Asianet Suvarna News Asianet Suvarna News

ತುಮಕೂರು: ಟ್ಯಾಂಕರ್ ನೀರನ್ನು ಪರೀಕ್ಷೆಗೆ ಒಳಪಡಿಸಿ - : ಸಿಇಒ ಜಿ. ಪ್ರಭು

 ಜಿಲ್ಲೆಯಲ್ಲಿ ಮಳೆ ಬಾರದೆ ಕುಡಿಯುವ ನೀರಿನ ಸಮಸ್ಯೆಯಾಗಿದ್ದರಿಂದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಪೂರೈಕೆಗೂ ಮುನ್ನ ಕುಡಿಯಲು ಯೋಗ್ಯವಿರುವ ಬಗ್ಗೆ ನೀರನ್ನು ಪರೀಕ್ಷೆಗೊಳಪಡಿಸಿರಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಜಿ. ಪ್ರಭು ಹೇಳಿದರು.

Tumkur Test tanker water - : CEO G. Prabhu snr
Author
First Published May 1, 2024, 6:02 AM IST

  ತುಮಕೂರು :  ಜಿಲ್ಲೆಯಲ್ಲಿ ಮಳೆ ಬಾರದೆ ಕುಡಿಯುವ ನೀರಿನ ಸಮಸ್ಯೆಯಾಗಿದ್ದರಿಂದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಪೂರೈಕೆಗೂ ಮುನ್ನ ಕುಡಿಯಲು ಯೋಗ್ಯವಿರುವ ಬಗ್ಗೆ ನೀರನ್ನು ಪರೀಕ್ಷೆಗೊಳಪಡಿಸಿರಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಜಿ. ಪ್ರಭು ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ನೀರು ಮತ್ತು ನೈರ್ಮಲ್ಯ ಮಿಷನ್ ಜಿಲ್ಲಾ ಮಟ್ಟ ಸಮಿತಿ ಸಭೆಯಲ್ಲಿ ಮಾತನಾಡಿದರು. ಪ್ರಸ್ತುತ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯಾತ್ಮಕ 23 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್ ನೀರನ್ನು ಜನರಿಗೆ ಒದಗಿಸುವ ಮುನ್ನ ನೀರಿನ ಮಾದರಿಯನ್ನು 3 ದಿನಗಳಿಗೊಮ್ಮೆ ಪರೀಕ್ಷೆಗೊಳಪಡಿಸಬೇಕೆಂದು ಟ್ಯಾಂಕರ್ ಮಾಲೀಕರಿಗೆ ನಿರ್ದೇಶನ ನೀಡುವಂತೆ ಸೂಚಿಸಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ದೃಷ್ಟಿಯಿಂದ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ ಹಂತ-ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ. ಸಮಸ್ಯಾತ್ಮಕ ಗ್ರಾಮಗಳಿಗೆ ಈ ಹಣವನ್ನು ವಿನಿಯೋಗಿಸಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಂಡು ಶಾಶ್ವತ ಪರಿಹಾರ ನೀಡಬೇಕು ಎಂದರು.

 ಹೊಸ ಕೊಳವೆ ಬಾವಿಗಳಿಗೆ ಅನುಮೋದನೆ: \Bಸಭೆಯಲ್ಲಿ ಗುಬ್ಬಿ, ತುರುವೇಕರೆ, ಶಿರಾ ಹಾಗೂ ತುಮಕೂರು ತಾಲೂಕಿನ 12 ಸಮಸ್ಯಾತ್ಮಕ ಗ್ರಾಮಗಳಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಸಿದ್ಧಪಡಿಸಿದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು. ಗುಬ್ಬಿ ತಾಲೂಕಿನ ಮಣಿಕುಪ್ಪೆ ಹಾಗೂ ಬಿದರೆ, ತುಮಕೂರಿನ ಅಪ್ಪಿನಾಯಕನಹಳ್ಳಿ, ತುರುವೇಕೆರೆ ತಾಲೂಕಿನ ಮಂಕಿಕುಪ್ಪೆ, ಕಣತೂರು, ಶಿರಾ ತಾಲೂಕಿನ ಸಾಕ್ಷಿಹಳ್ಳಿ, ರಾಮನಹಳ್ಳಿ, ಯರದಕಟ್ಟೆ, ಸೋರೆಕುಂಟೆ, ಜಿ. ರಂಗನಹಳ್ಳಿ, ಶಾಖದಡು ಹಾಗೂ ಅಂತಾಪುರ ಸೇರಿದಂತೆ ಒಟ್ಟು 12 ಗ್ರಾಮಗಳಲ್ಲಿ ಹೊಸ ಕೊಳವೆಬಾವಿ ಕೊರೆಯಲು ಅನುಮೋದನೆ ನೀಡಲಾಯಿತು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರವೀಶ್ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ 80 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ಹಾಗೂ 23 ಗ್ರಾಮಗಳಲ್ಲಿ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರಸ್ತುತ ನೀರಿನ ಬವಣೆ ಹೆಚ್ಚಾಗಿ ಕಂಡು ಬಂದಿರುವ 12 ಗ್ರಾಮಗಳಲ್ಲಿ ಹೊಸ ಕೊಳವೆ ಬಾವಿ ಕೊರೆಯಲು 32.62ಲಕ್ಷ ರು. ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗಾಗಿ ಸಭೆಗೆ ಮಂಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಿಇಒ ಜಿ. ಪ್ರಭು ಪ್ರತಿಕ್ರಿಯಿಸಿ, ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳ ಪಿಡಿಒಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಬೇಕು. ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ಆದ್ಯತೆ ಮೇಲೆ ಹೊಸ ಕೊಳವೆ ಬಾವಿಗಳಿಗೆ ಅನುಮತಿ ನೀಡಲಾಗಿದೆ. ಹೊಸ ಕೊಳವೆ ಬಾವಿ ಕೊರೆಯುವ ಮುನ್ನ ಹಿರಿಯ ಭೂವಿಜ್ಞಾನಿಗಳಿಂದ ಜಲಬಿಂದು ಗುರುತಿಸಿ ನೀರು ಇರುವ ಕಡೆ ಕೊಳವೆಬಾವಿ ಕೊರೆಸಬೇಕು. ಚುನಾವಣೆ ಕಾರ್ಯದ ಒತ್ತಡ ಬಹುತೇಕ ಪೂರ್ಣಗೊಂಡಿರುವುದರಿಂದ ಎಲ್ಲಾ ಪಂಚಾಯತಿಗಳು ತೆರಿಗೆ ಸಂಗ್ರಹಣೆ, ನರೇಗಾ ಕಾಮಗಾರಿಗಳಿಗೆ ಪ್ರಾರಂಭಿಸಲು ಆದ್ಯತೆ ನೀಡಬೇಕು ಎಂದು ನಿರ್ದೇಶನ ನೀಡಿದರು.ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ(ಆಡಳಿತ) ಹಾಲಸಿದ್ದಪ್ಪ ಪೂಜೇರಿ, ಉಪ ಕಾರ್ಯದರ್ಶಿ(ಅಭಿವೃದ್ಧಿ) ವಿಜಯ್‌ಕುಮಾರ್, ಶಾಲಾ ಶಿಕ್ಷಣ ಇಲಾಖೆ ರಂಗಧಾಮಯ್ಯ, ಕೃಷಿ ಜಂಟಿ ನಿರ್ದೇಶಕ ರಮೇಶ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ: ಚಂದ್ರಶೇಖರ್, ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಶಿರಾ ತಾಲ್ಲೂಕಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎ.ಆರ್. ಮಂಜುಪ್ರಸಾದ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Latest Videos
Follow Us:
Download App:
  • android
  • ios