ತುಮಕೂರು : ರೈತರ ಅಹೋರಾತ್ರಿ ಧರಣಿಗೆ ವಕೀಲರ ಸಂಘ ಬೆಂಬಲ

ಕಳೆದ 10 ದಿನಗಳಿದ ರಾಜ್ಯ ರೈತ ಸಂಘದ ಸಹಯೋಗದೊಂದಿಗೆ ಕೊಬ್ಬರಿ ಮತ್ತು ತೆಂಗು ಬೆಳೆಗಾರರು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದು ಧರಣಿಗೆ ತುಮಕೂರು ಜಿಲ್ಲಾ ವಕೀಲರ ಸಂಘ ಬೆಂಬಲ ಸೂಚಿಸಿದೆ.

Tumkur  Lawyers association supports farmers' hourly sit-in snr

  ತುಮಕೂರು :  ಕಳೆದ 10 ದಿನಗಳಿದ ರಾಜ್ಯ ರೈತ ಸಂಘದ ಸಹಯೋಗದೊಂದಿಗೆ ಕೊಬ್ಬರಿ ಮತ್ತು ತೆಂಗು ಬೆಳೆಗಾರರು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದು ಧರಣಿಗೆ ತುಮಕೂರು ಜಿಲ್ಲಾ ವಕೀಲರ ಸಂಘ ಬೆಂಬಲ ಸೂಚಿಸಿದೆ.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್. ಕೆಂಪರಾಜಯ್ಯ ಮಾತನಾಡಿ, ಕಳೆದ ಹತ್ತು ದಿನಗಳಿಂದ ರೈತರು ಚಳಿ-ಗಾಳಿಯಲ್ಲಿ ಬಿಸಿಲನ್ನು ಲೆಕ್ಕಿಸದೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದು ರಾಜ್ಯ ಸರ್ಕಾರ ತಕ್ಷಣವೇ ಕೊಬ್ಬರಿ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಬೇಕು. ಈಗಾಗಲೇ ಪ್ರಧಾನಿ ಮೋದಿ ಅವರು ನಫೆಡ್ ಮೂಲಕ ಕ್ವಿಂಟಲ್ ಕೊಬ್ಬರಿಗೆ 12 ಸಾವಿರದಂತೆ ರೈತರಿಂದ ಪಡೆಯಲು ತೀರ್ಮಾನಿಸಿ ಆದೇಶ ಹೊರಡಿಸಿದ್ದು ಸ್ವಾಗತಾರ್ಹ. ಅಂತೆಯೇ ರಾಜ್ಯ ಸರ್ಕಾರ ಸಹ ತಕ್ಷಣವೇ 3 ಸಾವಿರ ರು. ಬೆಂಬಲ ಬೆಲೆ ಘೋಷಿಸಿ ಕ್ವಿಂಟಲ್ ಕೊಬ್ಬರಿಗೆ 15 ಸಾವಿರ ರು. ನೀಡಬೇಕು ಎಂದರು.

