ತುಮಕೂರು : 5 ವರ್ಷದಿಂದ ಬಸ್ ಸವಲತ್ತಿಂದ ವಂಚಿತವಾಗಿದ್ದ ಗಡಿ ಗ್ರಾಮಕ್ಕೆ ಸಂಚಾರ ಮತ್ತೆ ಆರಂಭ
ಕಳೆದ ಐದು ವರ್ಷಗಳಿಂದ ಬಸ್ ವ್ಯವಸ್ಥೆಯಿಲ್ಲದೆ ವಂಚಿತರಾಗಿದ್ದ ಮುತ್ಯಾಲಮ್ಮನಹಳ್ಳಿ ಜನತೆಗೆ ಮತ್ತೆ ಬಸ್ ಸಂಚರಿಸಲು ಚಾಲನೆ ದೊರೆತ್ತಿದ್ದರಿಂದ, ಗ್ರಾಮಸ್ಥರು ಮತ್ತು ಶಾಲಾ ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್‌ಗೆ ಹೂ, ತಳಿರು ತೋರಣಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಸಂಭ್ರಮಪಟ್ಟರು.
ಮಧುಗಿರಿ : ಕಳೆದ ಐದು ವರ್ಷಗಳಿಂದ ಬಸ್ ವ್ಯವಸ್ಥೆಯಿಲ್ಲದೆ ವಂಚಿತರಾಗಿದ್ದ ಮುತ್ಯಾಲಮ್ಮನಹಳ್ಳಿ ಜನತೆಗೆ ಮತ್ತೆ ಬಸ್ ಸಂಚರಿಸಲು ಚಾಲನೆ ದೊರೆತ್ತಿದ್ದರಿಂದ, ಗ್ರಾಮಸ್ಥರು ಮತ್ತು ಶಾಲಾ ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್‌ಗೆ ಹೂ, ತಳಿರು ತೋರಣಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಸಂಭ್ರಮಪಟ್ಟರು.
ತಾಲೂಕಿನ ಆಂಧ್ರದ ಗಡಿ ಗ್ರಾಮಗಳಿಗೆ ಹಾಗೂ ಮುತ್ಯಾಲಮ್ಮನಹಳ್ಳಿಗೆ ಹಲವು ವರ್ಷಗಳಿಂದ ಬಸ್ ಸೌಲಭ್ಯವಿಲ್ಲದೆ 1.5 ಕಿಮೀ ತೆರಳಿ ಬಸ್‌ಗೆ ಕಾದು ಹತ್ತುತ್ತಿದ್ದ
ಗ್ರಾಮಸ್ಥರಿಗೆ ಕೆಎಸ್‌ಆರ್‌ಟಿಸಿ ಬಸ್ ತಮ್ಮ ಗ್ರಾಮದಲ್ಲಿ ಸಂಚಾರವನ್ನು ಮತ್ತೆ ಪ್ರಾರಂಭಿಸಿದ್ದರಿಂದ ಶಾಲಾ ಮಕ್ಕಳು ಮತ್ತು ಗ್ರಾಮದ ವೃದ್ಧರು ಮಹಿಳೆಯರ ಮೊಗದಲ್ಲಿ
ಸಂತಸ ಮನೆ ಮಾಡಿದೆ.
ಮಧುಗಿರಿಯಿಂದ-ಕೊಡಿಗೇನಹಳ್ಳಿ ಮಾರ್ಗವಾಗಿ ಗುಟ್ಟೆ, ಮುತ್ಯಾಲಮ್ಮನಹಳ್ಳಿ ಮತ್ತು ತರಿಯೂರಿಗೆ ಬಸ್ ಪ್ರತಿನಿತ್ಯ ಸಂಚರಿಸಲಿದೆ. 2013-18ರ ಅವಧಿಯಲ್ಲಿ
ಶಾಸಕರಾಗಿದ್ದ ಕೆ.ಎನ್.ರಾಜಣ್ಣ ಗ್ರಾಮಕ್ಕೆ ಭೇಟಿ ನೀಡಿದಾಗ ಮುತ್ಯಾಲಮ್ಮನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮಸ್ಥರು ರಸ್ತೆ ಸಂಪರ್ಕ ಹಾಗೂ ಬಸ್ ಸೌಕರ್ಯ ಕಲ್ಪಿಸುವಂತೆ
ಮನವಿ ಮಾಡಿದ್ದರು. ಆದರೆ ಅಂದಿನ ದಿನಗಳಲ್ಲಿ ಗ್ರಾಮಕ್ಕೆ ಸರಿಯಾದ ರಸ್ತೆ ಮಾರ್ಗವಿಲ್ಲದ್ದನ್ನು ಮನಗಂಡ ಶಾಸಕರು ಮೊದಲು ರಸ್ತೆ ನಿರ್ಮಿಸಿ ನಂತರ ಬಸ್ ವ್ಯವಸ್ಥೆ
ಮಾಡಿದ್ದರು. ಕಾಲಕ್ರಮೇಣ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮತ್ತೆ 2018ರಿಂದ ಇಲ್ಲಿವರೆಗೂ ಈ ಗ್ರಾಮಗಳಿಗೆ ಬಸ್ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ಸೊರಗಿದ್ದರು. ಇತ್ತೀಚೆಗೆ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಶಕ್ತಿ ಯೋಜನೆಯಿಂದಾಗಿ ತಾಲೂಕಿನಲ್ಲಿ ಸ್ಥಗಿತಗೊಂಡಿದ್ದ ಬಸ್ ಸಂಚಾರ ಈ ಮಾರ್ಗಗಳಲ್ಲಿ ಮತ್ತು ಕೆ.ಎನ್.ರಾಜಣ್ಣರವರ ಸೂಚನೆ ಮೇರೆಗೆ ಕೆಎಸ್‌ಆರ್‌ಟಿ ಬಸ್‌ಗಳ ಸಂಚಾರ ಪುನರ್ ಆರಂಭಗೊಂಡಿವೆ.
