ತುಮಕೂರು : ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಡಿಸಿ: ಕುಡಿವ ನೀರು ಪೂರೈಕೆ ಸಂಬಂಧ ಪರಿಶೀಲನೆ

ಚಿಕ್ಕನಾಯಕನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಸಮರ್ಪಕ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆ ಸಂಬಂಧ ಪರಿಶೀಲನೆ ನಡೆಸಿ ಸಾರ್ವಜನಿಕರ ಮನವಿಗಳನ್ನು ಆಲಿಸಿದರು.

Tumkur  DC visited various villages  Check drinking water supply snr

 ತುಮಕೂರು :  ಚಿಕ್ಕನಾಯಕನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಸಮರ್ಪಕ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆ ಸಂಬಂಧ ಪರಿಶೀಲನೆ ನಡೆಸಿ ಸಾರ್ವಜನಿಕರ ಮನವಿಗಳನ್ನು ಆಲಿಸಿದರು.

ಕುಡಿಯುವ ನೀರಿನ ಸಮಸ್ಯೆಗೆ ಒಳಗಾಗಿರುವ ಚಿಕ್ಕನಾಯಕನಹಳ್ಳಿ ತಾಲೂಕಿನ ಹೊಯ್ಸಳಕಟ್ಟೆ, ದಸೂಡಿ, ಬರಕನಹಾಳು, ಕಂದಿಕೆರೆ, ಮುದ್ದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿದರು.

ಮೊದಲಿಗೆ ಮುದ್ದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಬ್ಯೆಲಪ್ಪನಮಠ, ಎಂ.ಎಚ್. ಕಾವಲ್, ಕಂದಿಕೆರೆ ಗ್ರಾಪಂ ವ್ಯಾಪ್ತಿಯ ರಾಮಪ್ಪನಹಟ್ಟಿ, ಸಾದರಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರು ಮೇವಿನ ಬಗ್ಗೆ ಪರಿಶೀಲಿಸಿದರು.

ಬರಕನಹಾಳು ಗ್ರಾಪಂ ವ್ಯಾಪ್ತಿಯ ಬಾಲದೇವರಹಟ್ಟಿ ಗ್ರಾಮದ ರೈತ ಚೆನ್ನಪ್ಪ ಅವರ ಅಡಿಕೆ ತೋಟದಲ್ಲಿನ ಕೊಳವೆ ಬಾವಿ ವೀಕ್ಷಿಸಿದ ಜಿಲ್ಲಾಧಿಕಾರಿ ಕೊಳವೆಬಾವಿ ಕೊರೆಸಲು ಆಗಿರುವ ವೆಚ್ಚ, ಮೋಟಾರ್‌, ಲೈನ್ ಅಳವಡಿಕೆಗೆ ಆಗಿರುವ ವೆಚ್ಚದ ಮಾಹಿತಿ ರೈತರಿಂದ ಪಡೆದು ನಿರಂತರ ಜ್ಯೋತಿ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಸೂಚಿಸಿದರು.

ಮೇವಿನ ಕಿಟ್ ವಿತರಣೆ ಬಗ್ಗೆ ಮಾಹಿತಿ ಪಡೆದ ಅವರು, ರೈತರು ಮೇವಿನ ಕಿಟ್ ಬೀಜದಿಂದ ಬೆಳೆದಿರುವ ಮೇವನ್ನು ಪರಿಶೀಲಿಸಿ, ಮೇವಿನ ಕಿಟ್ ಅವಶ್ಯಕತೆಯಿರುವ ರೈತರಿಗೆ ಮೇವಿನ ಕಿಟ್ ವಿತರಿಸಲು ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರದ ಬೆಳೆ ಪರಿಹಾರದ ಮೊತ್ತ ರೈತರ ಖಾತೆಗೆ ಜಮೆ ಆಗಿರುವ ಬಗ್ಗೆ ರೈತರಿಂದ ಮಾಹಿತಿ ಪಡೆದರು. ಕೆಲವು ರೈತರು ಬರ ಪರಿಹಾರ ಮೊತ್ತವು ಖಾತೆಗೆ ಪಾವತಿಯಾಗಿಲ್ಲವೆಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ತಹಶೀಲ್ದಾರ್‌ ಗೀತಾ ಸಿ.ಜಿ. ಅವರಿಗೆ ಸೂಚಿಸಿದರು.

