Asianet Suvarna News Asianet Suvarna News

ತುಮಕೂರು: ಸದ್ದಿಲ್ಲದೆ ಸಂಚರಿಸುತ್ತಿದೆ ‘ನರಹಂತಕ’ ಚಿರತೆ!

ಒಂದೇ ತಿಂಗಳಲ್ಲಿ ಇಬ್ಬರ ರಕ್ತ ಹೀರಿರುವ ‘ನರ ಹಂತಕ’ ಚಿರತೆ ತನ್ನ ಜಾಡು ಬದಲಾಯಿಸದೆ ಮತ್ತೊಂದು ನರಬಲಿಗಾಗಿ ಸದ್ದಿಲ್ಲದೆ ಸಂಚಾರ ಮಾಡುತ್ತಿದೆ. ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿ ಹಾಗೂ ಕುಣಿಗಲ್‌ ತಾಲೂಕಿನ ಕೊತ್ತಗೆರೆ ಹೋಬಳಿ ವ್ಯಾಪ್ತಿಯಲ್ಲಿ ಒಂದೇ ತಿಂಗಳಲ್ಲಿ ಇಬ್ಬರ ರಕ್ತ ಹೀರಿರುವ ಈ ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ.

Tumakur forest officers trying to capture cheetah
Author
Bangalore, First Published Dec 3, 2019, 12:54 PM IST

ತುಮಕೂರು(ಡಿ.03): ಒಂದೇ ತಿಂಗಳಲ್ಲಿ ಇಬ್ಬರ ರಕ್ತ ಹೀರಿರುವ ‘ನರ ಹಂತಕ’ ಚಿರತೆ ತನ್ನ ಜಾಡು ಬದಲಾಯಿಸದೆ ಮತ್ತೊಂದು ನರಬಲಿಗಾಗಿ ಸದ್ದಿಲ್ಲದೆ ಸಂಚಾರ ಮಾಡುತ್ತಿದೆ.

ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿ ಹಾಗೂ ಕುಣಿಗಲ್‌ ತಾಲೂಕಿನ ಕೊತ್ತಗೆರೆ ಹೋಬಳಿ ವ್ಯಾಪ್ತಿಯಲ್ಲಿ ಒಂದೇ ತಿಂಗಳಲ್ಲಿ ಇಬ್ಬರ ರಕ್ತ ಹೀರಿರುವ ಈ ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ.

ತಾಪಂ ಅಧ್ಯಕ್ಷ, ಪಿಡಿಒಗೆ ಅಶುದ್ಧ ನೀರು ಕುಡಿಸಿದ ಮಕ್ಕಳು!

ಒಂದು ತಿಂಗಳ ಹಿಂದೆ ಹೆಬ್ಬೂರು ಹೋಬಳಿಗೆ ಸೇರಿದ ಬಿನ್ನಿಕುಪ್ಪೆಯಲ್ಲಿ ಮಹಿಳೆಯೊಬ್ಬಳ ರಕ್ತ ಹೀರಿದ ಈ ಚಿರತೆ ಮೂರು ದಿವಸಗಳ ಹಿಂದೆ ಕುಣಿಗಲ್‌ ತಾಲೂಕು ದೊಡ್ಡಮಳಲವಾಡಿ ಗ್ರಾಮದಲ್ಲಿ ಇನ್ನೊಬ್ಬ ರೈತನ ರಕ್ತ ಹೀರಿದೆ. ನೀಲಗಿರಿ ತೋಪಿನಿಂದ ಬಂದ ಈ ಚಿರತೆ ಜನರು ನೋಡ ನೋಡುತ್ತಿದ್ದಂತೆ ರಕ್ತ ಹೀರಿ ಹೊರಟು ಹೋಗಿದೆ. ತಿಂಗಳ ಅವಧಿಯಲ್ಲಿ ಇಬ್ಬರ ರಕ್ತ ಹೀರಿದ ಚಿರತೆ ಬಗ್ಗೆ ಅಕ್ಷರಶಃ ಜನ ಭಯಭೀತಗೊಂಡು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿದ ಬೆನ್ನಲ್ಲೇ ಕಾರ್ಯಪ್ರವೃತ್ತವಾಗಿರುವ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗಾಗಿ ನಾಲ್ಕು ತಂಡಗಳನ್ನು ರಚಿಸಿದೆ.

