Asianet Suvarna News Asianet Suvarna News

ಓದುಗರಿಗೆ ಬೇಕಿದೆ ಡಿಜಿಟಲ್ ಲೈಬ್ರರಿ ಸೌಲಭ್ಯ

ಮಾಹಿತಿ ಮತ್ತು ತಂತ್ರಜ್ಞಾನದ ಯುಗದಲ್ಲಿ ಗ್ರಂಥಾಲಯದತ್ತ ಯುವಜನತೆ ಆಕರ್ಷಿತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜ್ಞಾನಾರ್ಜನೆ ಕೇಂದ್ರವಾಗಬೇಕಿದ್ದ ಸಾರ್ವಜನಿಕ ಗ್ರಂಥಾಲಯಗಳು ಸರ್ಕಾರದ ನಿರ್ಲಕ್ಷ್ಯದಿಂದ ತನ್ನ ಅಸ್ತಿತ್ವಕ್ಕಾಗಿ ಹೋರಾಡುವಂಥ ಪರಿಸ್ಥಿತಿ ಎದುರಾಗಿದೆ.

Tumakur  :  Readers need digital library facility snr
Author
First Published Dec 12, 2023, 8:54 AM IST

ಜಿ.ಎಲ್. ಸುರೇಶ್

 ಕೊರಟಗೆರೆ:  ಮಾಹಿತಿ ಮತ್ತು ತಂತ್ರಜ್ಞಾನದ ಯುಗದಲ್ಲಿ ಗ್ರಂಥಾಲಯದತ್ತ ಯುವಜನತೆ ಆಕರ್ಷಿತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜ್ಞಾನಾರ್ಜನೆ ಕೇಂದ್ರವಾಗಬೇಕಿದ್ದ ಸಾರ್ವಜನಿಕ ಗ್ರಂಥಾಲಯಗಳು ಸರ್ಕಾರದ ನಿರ್ಲಕ್ಷ್ಯದಿಂದ ತನ್ನ ಅಸ್ತಿತ್ವಕ್ಕಾಗಿ ಹೋರಾಡುವಂಥ ಪರಿಸ್ಥಿತಿ ಎದುರಾಗಿದೆ.

ಕೊರಟಗೆರೆ ಪಟ್ಟಣದ ಅಂಬೇಡ್ಕರ್ ಭವನ ಪಕ್ಕದಲ್ಲಿರುವ ಸಾರ್ವಜನಿಕ ಗಂಥಾಲಯಕ್ಕೆ ಒಮ್ಮೆ ಭೇಟಿ ನೀಡಿದರೆ ಇಲ್ಲಿನ ಅವ್ಯವಸ್ಥೆಗಳ ಸಾಕ್ಷಾತ್ ದರ್ಶನವಾಗುತ್ತದೆ. ಸ್ವಂತ ಕಟ್ಟಡವಿದೆ ಆ ಕಟ್ಟಡ ಈಗ ಶಿಥಿಲಗೊಂಡಿದ್ದು, ತಾಲೂಕು ಕೇಂದ್ರವಾದ ಕೊರಟಗೆರೆ ಶಾಖೆಗೆ ಸುಸಜ್ಜಿತವಾದ ಕಟ್ಟಡವಿಲ್ಲದಿರುವುದು ವಿಪರ್ಯಾಸದ ಸಂಗತಿಯೆಂದು ಸಾರ್ವಜನಿಕರು ಮಾತನಾಡುವಂತಾಗಿದೆ.

ಈ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ಕಥೆ, ಕಾದಂಬರಿ, ಇನ್ನೂ ಇತರೆ ವಿವಿಯ 50 ಸಾವಿರಕ್ಕೂ ಅಧಿಕ ಪುಸ್ತಕಗಳು ಸೇರಿದಂತೆ ಅನೇಕ ಕನ್ನಡ, ಇಂಗ್ಲೀಷ್ ಸೇರಿದಂತೆ ಇತರೆ ದಿನಪತ್ರಿಕೆಗಳು ಇದ್ದರೂ ಗ್ರಂಥಾಲಯ ಕಿರಿದಾಗಿರುವುದು ಒಂದೆಡೆಯಾದರೆ ಕಬೋರ್ಡ್ ಸಮಸ್ಯೆಯಿಂದ ಸಾವಿರಾರು ಪುಸ್ತಕಗಳು ಚೀಲದಲ್ಲೇ ಉಳಿದಿದೆ. ಆದ್ದರಿಂದ ಓದುಗರು ಗಂಥಾಲಯದತ್ತ ಮುಖ ಮಾಡಲು ಹಿಂಜರಿಯುವಂತಾಗಿದೆ.

ಸಾರ್ವಜನಿಕ ಗ್ರಂಥಾಲಯ ಮಳೆಯಿಂದ ರಕ್ಷಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ಮತ್ತೊಂದೆಡೆ ಮಳೆ ಜೋರಾಗಿ ಬಿದ್ದರೇ ಎಲ್ಲಿ ಕುಸಿದುಬೀಳುತ್ತದೆ. ಎಂಬ ಆತಂಕ ಬಂದೊದಗಿದೆ. ಮಳೆ ಬಂದರೆ ಬಹುತೇಕ ಸೋರುತ್ತದೆ. ಇಲ್ಲಿರುವ ಬೆಲೆಬಾಳುವ ಪುಸ್ತಕಗಳಿಗೆ ರಕ್ಷಣೆಯಿಲ್ಲದಂತಾಗಿದೆ.

ನಗರ ಪ್ರದೇಶದಲ್ಲಿ ಶೋಚನೀಯ

ಉತ್ತಮ ಸಾಹಿತಿಗಳು, ಬರಹಗಾರರ ಪುಸ್ತಕಗಳು ಇಂಟರ್‌ನೆಟ್‌ನಲ್ಲಿ ದೊರೆಯುತ್ತಿರುವುದರಿಂದ ಕಾಲ ಕ್ರಮೇಣ ಸಾರ್ವಜನಿಕ ಗ್ರಂಥಾಲಯಗಳನ್ನು ಗ್ರಾಮ ಪಂಚಾಯಿತಿಗಳಿಗೆ ನಿರ್ವಹಣೆ ನೀಡಿ ಅದರ ಮೂಲಕ ಅಭಿವೃದ್ಧಿಗೊಳಿಸುವ ಪ್ರಯತ್ನ ನಡೆಯುತ್ತಿದೆ. ಸಾರ್ವಜನಿಕರ ಗಂಥಾಲಯಗಳನ್ನು ಆಕರ್ಷಿಸಲು ಡಿಜಿಟಲ್ ಲೈಬ್ರರಿ ಮಾಡಲು ಪ್ರಯತ್ನಗಳು ಸಾಗಿದೆ, ಆದರೆ ನಗರ ಪ್ರದೇಶದಲ್ಲಿ ಕಟ್ಟಡದ ಕೊರತೆಯಿಂದ ಸಾರ್ವಜನಿಕ ಗ್ರಂಥಾಲಯದ ಸ್ಥಿತಿ ಮಾತ್ರ ಬದಲಾವಣೆ ಆಗದಿರುವುದು ದುರಂತವೇ ಸರಿ.

ಶಿಥಿಲವಾಗಿರುವ ಸೀಲಿಂಗ್

ಒಂದೆಡೆ ಮಳೆಯಿಂದ ಗ್ರಂಥಾಲಯದ ಗೋಡೆಗಳು ನೆನೆದು ತನ್ನ ಸ್ವರೂಪ ಕಳೆದುಕೊಂಡಿದ್ದು, ಹೊರಭಾಗ ಆವಾಚಿ ಆವರಿಸಿ ಕಟ್ಟಡ ಯಾವ ಕ್ಷಣದಲ್ಲಿ ಕುಸಿದು ಬೀಳುತ್ತದೆ ಎಂಬ ಆತಂಕ ಓದುಗರಲ್ಲಿ ಮನೆ ಮಾಡಿದೆ. ಗ್ರಂಥಾಲಯದಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿ ಸಹ ಶಿಥಿಲ ವ್ಯವಸ್ಥೆಯಲ್ಲಿರುವ ಗ್ರಂಥಾಲಯದಲ್ಲಿ ಆತಂಕದಿಂದ ತಮ್ಮ ಕರ್ತವ್ಯ ನಿರ್ವಹಿಸುವಂತಾಗಿದೆ.

ಮೀನಮೇಷ ಏಕೆ?

