Asianet Suvarna News Asianet Suvarna News

ತುಮಕೂರು : ಸಮಸ್ಯೆ ಇರುವ ಕಡೆ ಟ್ಯಾಂಕರ್, ಬೋರ್‌ವೆಲ್‌ನಿಂದ ನೀರು ಕೊಡಲು ಸೂಚನೆ

ಕಳೆದ ವರ್ಷ ಮಳೆಯ ಪ್ರಮಾಣ ಕಡಿಮೆಯಾದ ಕಾರಣ ತಾಲೂಕಿನ ವಿವಿಧ ಭಾಗಗಳಲ್ಲಿ ಮುಖ್ಯವಾಗಿ ಜನ-ಜಾನುವಾರು ಗಳಿಗೆ ಕುಡಿಯುವ ನೀರು, ಜಾನುವಾರುಗಳ ಮೇವಿನ ಸಮಸ್ಯೆ ಸೇರಿದಂತೆ ಹಲವಾರು ತೊಂದರೆ ಎದುರಾಗಿವೆ. ಯಾವುದೇ ಸಮಸ್ಯೆಗಳಿದ್ದರೂ ಕೂಡಲೆ ನನ್ನ ಗಮನಕ್ಕೆ ತರುವ ಮೂಲಕ ಸರಿಪಡಿಸಬೇಕೆಂದು ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ಅಧಿಕಾರಿಗಳಿಗೆ ಸೂಚನೆ ನೀಡಿದರು.

Tumkur  Where there is a problem, instructions to give water from tankers and borewells Send feedback snr
Author
First Published Mar 21, 2024, 9:16 AM IST

 ತಿಪಟೂರು : ಕಳೆದ ವರ್ಷ ಮಳೆಯ ಪ್ರಮಾಣ ಕಡಿಮೆಯಾದ ಕಾರಣ ತಾಲೂಕಿನ ವಿವಿಧ ಭಾಗಗಳಲ್ಲಿ ಮುಖ್ಯವಾಗಿ ಜನ-ಜಾನುವಾರು ಗಳಿಗೆ ಕುಡಿಯುವ ನೀರು, ಜಾನುವಾರುಗಳ ಮೇವಿನ ಸಮಸ್ಯೆ ಸೇರಿದಂತೆ ಹಲವಾರು ತೊಂದರೆ ಎದುರಾಗಿವೆ. ಯಾವುದೇ ಸಮಸ್ಯೆಗಳಿದ್ದರೂ ಕೂಡಲೆ ನನ್ನ ಗಮನಕ್ಕೆ ತರುವ ಮೂಲಕ ಸರಿಪಡಿಸಬೇಕೆಂದು ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ತಾಲೂಕು ಆಡಳಿತದ ಸೌಧದ ಕಚೇರಿಯಲ್ಲಿ ಬುಧವಾರ ಕರೆದಿದ್ದ ತಾಲೂಕು ಮಟ್ಟದ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ 22ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹಾಗೂ ನಗರದ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಯಾವುದೇ ಅಧಿಕಾರಿಗಳು ನೆಪ ಹೇಳಕೂಡದು. ಚುನಾವಣಾ ಕೆಲಸವಿದೆ ಎಂದು ನೆಪ ಹೇಳಿಕೊಂಡು ಜನರಿಗೆ ನೀರಿನ ಸಮಸ್ಯೆ ಹೆಚ್ಚಾಗುವಂತೆ ಮಾಡಕೂಡದು.

ಚುನಾವಣೆಯಷ್ಟೇ ಮುಖ್ಯ ಬರದ ಸಮಸ್ಯೆಯೂ ಆಗಿರುವುದರಿಂದ ಎಲ್ಲ ಅಧಿಕಾರಿಗಳು ಬರದಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಆದ್ಯತೆ ನೀಡಿ ಕೆಲಸ ಮಾಡಬೇಕು. ಯಾರೂ ಮೇಲಧಿಕಾರಿಗಳ ಅನುಮತಿ ಇಲ್ಲದೆ ರಜೆ ಹಾಕಕೂಡದು. ಎಲ್ಲರೂ ಕರ್ತವ್ಯನಿರತ ಸ್ಥಳದಲ್ಲೇ ಇರಬೇಕು. ಒಂದು ಇಲಾಖೆಯ ಜೊತೆ ಸಂಬಂದಿಸಿದ ಇಲಾಖೆಗಳು ಪರಸ್ಪರ ಕೈಜೋಡಿಸಿ ನೀರು ಮತ್ತಿತರೆ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು.