ಹಿಂದೆ ಮಗುವನ್ನು ಹೊತ್ತೊಯ್ದಿತ್ತು:

ತುಮಕೂರು ಜಿಲ್ಲೆಯಲ್ಲಿ ಚಿರತೆಗಳು ಮನುಷ್ಯರನ್ನು ಕೊಂದ ಉದಾರಹಣೆ ಇಲ್ಲ. 8 ವರ್ಷಗಳ ಕೆಳಗೆ ದೇವಸ್ಥಾನದ ಮುಂದೆ ಆಟವಾಡುತ್ತಿದ್ದ ಮಗುವೊಂದನ್ನು ಚಿರತೆಯೊಂದು ಕಚ್ಚಿಕೊಂಡು ಹೋಗಿತ್ತು. ಅದನ್ನು ಬಿಟ್ಟರೆ ಯಾವುದೇ ಘಟನೆಗಳು ನಡೆದಿರಲಿಲ್ಲ. ಆದರೆ ಒಂದೇ ತಿಂಗಳ ಅವಧಿಯಲ್ಲಿ ಇಬ್ಬರ ರಕ್ತ ಹೀರಿರುವ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಪಣ ತೊಟ್ಟಿರುವ ಅರಣ್ಯ ಇಲಾಖೆಗೆ ಈ ಚಿರತೆ ಚಳ್ಳೆ ಹಣ್ಣು ತಿನ್ನಿಸುತ್ತಲೇ ಇದೆ.

ನರಹಂತಕ ಚಿರತೆ ಸೆರೆಗೆ 4 ತಂಡಗಳ ರಚನೆ:

ಶತಾಯಗತಾಯ ಈ ಚಿರತೆಯನ್ನು ಸೆರೆ ಹಿಡಿಯಲೇಬೇಕೆಂದು ಪಣ ತೊಟ್ಟಿರುವ ಅರಣ್ಯ ಇಲಾಖೆ ಆಪರೇಷನ್‌ ಚಿರತೆಗಾಗಿ ನಾಲ್ಕು ತಂಡಗಳನ್ನು ರಚಿಸಿದೆ. ಚಿರತೆ ಸಂಚಾರವಿರುವ ಕಡೆ 16 ಬೋನ್‌ಗಳನ್ನು ಇಡಲಾಗಿದೆ. ಅದರಲ್ಲಿ ನಾಯಿಯನ್ನು ಕಟ್ಟಿಹಾಕಲಾಗಿದೆ. ನಾಯಿ ಬೇಟೆಗೆ ಬರುವ ಚಿರತೆ ಬೋನಿಗೆ ಸಿಲುಕಬಹುದು ಎಂಬ ನಿರೀಕ್ಷೆಯಲ್ಲಿ ಅರಣ್ಯ ಇಲಾಖೆ ಇದೆ. ಆದರೆ ಬೋನು ಇಟ್ಟು ಎರಡು ದಿವಸಗಳೇ ಕಳೆದರೂ ಚಿರತೆ ಮಾತ್ರ ಇತ್ತ ಕಡೆ ಬಂದಿಲ್ಲ. ಈ ಮಧ್ಯೆ ಕುಣಿಗಲ್‌ ತಾಲೂಕಿನ ಹುಲಿಯೂರುದುರ್ಗ ಹೋಬಳಿಯಲ್ಲೂ ಕೂಡ ಚಿರತೆಗಳ ಸಂಚಾರ ಕಾಣಿಸಿಕೊಂಡಿದ್ದು ಅರಣ್ಯಇಲಾಖೆಗೆ ದೊಡ್ಡ ತಲೆನೋವಾಗಿದೆ.

ಸಿಸಿ ಕ್ಯಾಮೆರಾ ಅಳವಡಿಕೆ

ಚಿರತೆಯನ್ನು ಸೆರೆ ಹಿಡಿಯಬೇಕೆಂಬ ನಿಟ್ಟಿನಲ್ಲಿ ಅರಣ್ಯ ಇಲಾಖೆ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದು ಇದಕ್ಕಾಗಿ ಸಂಭಾವ್ಯ ಚಿರತೆ ಸಂಚಾರ ಇರುವ ಕಡೆ 10 ಸಿಸಿ ಕ್ಯಾಮರಾಗಳನ್ನು ಅಳವಡಿಸಿದೆ. ಅಲ್ಲದೇ ಚಿರತೆ ಹೆಜ್ಜೆ ಗುರುತಿನ ಬಗ್ಗೆ ನಿಗಾ ಇಡಲಾಗಿದೆ.

ಮಂಗಳೂರು: ಸತ್ತು 9 ತಿಂಗಳ ನಂತರ ಸೌದಿಯಿಂದ ಬಂತು ಮೃತದೇಹ..!

