ಸುಪ್ರೀಂ ಸಲಹೆ!

ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಸ್ಥಾಪನೆಯಲ್ಲಿ ಯವುದೇ ಜಾತಿ ಮತ್ತು ಪಕ್ಷಬೇಧ ಮಾಡದೆ ಕರ್ತವ್ಯ ನಡೆಸಿಕೊಂಡು ಹೋಗುತ್ತಿದ್ದು, ಎಲ್ಲಾ ಸಂಘಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಸಂಘಗಳ ಏಳಿಗೆಗೆ ಶ್ರಮಿಸುತ್ತಿರುವುದಾಗಿ ತಿಳಿಸಿದರು.

ಹೊಯ್ಸಳಕಟ್ಟೆಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಕಾವ್ಯ ಮಾತನಾಡಿ, ಹಸುಗಳಿಗೆ ಕೆಚ್ಚಲು ಭಾವು ರೋಗ ಬಂದಾಗ ರೈತರು ಸೂಕ್ತ ಲಸಿಕೆ ಹಾಕಿಸಿ 5 ರಿಂದ 7 ದಿನ ಡೈರಿಗೆ ಹಾಲನ್ನು ಹಾಕಬಾರದು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಮಂಜುನಾಥ್‌ ನಾಯಕ, ವಿಸ್ತರಣಾಧಿಕಾರಿ ಎಂ.ಎನ್‌.ಮಹೇಶ್‌, ಡೇರಿ ಅಧ್ಯಕ್ಷ ಜನಾರ್ಧನ್‌, ಸಮಾಲೋಚನಾಧಿಕಾರಿ ಆರ್‌.ವೈ.ಸುನೀಲ್‌, ಸಂಘದ ನಿರ್ದೇಶಕರಾದ ಯುವರಾಜ್‌, ಕಾರ್ಯದರ್ಶಿ ಚಿದಾನಂದ ಮೂರ್ತಿ, ಹಾಲು ಪರೀಕ್ಷಕ ಮಲ್ಲೇಶಯ್ಯ, ರಾಜು ಭಾಗವಹಿಸಿದ್ದರು.