ಎಸ್‌ಡಿಆರ್‌ಎಫ್ ನಿಧಿಯಿಂದ ಇಲ್ಲಿಯವರೆಗೂ ವಿಪತ್ತು ನಿರ್ವಹಣೆಗಾಗಿ ಹಣ ಖರ್ಚಾಗದಿರುವ ಬಗ್ಗೆ ಮಾಹಿತಿ ಪಡೆದ ಅವರು, ಕೊಳವೆ ಬಾವಿಗೆ ಸಂಬಂಧಿಸಿದಂತೆ ಪೈಪ್ ಅಳವಡಿಕೆ ಮತ್ತಿತರ ವೆಚ್ಚಗಳಿಗೆ ಸಂಬಂಧಿಸಿದಂತೆ ಅನುದಾನ ಬಳಸಬಹುದಾಗಿದ್ದು, ಎಸ್‌ಡಿಆರ್‌ಎಫ್ ನಿಧಿಯನ್ನು ಕುಡಿಯುವ ನೀರಿನಯಡಿ ಬಳಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರೈತರ ಸಂತಸ: ಹೊಯ್ಸಳಕಟ್ಟೆ ಗ್ರಾಪಂನ ಕಲ್ಲೇನಹಳ್ಳಿ ಗ್ರಾಮದ ಕೊಳವೆಬಾವಿಗಳಲ್ಲಿ ನೀರಿನ ಕೊರತೆ ಇದ್ದು, ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ತುರ್ತು ಕ್ರಮಕೈಗೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ರವೀಶ್‌ಗೆ ಸೂಚಿಸಿದರು. ಅನಗತ್ಯವಾಗಿ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸುವ ಬದಲು ಹೆಚ್ಚುವರಿ ನೀರು ಹೊಂದಿರುವ ಖಾಸಗಿ ವ್ಯಕ್ತಿಗಳ ಕೊಳವೆ ಬಾವಿಯಿಂದ ಗರಿಷ್ಠ ಮೊತ್ತ ೨೦ಸಾವಿರದವರೆಗೆ ಹಣವನ್ನು ನೀಡಿ, ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲು ಅವಕಾಶವಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪಿಡಿಒ ಬಸವರಾಜು ಬಿ. ಅವರಿಗೆ ಸೂಚಿಸಿದರು. ಕಲ್ಲೇನಹಳ್ಳಿ ಗ್ರಾಮದ ರೈತರು ನಾವು ಪ್ರತಿ ದಿನ ಅಧಿಕಾರಿಗಳ ಭೇಟಿಗಾಗಿ ಅಲೆಯುವಂತಹ ಪರಿಸ್ಥಿತಿ ಇದೆ. ತಾವು ಜಿಲ್ಲೆಯ ಗ್ರಾಮಗಳಿಗೆ ಭೇಟಿ ನೀಡುತ್ತಿರುವುದರಿಂದ ಎಲ್ಲಾ ಅಧಿಕಾರಿಗಳು ತಮ್ಮೊಂದಿಗೆ ಆಗಮಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿರುವುದು ಇದೊಂದು ಉತ್ತಮ ಕಾರ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ದಸೂಡಿ ಗ್ರಾಪಂ ವ್ಯಾಪ್ತಿಯ ಬಲ್ಲಪ್ಪನಹಳ್ಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಗ್ರಾಮದ ರೈತ ಚಿತ್ತಪ್ಪ ಅವರ ಜಮೀನಿಗೆ ಭೇಟಿ ನೀಡಿ ರಾಗಿ ಬೆಳೆಯನ್ನು ಪರಿಶೀಲಿಸಿದರು.

ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಗ್ರಾಮಗಳಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿರುವ ಬಗ್ಗೆ ಫಲಾನುಭವಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ವಸಂತಕುಮಾರ್‌, ಕೃಷಿ ಅಧಿಕಾರಿ ರಾಧಮ್ಮ ಎಸ್., ಎಂಜಿನಿಯರ್‌ ಕಿರಣ್ ಕುಮಾರ್‌, ಸ್ಥಳೀಯ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು. 

Latest Videos
Follow Us:
Download App:
  • android
  • ios