ತುಮಕೂರು : ಕುಡಿಯುವ ನೀರಿಗಾಗಿ ಪಂಚಾಯಿತಿಗೆ ಬೀಗ
ತಾಲೂಕಿನ ಬಿಳಿ ದೇವಾಲಯ ಗ್ರಾಪಂ ವ್ಯಾಪ್ತಿಯಲ್ಲಿ ಮಹಿಳೆಯರು ನೀರಿಗಾಗಿ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.
ಕುಣಿಗಲ್ : ತಾಲೂಕಿನ ಬಿಳಿ ದೇವಾಲಯ ಗ್ರಾಪಂ ವ್ಯಾಪ್ತಿಯಲ್ಲಿ ಮಹಿಳೆಯರು ನೀರಿಗಾಗಿ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.
ಗ್ರಾಪಂ ವ್ಯಾಪ್ತಿಯ ಬಿಳಿ ದೇವಾಲಯ ಮತ್ತು ಬೋರಲಿಂಗನ ಪಾಳ್ಯದಲ್ಲಿ ವಾಸಿಸುವ ಮನೆಗಳಿಗೆ ಕುಡಿಯುವ ನೀರಿನ ಸರಬರಾಜು ಆಗದ ಕಾರಣ ಆಕ್ರೋಶಗೊಂಡ ಮಹಿಳೆಯರು ಗ್ರಾಮ ಪಂಚಾಯಿತಿಗೆ ಬೀಗ ಜಡೆದು ಪ್ರತಿಭಟಿಸಿದರು.
ಬೋರಲಿಂಗನ ಪಾಳ್ಯ ಮತ್ತು ಬಿಳಿ ದೇವಾಲಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ.
ನಾವು ಹಬ್ಬ ಮಾಡಿದ್ದೇವೆ, ನಮ್ಮ ಮನೆಯ ಪಾತ್ರೆಗಳನ್ನು ತೊಳೆಯಲು ನೀರಿಲ್ಲ, ಅದಕ್ಕಾಗಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಮಹಿಳೆಯರು ಆಕ್ರೋಶಗೊಂಡರು.
ಪಂಚಾಯಿತಿ ಪ್ರಭಾರ ಪಿಡಿಒ ಭಾಗ್ಯಲಕ್ಷ್ಮೀ ಮಾತನಾಡಿ, ನೀರಿನ ಸಮಸ್ಯೆ ಉಂಟಾಗಿದೆ, ಇನ್ನೆರಡು ದಿನಗಳಲ್ಲಿ ಅದನ್ನು ಬಗೆಹರಿಸುತ್ತೇವೆ. ತಾತ್ಕಾಲಿಕವಾಗಿ ಟ್ಯಾಂಕರ್ ಮುಖಾಂತರ ನೀರನ್ನು ನಿಮ್ಮ ಮನೆಗಳ ಬಳಿಗೆ ಕಳಿಸುತ್ತೇವೆಂದು ಮನವರಿಕೆ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಮಾತನಾಡಿ, ಮಳೆಯ ಸಮಸ್ಯೆಯಿಂದ ಕೊಳವೆ ಬಾವಿಗಳಲ್ಲಿ ನೀರು ಬರಿದಾಗುತ್ತಿದೆ.ಇನ್ನಷ್ಟು ಕೊಳವೆ ಬಾವಿಗಳನ್ನು ಕೊರೆಸುವುದು ಮತ್ತು ಕೆಲವು ಕೆಟ್ಟು ನಿಂತ ಬೋರ್ವೆಲ್ ಗಳನ್ನು ದುರಸ್ತಿ ಮಾಡುವ ಕೆಲಸವನ್ನು ಗ್ರಾಮ ಪಂಚಾಯಿತಿಯಿಂದ ಆರಂಭಿಸಿದ್ದೇವೆ. ಕೆಲವೇ ದಿನಗಳಲ್ಲಿ ಸಮಸ್ಯೆಯನ್ನು ಬಗೆ ಹರಿಸುತ್ತೇವೆ ಎಂದರು. ಈ ವಿಚಾರವಾಗಿ ಸ್ಥಳೀಯರು, ವಾಟರ್ ಮ್ಯಾನ್, ಬಿಲ್ ಕಲೆಕ್ಟರ್ ಮತ್ತು ಪಿಡಿಒಗಳ ನಡುವೆ ವಾಗ್ವಾದ ನಡೆಯಿತು.