ಇಂದು ರೈತ ಸಂಕಷ್ಟದಲ್ಲಿದ್ದಾನೆ. ಸರಿಯಾಗಿ ವಿದ್ಯುತ್ ಇಲ್ಲ, 3 ಫೇಸ್ ವಿದ್ಯುತ್ ಅನ್ನುತ್ತಾರೆ. 3 ಗಂಟೆಯೂ ಸಹ ಸರಿಯಾಗಿ ಇರುವುದಿಲ್ಲ, ಹಗಲುರಾತ್ರಿ ಎನ್ನದೆ ರೈತ ವಿದ್ಯುತ್ ಕಾಯಬೇಕು, ಬಿತ್ತನೆ ಬೀಜ, ಗೊಬ್ಬರ ಸರಿಯಾಗಿ ಸಿಗುವುದಿಲ್ಲ ಸಿಕ್ಕರೂ ದುಬಾರಿಯಾಗಿದೆ, ಬೆಳೆಗೆ ಸರಿಯಾದ ಮಾರುಕಟ್ಟೆ ಇಲ್ಲ, ತಾನು ಬೆಳೆದ ಬೆಳೆಗೆ ರೈತನೇ ದರ ನಿಗದಿಮಾಡುವ ಸಮಯ ಬರಬೇಕು. ಸರ್ಕಾರ ರೈತರಿಗೆ ಉತ್ತಮ ಗೊಬ್ಬರ, ಬೀಜ ನೀಡಿ ಮಾರುಕಟ್ಟೆ ಒದಗಿಸಬೇಕು. ದಲ್ಲಾಳಿಗೆ ಲಾಭವಾಗುವುದನ್ನು ತಪ್ಪಿಸಬೇಕು, ರಾಜ್ಯದಲ್ಲಿ ಬರಗಾಲ ಇದೆ. ಜನ-ಜಾನುವಾರುಗಳಿಗೆ ನೀರಿಲ್ಲ, ಜಲಾಶಯ, ಕೆರೆ ಕಟ್ಟೆಗಳು ಒಣಗಿದೆ, ರೈತರ ಉತ್ಪನ್ನಗಳಿಗೆ ಸರಿಯಾದ ದರ ನಿಗದಿಯಾಗಿ ಈ ದೇಶದಲ್ಲಿ ರೈತನೇ ಸಾರ್ವಭೌಮನಾಗಬೇಕು ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್‌. ತಿಪ್ಪೇಸ್ವಾಮಿ ಮಾತನಾಡಿ, ಬರುವ ಮಾರ್ಚ್ ತಿಂಗಳಿನಲ್ಲಿ ಮಂಡನೆಯಾಗುವ ಕೇಂದ್ರ ಮತ್ತು ರಾಜ್ಯದ ಆಯ-ವ್ಯಯದಲ್ಲಿ ಕೊಬ್ಬರಿ ಮತ್ತು ತೆಂಗು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಕ್ವಿಂಟಲ್ ಕೊಬ್ಬರಿಗೆ ಕನಿಷ್ಠ 15 ರಿಂದ 20 ಸಾವಿರ ರು. ನೀಡಬೇಕು. ತೆಂಗಿನ ಸಹ ಉತ್ಪನ್ನಗಳಾದ ತೆಂಗಿನ ನಾರು, ಗರಿ, ಪೊರಕೆ, ಚಿಪ್ಪು, ಸಿಪ್ಪೆ ಎಲ್ಲದಕ್ಕೂ ಉತ್ತಮ ಬೆಲೆ ಬರಬೇಕು. ಆಗ ಮಾತ್ರ ರೈತನಿಗೆ ಅನುಕೂಲವಾಗಲಿದೆ, ಸರ್ಕಾರ ಕೆಲಸಕ್ಕೆ ಬಾರದ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಬಾರದು. ತೆಂಗು ಮತ್ತು ಕೊಬ್ಬರಿ ಬೆಳೆಗಾರರ ಸಹಾಯಕ್ಕೆ ತಕ್ಷಣವೇ ಧಾವಿಸಬೇಕು, ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ರಾಜ್ಯದ ಕೃಷಿ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆಗಮಿಸಿ ಮನವಿ ಆಲಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಎಚ್. ಕೆಂಪರಾಜಯ್ಯ, ಉಪಾಧ್ಯಕ್ಷ ಶಿವಶಂಕರಯ್ಯ, ಪ್ರಧಾನ ಕಾರ್ಯದರ್ಶಿ ಆರ್‌. ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಸಿ. ಪಾಲಾಕ್ಷಯ್ಯ, ಖಜಾಂಚಿ ಕೆ.ಎಲ್. ಭಾರತಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಂ.ಬಿ. ಗುರುಪ್ರಸಾದ್, ಟಿ.ಎಸ್. ಜನಾರ್ಧನ್,ಎಂ.ಬಿ. ನವೀನ್ ಕುಮಾರ್, ಎಸ್. ಮೋಹನ್, ಶಿವಕುಮಾರಸ್ವಾಮಿ, ಪಿ.ಎಸ್. ಸಂದೀಪ್, ಮಂಜುಳ ಎಚ್.ಎಸ್. ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios