Asianet Suvarna News Asianet Suvarna News

'ರಸ್ತೆ ಅಗೆಯುವ ಕಾಮಗಾರಿಗೆ ಅವಕಾಶವಿಲ್ಲ'..!

ಕಾಮಗಾರಿ ಹೆಸರಲ್ಲಿ ಬೇಕಾಬಿಟ್ಟಿ ರಸ್ತೆ ಅಗೆದು, ಹಾಗೇ ತೇಪೆ ಹಚ್ಚಿ ಹೋಗುವ ಗುತ್ತಿಗೆದಾರರಿಗೆ ತುಮಕೂರು ಡಿಸಿ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಕೈಗೊಂಡಿರುವ ಸ್ಮಾರ್ಟ್‌ ರಸ್ತೆ ಯೋಜನೆ ಪೂರ್ಣಗೊಂಡ ಬಳಿಕ ರಸ್ತೆ ಅಗೆಯುವ ಯಾವುದೇ ಕಾಮಗಾರಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಹೇಳಿದ್ದಾರೆ.

Tumkur DC says No construction work on Smart road
Author
Bangalore, First Published Jul 19, 2019, 11:03 AM IST
  • Facebook
  • Twitter
  • Whatsapp

ತುಮಕೂರು(ಜು.19): ನಗರದಲ್ಲಿ ಕೈಗೊಂಡಿರುವ ಸ್ಮಾರ್ಟ್‌ ರಸ್ತೆ ಯೋಜನೆ ಪೂರ್ಣಗೊಂಡ ಬಳಿಕ ರಸ್ತೆ ಅಗೆಯುವ ಯಾವುದೇ ಕಾಮಗಾರಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಮಾರ್ಟ್‌ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನ ವಿವಿಧ ಇಲಾಖೆಗಳ ವತಿಯಿಂದ ಕೈಗೊಳ್ಳಬಹುದಾದ ಕುಡಿಯುವ ನೀರು, ವಿದ್ಯುತ್‌, ಗ್ಯಾಸ್‌, ಬೀದಿ ದೀಪ, ನೀರಿನ ಸಂಪರ್ಕ, ಬಿಎಸ್‌ಎನ್‌ಎಲ್‌ ಕೇಬಲ್‌ ಅಳವಡಿಕೆ, ಯುಜಿಡಿ ಸಂಪರ್ಕ ಸೇರಿದಂತೆ ಮತ್ತಿತರ ರಸ್ತೆ ಅಗೆಯುವ ಕಾಮಗಾರಿಗಳನ್ನು ಪೂರ್ಣಗೊಳಿಸಿರಬೇಕು. ತದ ನಂತರ ಯಾವುದೇ ರಸ್ತೆ ಅಗೆಯುವ ಕಾಮಗಾರಿಗೆ ಅನುಮತಿ ನೀಡಲಾಗುವುಲ್ಲ ಎಂದರು.

ಬೆಸ್ಕಾಂ ಕಂಬಗಳ ಸ್ಥಳಾಂತರಕ್ಕೆ ಸೂಚನೆ:

ವರ್ತುಲ ರಸ್ತೆಯು ತುಮಕೂರು ನಗರಕ್ಕೆ ಅತಿ ಮುಖ್ಯ ಯೋಜನೆಯಾದ ಕಾರಣ ಲೈನ್‌ ಕ್ಲಿಯರೆನ್ಸ್‌ ತೆಗೆದುಕೊಂಡು ವರ್ತುಲ ರಸ್ತೆಯಲ್ಲಿರುವ ಬೆಸ್ಕಾಂ ಕಂಬಗಳನ್ನು ಹಾಗೂ ವಿದ್ಯುತ್‌ ಉಪಯುಕ್ತತೆಗಳನ್ನು ಸ್ಥಳಾಂತರಿಸಬೇಕೆಂದು ಬೆಸ್ಕಾಂ ಇಲಾಖೆಗೆ ಸೂಚಿಸಿದರು. ರಿಂಗ್‌ ರಸ್ತೆ ಪೇವ್‌ಮೆಂಟ್‌ ವ್ಯಾಪ್ತಿಯಲ್ಲಿ ಅಳವಡಿಸಿರುವ ಒಳಚರಂಡಿ ಯೋಜನೆಯ ಮ್ಯಾನ್‌ಹೋಲ್‌ ಹಾಗೂ ಕೊಳವೆ ಮಾರ್ಗವನ್ನು ಸ್ಥಳಾಂತರಿಸಬೇಕು ಎಂದು ಬೆಸ್ಕಾಂ ಹಾಗೂ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