ಕಟ್ಟಡದ ಸಮಸ್ಯೆಯ ಬಗ್ಗೆ ಗ್ರಂಥಪಾಲಕರು ಹಲವು ಬಾರಿ ಸಂಬಂಧಿತ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಸಮಸ್ಯೆಯನ್ನು ಬಗೆಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೂಡಲೇ ಸರ್ಕಾರ ಮತ್ತು ಸಂಬಂಧಿಸಿದ ಇಲಾಖಾಧಿಕಾರಿಗಳು ಕಟ್ಟಡವನ್ನು ನಿರ್ಮಿಸಿ ಓದುಗರಿಗೆ ಅನುಕೂಲ ಮಾಡಿಕೊಡದೆ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಮಹಿಳಾ ಓದುಗರರಿಗೆ ಶೌಚಾಲಯವಿಲ್ಲ, ಮಳೆ ಬಂದರೆ ಕಟ್ಟಡವು ಸೋರುತ್ತದೆ, ಮಳೆಗಾಲದಲ್ಲಿ ಪುಸ್ತಕವನ್ನು ರಕ್ಷಣೆ ಮಾಡಲು ಪರದಾಡುವುಂತಾಗಿದೆ. ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.

-ಲಕ್ಷ್ಮೀ ಗ್ರಂಥಾಲಯ ಮೇಲ್ವಿಚಾರಕಿ, ಕೊರಟಗೆರೆ

-----

ವರ್ಷದಿಂದ ಇಲ್ಲಿನ ಗ್ರಂಥಾಲಯಕ್ಕೆ ಬಂದು ಪ್ರತಿನಿತ್ಯ ಸ್ಪರ್ಧಾತ್ಮಕ ಪರೀಕ್ಷೆಗೆ ಪುಸ್ತಕಗಳನ್ನು ಓದುತ್ತಿದ್ದೇನೆ, ಕೇವಲ 10 ಮಂದಿಯಷ್ಟೇ ಕುಳಿತು ಓದಲು ಸಾಧ್ಯ. ಕೊಠಡಿಯ ಸಮಸ್ಯೆಯ ಜೊತೆಗೆ ಶೌಚಾಲಯವಿಲ್ಲ, ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಅವಶ್ಯಕ ಪುಸ್ತಕಗಳು ಇದ್ದರೂ ನಮಗೆ ಸಿಗದೆ ಚೀಲದಲ್ಲೇ ಉಳಿದಿದೆ, ಪುಸ್ತಕ ಜೋಡಿಸಲು ಸ್ಥಳಾವಕಾಶದ ಕೊರತೆಯಿದ್ದು ಗ್ರಂಥಾಲಯದ ಹೊಸ ಕಟ್ಟಡ ನಿರ್ಮಿಸಿ ವಿದ್ಯಾರ್ಥಿಗಳಿಗೆ ಓದಲು ಅನುಕೂಲ ಮಾಡಿಕೊಡಬೇಕು.

- ಹರ್ಷಿತ, ವಿದ್ಯಾರ್ಥಿನಿ, ಕೊರಟಗೆರೆ.

ಸರ್ಕಾರಿ ಹುದ್ದೆಯಿಂದ ನಿವೃತ್ತಗೊಂಡ ನಂತರ ದಿನಗಳಿಂದಲೂ ಪ್ರತಿನಿತ್ಯ ಈ ಗ್ರಂಥಾಲಯಕ್ಕೆ ದಿನಪತ್ರಿಕೆ ಮತ್ತು ಕಥೆ, ಕಾದಂಬರಿ ಪುಸ್ತಕಗಳನ್ನು ಓದಲು ಬರುತ್ತೇನೆ. ಕೊಠಡಿಯು ಕಿರಿದಾಗಿರುವ ಕಾರಣ ಪುಸ್ತಕಗಳನ್ನು ಇಲ್ಲಿನ ಸಿಬ್ಬಂದಿ ಜೋಡಿಸಿಲ್ಲ. ಇವರಿಗೆ ಶೌಚಾಲಯ ಸಹವಿಲ್ಲ, ಹೊಸ ಕಟ್ಟಡದ ಜೊತೆಗೆ ಶೌಚಾಲಯ ನಿರ್ಮಿಸಿ ಓದುಗರಿಗೆ ಅನುಕೂಲ ಮಾಡಿಕೊಡಬೇಕು.

-ಮಹಾದೇವಯ್ಯ, ಹಿರಿಯ ನಾಗರಕ, ಕೊರಟಗೆರೆ

Follow Us:
Download App:
  • android
  • ios