Tumakur : ಜಿಲ್ಲಾದ್ಯಂತ ಸ್ವಚ್ಛತಾ ಅಭಿಯಾನ
ಸ್ವಚ್ಛ ಗ್ರಾಮ ಅಭಿಯಾನದಡಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಗ್ರಾಮದ ನೈರ್ಮಲ್ಯತೆಗೆ ಆದ್ಯತೆ ನೀಡಲಾಗುವುದು ಎಂದು ಜಿ.ಪಂ. ಸಿಇಓ ಪ್ರಭು ತಿಳಿಸಿದರು.
ತುಮಕೂರು : ಸ್ವಚ್ಛ ಗ್ರಾಮ ಅಭಿಯಾನದಡಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಗ್ರಾಮದ ನೈರ್ಮಲ್ಯತೆಗೆ ಆದ್ಯತೆ ನೀಡಲಾಗುವುದು ಎಂದು ಜಿ.ಪಂ. ಸಿಇಓ ಪ್ರಭು ತಿಳಿಸಿದರು.
ಸ್ವಚ್ಛತಾ ಅಭಿಯಾನದಡಿ ತುಮಕೂರು ತಾಲೂಕು ನಾಗವಲ್ಲಿ ಗ್ರಾಮ ಪಂಚಾಯತಿಯ, ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಶ್ರಮದಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ಲಾಸ್ಟಿಕ್ ಕಸ ಎತ್ತುವುದು, ಚರಂಡಿ ಸ್ವಚ್ಛತೆ,, ಕಳೆ ತೆಗೆಯುವುದು, ಮನೆ ಮನೆ ಕಸ ಸಂಗ್ರಹ ಸೇರಿದಂತೆ ಸಂಪೂರ್ಣವಾಗಿ ಗ್ರಾಮದ ನೈರ್ಮಲ್ಯತೆಗೆ ಕಾಳಜಿ ವಹಿಸಿ ಚಿತ್ರಣ ಬದಲಾಯಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಗ್ರಾ.ಪಂನಲ್ಲಿ ಸ್ವಚ್ಛತಾ ಅಯವ್ಯಯ ಸಿದ್ಧಪಡಿಸಿಕೊಂಡು ಮನೆಗೆ 20 ರು. ಅಂಗಡಿಗಳಿಗೆ 50 ರು. ಕಲ್ಯಾಣ ಮಂಟಪಗಳಿಗೆ 500 ರು. ಹೀಗೆ ನಿಯಾಮಾನುಸಾರ ಹಣ ಸಂಗ್ರಹಿಸಿ ಸ್ವಚ್ಛತಾ ಕಾರ್ಯಗಳಿಗೆ ಬಳಸಬೇಕು. ಸ್ವಚ್ಛತಾ ಕಾರ್ಮಿಕರಿಗೆ 5000 ರು. ಅಥವಾ ಮೇಲ್ಪಟ್ಟು ಗೌರವ ಧನ ನೀಡಬೇಕು. ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಗೆ 20 ರು. ನೀಡಿದರೆ ಸಾರ್ವಜನಿಕರು ಪ್ರತಿ ವರ್ಷ ಎಷ್ಟೇ ಬಡವರಿದ್ದರು 4 –5 ಸಾವಿರ ರು. ಆರೋಗ್ಯಕ್ಕಾಗಿ ಖರ್ಚು ಮಾಡುತ್ತಾರೆ. ಪ್ಲಾಸ್ಟಿಕ್ ಬಳಕೆಯಿಂದ ನಾನಾ ಆಯಾಮಗಳಲ್ಲಿ ಜನ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಮುಂದಿನ ಮಾನವ ಪೀಳಿಗೆಗೆ ಪ್ಲಾಸ್ಟಿಕ್ ಬಳಕೆ ಬಹು ಹಾನಿ ಉಂಟು ಮಾಡುತ್ತದೆ ಎಂದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಆಡಿಟೋರಿಯಂ, ಒಳಾಂಗಣ ಕ್ರೀಡಾಂಗಣ, ವಾಲಿಬಾಲ್ ಅಂಕಣ, ಶಟಲ್ ಬ್ಯಾಡ್ಮಿಟನ್ ಅಂಕಣ, ಶಾಲಾ ದಾಸೋಹ ಭವನ, ಶಾಲಾ ಶೌಚಾಲಯ, ಕಾಮಗಾರಿಗಳಿಗೆ ಆದ್ಯತೆ ನೀಡಿ ಶಾಲಾಭಿವೃದ್ದಿಗೆ ಒತ್ತು ನೀಡಲಾಗುವುದು ಎಂದರು.
ಜಿ.ಪಂ ಮುಖ್ಯ ಯೋಜನಾಧಿಕಾರಿ ಹಾಗೂ ಎಸ್ ಬಿ ಎಂ ನೋಡಲ್ ಅಧಿಕಾರಿ ಸಣ್ಣಮಸೀಯಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಕುಮಾರ್ ಕೆ, ನಾಗವಲ್ಲಿ ಗ್ರಾ.ಪಂ ಅಧ್ಯಕ್ಷ ಮಂಗಳಗೌರಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜು, ತಾಲೂಕು ಐಈಸಿ ಸಂಯೋಜಕರು, ಕೆಪಿಎಸ್ ಶಾಲಾ ಶಿಕ್ಷಕರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಸ್ವಸಹಾಯ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಸಮಗ್ರ ಸ್ವಚ್ಛ ಗ್ರಾಮಕ್ಕೆ ಕೈ ಜೋಡಿಸಿ ಅಭಿಯಾನವನ್ನು ಯಶಸ್ವಿಗೊಳಿಸಿದರು.