ತಾಲೂಕಿನಲ್ಲಿ ಪ್ರತಿದಿನ 1.20 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಪಟ್ಟಣದ ಸಮೀಪ ನೂತನವಾಗಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಉದ್ಘಾಟಿಸಲಾಯಿತು. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಅವರು ಹಾಲು ಉತ್ಪಾದಕರಿಗೆ ವಿಮೆ, ಆರ್ಥಿಕ ನೆರವು ಸೇರಿದಂತೆ ಹಲವು ಸೌಲಭ್ಯಗಳನ್ನು ಘೋಷಿಸಿದರು.

ತುಮಕೂರು: ತುರುವೇಕೆರೆ ತಾಲೂಕಿನಲ್ಲಿರುವ ಸುಮಾರು 130 ಹಾಲು ಉತ್ಪಾದಕರ ಸಹಕಾರ ಸಂಘದ ಮೂಲಕ ಜಿಲ್ಲಾ ಹಾಲು ಒಕ್ಕೂಟಕ್ಕೆ ಪ್ರತಿದಿನ ಸರಾಸರಿ 1.20 ಲಕ್ಷ ಲೀಟರ್ ಹಾಲು ಶೇಖರಣೆ ಮಾಡಲಾಗುತ್ತಿದೆ. ಅದರ ಮೊತ್ತ ತಿಂಗಳಿಗೆ ಸುಮಾರು 13.50 ಕೋಟಿ ಆಗಲಿದ್ದು ಅಷ್ಟೂ ಹಣವನ್ನು ಹಾಲು ಉತ್ಪಾದಕರ ಖಾತೆಗೆ ನೇರವಾಗಿ ಹಾಕಲಾಗುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಟ್ಟಣಕ್ಕೆ ಹೊಂದಿಕೊಂಡಂತಿರುವ ವಿಶ್ವನಾಥಪುರ ಮಾಳೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಆರ್ಥಿಕ ನೆರವು, ವಿಮೆ ಸೌಲಭ್ಯ

ಜಿಲ್ಲೆಯ ಹಾಲು ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುವ ರೈತಾಪಿಗಳಿಗೆ ಉತ್ತಮ ಸೇವೆಯೂ ದೊರೆಯಲಿದೆ. ರೈತರಿಗೆ ಅಗತ್ಯವಿರುವ ಪರಿಕರಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. ಹಾಲು ಉತ್ಪಾದಕರು ಮೃತ ಪಟ್ಟರೆ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಗುವುದು. ರಾಸುಗಳು ಮೃತಪಟ್ಟರೂ ಸಹ ವಿಮೆ ಸೌಲಭ್ಯ ನೀಡಲಾಗುವುದು. ಉತ್ಪಾದಕರ ಮಕ್ಕಳಿಗೆ ಹೆಚ್ಚಿನ ಶಿಕ್ಷಣಕ್ಕೆ ಪ್ರೋತ್ಸಾಹ ಧನ ನೀಡಲಾಗುವುದು. ಉಚಿತ ವಸತಿ ನಿಲಯ ತೆರೆಯಲಾಗಿದೆ ಎಂದು ಸಿ.ವಿ.ಮಹಲಿಂಗಯ್ಯ ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಸಹಕಾರ ಸಂಘದ ಅಧ್ಯಕ್ಷೆ ವಿನೋಧ ವಹಿಸಿದ್ದರು. ಸದಸ್ಯರಾದ ಹೇಮಾವತಿ, ಚಂದನ, ಭಾಗ್ಯಮ್ಮ, ಸುಮಿತ್ರಮ್ಮ, ಶೋಭಾ, ರೇಣುಕಮ್ಮ, ಶೋಭಾ ಶಿವಕುಮಾರ್, ಮಹಾಲಕ್ಷ್ಮಮ್ಮ, ವೀಣಾ, ರೇಣುಕಮ್ಮ ಮಹೇಶ್, ವಿನೋಧಾ ಮಂಜುನಾಥ್, ವಿಸ್ತರಣಾಧಿಕಾರಿ ಕಿರಣ್ ಕುಮಾರ್ , ಕಾರ್ಯದರ್ಶಿ ಮಮತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಸ್ತೀರಣಾಧಿಕಾರಿ ಕಿರಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.