15 ದಿನದೊಳಗೆ ಸರ್ವೇ ಮಾಡಿ:

ಕುಣಿಗಲ್‌ ಹಾಗೂ ಗುಬ್ಬಿ ರಸ್ತೆಯ ಕೆಲವು ಕಡೆ ಸ್ಥಳದ ವಿವಾದಗಳಿರುವ ಕಾರಣ, ಮತ್ತೊಮ್ಮೆ ಸರ್ವೆ ನಡೆಸಬೇಕು. ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು 15 ದಿನದೊಳಗೆ ಸರ್ವೆ ಮಾಡಿ, ಗಡಿ ಗುರುತು ಮಾಡಿಸಿ, ಕಲ್ಲುಗಳನ್ನು ನೆಡೆಸಿ ಕ್ರಮವಹಿಸಬೇಕೆಂದರಲ್ಲದೆ ಸರ್ವೆ ನಡೆಸಿದ ನಂತರ ಒತ್ತುವರಿಗಳಿದ್ದಲ್ಲಿ ಕೂಡಲೇ ತೆರವುಗೊಳಿಸಬೇಕು ಎಂದು ಪಾಲಿಕೆ ಅಧಿಕಾರಿ ಹಾಗೂ ಸ್ಮಾರ್ಟ್‌ ಸಿಟಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಸೂಚನೆ ನೀಡಿದರು.

ವರ್ತುಲ ರಸ್ತೆಯ ಮೇಲೆ ಹಾದುಹೋಗಿರುವ ಹೈಟೆನ್ಷನ್‌ ಕೇಬಲ್‌ಗಳನ್ನು ಕೆಪಿಟಿಸಿಎಲ್‌ನ ಎಂಪ್ಯಾನೆಲ್ಡ್‌ ಸರ್ವೇಯರ್‌ಗಳಿಂದ ಸರ್ವೆ ಮಾಡಿಸಿ ಸ್ಥಳಾಂತರಿಸಬೇಕು ಎಂದು ಕೆಪಿಟಿಸಿಎಲ್‌ ಹಾಗೂ ಸ್ಮಾರ್ಟ್‌ ಸಿಟಿ ಅಧಿಕಾರಿಗಳಿಗೆ ಡಿಸಿ ರಾಕೇಶ್‌ಕುಮಾರ್‌ ತಾಕೀತು ಮಾಡಿದರು.

ಅನಾಹುತಗಳಿಗೆ ಗುತ್ತಿಗೆದಾರರೆ ಹೊಣೆ:

ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಹಿನ್ನಲೆಯಲ್ಲಿ ನಗರದ ವರ್ತುಲ ರಸ್ತೆ ಮತ್ತು ರಾಧಾಕೃಷ್ಣ ರಸ್ತೆಯಲ್ಲಿರುವ ಮರಗಳನ್ನು ಸ್ಥಳಾಂತರಿಸಲು ಹಾಗೂ ತೆರವುಗೊಳಿಸಲು ಅರಣ್ಯ ಇಲಾಖೆಯು ಕೂಡಲೇ ಅನುಮತಿ ನೀಡಬೇಕು. ರಸ್ತೆ ಕಾಮಗಾರಿಯಲ್ಲಿ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸುವವರು ಭಾರತ ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಸ್ಮಾರ್ಟ್‌ ಸಿಟಿಯ ರಸ್ತೆ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಹಾಗೂ ಯಾವುದೇ ಅನಾಹುತಗಳು ನಡೆದಲ್ಲಿ ಸಂಬಂಧಪಟ್ಟ ಗುತ್ತಿಗೆದಾರರೇ ಸಂಪೂರ್ಣ ಜವಾಬ್ದಾರಿಯಾಗಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಪಾಲಿಕೆ ಆಯುಕ್ತ ಭೂಬಾಲನ್‌, ಎಸ್ಪಿ ಡಾ.ಶೋಭಾರಾಣಿ, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ರಂಗಸ್ವಾಮಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Follow Us:
Download App:
  • android
  • ios