ಸಚಿವ ರಾಜಣ್ಣರವರು ಗ್ರಾಮಕ್ಕೆ ಭೇಟಿ ನೀಡಿದಾಗ ಬಸ್ ವ್ಯವಸ್ಥೆ ಕಲ್ಪಿಸಿ ಕೊಡಿ ಎಂದು ಗ್ರಾಮಸ್ಥರೆಲ್ಲಾ ಸೇರಿ ಮನವಿ ಮಾಡಿದ್ದರು. ಅದರಂತೆ ಈ ಮಾರ್ಗದಲ್ಲಿ ಮತ್ತೆ ಸರ್ಕಾರಿ ಬಸ್ ಬಂದಿರುವುದು ನಮಗೆ ಖುಷಿ ತಂದಿದೆ. ಶಾಲಾ-ಕಾಲೇಜಿಗೆ ಹೋಗಿ ಬರುತ್ತಿದ್ದ ಮಕ್ಕಳು ಯಾವಾಗ ಮನೆಗ ಬರುತ್ತಾರೋ ಎಂದು ಈ ಹಿಂದೆ ದಾರಿ ಎದುರು ನೋಡಬೇಕಿತ್ತು. ಈಗ ಆ ಚಿಂತೆ ದೂರವಾಗಿದೆ ಎನ್ನುತ್ತಾರೆ ಗ್ರಾಮಸ್ಥ ವಿನೋದ್ ಕುಮಾರ್.
ಈ ವೇಳೆ ಗ್ರಾಪಂ ಅಧ್ಯಕ್ಷ ಮಿಲ್ ಶ್ರೀನಿವಾಸ್, ಸದಸ್ಯರಾದ ಆಂಜನೇಯುಲು, ಲಕ್ಷಮ್ಮ, ಮುರಳೀ, ದೇವರಾಜು, ಜಯರಾಮು, ರಾಜೇಶ್, ಲಕ್ಷ್ಮೇಪತಿ, ಕೃಷ್ಣಯ್ಯ, ರಾಮಕೃಷ್ಣ, ವಿದ್ಯಾರ್ಥಿಗಳು
, ಗ್ರಾಮಸ್ಥರು ಇದ್ದರು.
ಕಳೆದ ಕೆಲ ವರ್ಷಗಳಿಂದ ಕೊಡಿಗೇನಹಳ್ಳಿಗೆ ಹೋಗಬೇಕೆಂದರೆ ಇಲ್ಲಿನ ಜನರು ಹರ ಸಾಹಸ ಪಡಬೇಕಿತ್ತು. ಆಟೋಗಳಲ್ಲಿ ಹೋಗಬೇಕಾದರೆ ಸೀಟು
ತುಂಬುವವರೆಗೂ ಕಾಯಬೇಕಿತ್ತು. ಸಹಕಾರ ಸಚಿವರಾದ ರಾಜಣ್ಣರಿಂದ ನಮ್ಮ ಗ್ರಾಮಗಳಿಗೆ ರಸ್ತೆ, ಬಸ್ ವ್ಯವಸ್ಥೆಯಾಗಿದೆ. ಶಾಲಾ ಮಕ್ಕಳಿಗೆ, ಗಾರ್ಮೆಂಟ್ಸ್‌ಗಳಿಗೆ ಹೋಗಿ ಬರುವವರಿಗೆ ಅನುಕೂಲವಾಗಿದೆ. ಎಂ.ಎನ್.ಚಾಲುಕ್ಯ ಭೂ ನ್ಯಾ ಮಂಡಲಿ ಸದಸ್ಯ.