ಒಟ್ಟಾರೆಯಾಗಿ ಕಳೆದ ಒಂದು ತಿಂಗಳಿನಿಂದ ಜನರ ಪಾಲಿಗೆ ದುಸ್ವಪ್ನವಾಗಿರುವ ನರಹಂತಕ ಚಿರತೆಗಾಗಿ ಅರಣ್ಯ ಇಲಾಖೆ ನಡೆಸಿರುವ ಆಪರೇಷನ್‌ ಚಿರತೆ ಯಶಸ್ವಿಯಾಗಿ ಜನರನ್ನು ಭಯಮುಕ್ತರನ್ನಾಗಿ ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಚಿರತೆ ಸಂತತಿ ಹೆಚ್ಚಳ

ಚಿರತೆಗಳ ಸಂತತಿ ನಡೆಯದೇ ಇದ್ದರೂ ಚಿರತೆ ಸಂತತಿ ಹೆಚ್ಚಿದೆ ಎಂದು ಮೂಲಗಳು ದೃಢಪಡಿಸಿವೆ. ಮೊದಲೆಲ್ಲಾ ಕೇವಲ ಒಂದೆರೆಡು ತಾಲೂಕುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಈಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಾಣ ಸಿಗುತ್ತಿದೆ. ಈ ಹಿಂದೆ ಹೆಬ್ಬೂರು ಬಳಿ ತನ್ನೆರೆಡು ಮರಿಗಳೊಂದಿಗೆ ಹೋಗುತ್ತಿದ್ದ ಚಿರತೆ ಅಪಘಾತಕ್ಕೆ ಸಿಲುಕಿತ್ತು. ಈ ಅಪಘಾತದಲ್ಲಿ ಚಿರತೆ ಮತ್ತು ಒಂದು ಮರಿ ಸಾವನ್ನಪ್ಪಿತ್ತು. ಮತ್ತೊಂದು ಮರಿ ರಸ್ತೆ ಪಕ್ಕದ ಬೇಲಿ ಬಳಿ ನಿತ್ರಾಣಗೊಂಡಿದ್ದು ಪತ್ತೆಯಾಗಿತ್ತು.

ಒಂದೇ ಚಿರತೆಯೇ...?

ಒಂದೇ ತಿಂಗಳ ಅವಧಿಯಲ್ಲಿ ಇಬ್ಬರ ರಕ್ತ ಹೀರಿರುವುದು ಒಂದೇ ಚಿರತೆಯೇ ಅಥವಾ ಮತ್ತೊಂದು ಚಿರತೆ ನರಹಂತಕವಾಗಿದೆಯೇ ಎಂಬ ಬಗ್ಗೆ ಅರಣ್ಯ ಇಲಾಖೆ ಗೊಂದಲದಲ್ಲಿ ಸಿಲುಕಿದೆ. ಈಗಾಗಲೇ ಕುಣಿಗಲ್‌ ತಾಲೂಕಿನಲ್ಲಿ ವ್ಯಾಪಕವಾಗಿ ಚಿರತೆಗಳು ಸಂಚಾರ ನಡೆಸುತ್ತಿರುವುದರಿಂದ ಒಂದು ವೇಳೆ ಬೋನಿಗೆ ಬೀಳುವ ಚಿರತೆ ನರಹಂತಕ ಚಿರತೆಯೇ ಅಥವಾ ಮಾಮೂಲು ಚಿರತೆಯೇ ಎಂಬ ಗೊಂದಲ ಇದೆ.

ಮುಖ್ಯಾಂಶಗಳು

  •  ಇಬ್ಬರ ರಕ್ತ ಹೀರಿದ ನರಹಂತಕ ಚಿರತೆಗಾಗಿ 4 ತಂಡಗಳ ರಚನೆ
  •  ಕೊತ್ತಗೆರೆ ಹೋಬಳಿಯಲ್ಲಿ ಭರ್ತಿ 16 ಬೋನ್‌ಗಳನ್ನು ಇಡಲಾಗಿದೆ
  •  10 ಕಡೆ ಸಿಸಿ ಕ್ಯಾಮರಾ ಅಳವಡಿಕೆ, ಚಿರತೆ ಸಂಚಾರದ ಬಗ್ಗೆ ನಿಗಾ
  •  ಗಣತಿಯಾಗದಿದ್ದರೂ ಜಿಲ್ಲೆಯಲ್ಲಿ ಚಿರತೆ ಸಂತತಿ ಗಣನೀಯ ಹೆಚ್ಚಳ

-ಉಗಮ ಶ್ರೀನಿವಾಸ್‌

Follow Us:
Download App:
  • android
  • ios