ಕುಡಿವ ನೀರಿಗೆ ಸಮಸ್ಯೆ ಉಂಟಾದರೆ ಕೂಡಲೇ ಟ್ಯಾಂಕರ್‌ನಿಂದ ನೀರು ಕೊಡಬೇಕು. ನಂತರ ಹತ್ತಿರದಲ್ಲಿ ಖಾಸಗಿಯವರ ಬೋರ್‌ವೆಲ್ ಇದ್ದರೆ ಅವರಿಗೆ ಹಣ ನೀಡಿ ನೀರು ತೆಗೆದುಕೊಂಡು ಜನರಿಗೆ ನೀಡಬೇಕು. ಈ ಸಂಬಂದ ನೀರು ನೀಡಿದವರಿಗೆ ವಾರದಲ್ಲಿ ಬಿಲ್ ಪಾವತಿಸಬೇಕು. ಯಾವುದೇ ಕಾರಣಕ್ಕೂ ಬಿಲ್ ನೀಡುವುದನ್ನು ವಿಳಂಬ ಮಾಡುವಂತಿಲ್ಲ. ಅಗತ್ಯವಿದ್ದಲ್ಲಿ ಹೊಸ ಬೋರ್‌ವೆಲ್ ಕೊರೆಯಲು ನಮ್ಮಿಂದ ಹಾಗೂ ಸಂಬಂಧಿಸಿದವರಿಂದ ಅನುಮತಿ ಪಡೆದು ಬೋರ್‌ವೆಲ್ ಕೊರೆಸಿ ವಿದ್ಯುತ್ ಹಾಗೂ ಪಂಪು, ಮೋಟರ್ ಅಳವಡಿಸಿ ನೀರು ನೀಡಬೇಕು. ಇದರಲ್ಲಿ ಯಾರೇ ಲೋಪಮಾಡಿದಲ್ಲಿ ಜಿಲ್ಲಾಧಿಕಾರಿ ಹಾಗೂ ಸಿಇಓ ಗಮನಕ್ಕೆ ತಂದು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ವಿವಿಧ ಇಲಾಖೆಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡು ಮುಂದೆ ಅನುಸರಿಸಬೇಕಾದ ಮುನ್ನೆಚ್ಚೆರಿಕೆಗಳ ಬಗ್ಗೆ ಸಲಹೆ ನೀಡಿದರು.

ತಹಸೀಲ್ದಾರ್ ಪವನ್ ಕುಮಾರ್ ಮಾತನಾಡಿ, ಯಾವುದೇ ಗ್ರಾಮಗಳಲ್ಲಿ ಶುದ್ಧಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿದ್ದರೆ ಕೂಡಲೆ ಸರಿಪಡಿಸಿ ಶುದ್ಧಕುಡಿಯುವ ನೀರು ನೀಡಬೇಕು. ಗ್ರಾಮಗಳಲ್ಲಿನ ಟ್ಯಾಂಕಗಳ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಜಾನುವಾರುಗಳಿಗೆ ಕುಡಿಯಲು ನಿರ್ಮಿಸಿರುವ ನೀರಿನ ತೊಟ್ಟಿಗಳಿಗೆ ಕೊರತೆ ಇಲ್ಲದಂತೆ ನೀರು ಹರಿಸಬೇಕು. ಸಮಸ್ಯೆ ಉಂಟಾದ ಮೇಲೆ ತೊಂದರೆಯಾದಲ್ಲಿ ಸಂಬಂದಿಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಇಓ ನಾಗರಾಜು ಮಾತನಾಡಿ, ಪಿಡಿಒಗಳಿಗೆ ನೀರಿನ ಸಮಸ್ಯೆ ಬರದಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ತೋಟಗಾರಿಕೆ ಇಲಾಖೆಯ ನಿರ್ದೇಶಕ ಚಂದ್ರಶೇಖರ ಮಾತನಾಡಿ, ನಮ್ಮ ತೋಟಗಾರಿಕೆ ಇಲಾಖೆಯಿಂದ ೩ಎಕರೆಯಲ್ಲಿ ಮೇವು ಬೆಳೆಸಿ ನೀಡಲು ಮುಂದಾಗುವುದಾಗಿ ತಿಳಿಸಿದರು. ಬೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಮನೋಹರ್ ಮಾತನಾಡಿದರು. ನಗರಸಭೆ ಪೌರಾಯುಕ್ತ ವಿಶ್ವೇಶ್ವರ, ಗ್ರಾಮೀಣ ಕುಡಿಯುವ ನೀರಿನ ಕಾರ್ಯನಿರ್ವಾಹಕ ಚಂದ್ರಶೇಖರ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಂದೀಶ್ ಇದ್ದರು.

ಸಭೆಯಲ್ಲಿ ತಾಲೂಕಿನ ತಿಮ್ಮಲಾಪುರ, ಬಿಳಿಗೆರೆ, ಸಿಡ್ಲೇಹಳ್ಳಿ, ಕೆರೆಗೋಡಿ, ರಂಗಾಪುರ, ಬಜಗೂರು, ಹಾಲ್ಕುರಿಕೆ, ಬಳುವನೇರಲು, ಈಚನೂರು, ಹುಣಸೇಘಟ್ಟ, ಕರಡಿ, ಅರಳಗುಪ್ಪೆ, ಕುಪ್ಪಾಳು, ಮಣಕೀಕೆರೆ ಸೇರಿ ವಿವಿಧ ಗ್ರಾಮಗಳಲ್ಲಿನ ನೀರಿನ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಯಿತು.

Follow Us:
Download App:
  • android
  • ios