ಸರ್ಕಾರ ನೀಡುವ ಸವಲತ್ತುಗಳನ್ನು ಅಧಿಕಾರಿಗಳು ನೀಡದಿದ್ದರೂ, ತಲುಪಿಸಲು ತಡ ಮಾಡಿದರೂ ಸಹ ಲೋಕಾಯುಕ್ತಕ್ಕೆ ದೂರು ನೀಡಿ ಎಂದು ಜಿಲ್ಲಾ ಲೋಕಾಯುಕ್ತ ಎಸ್ಪಿ ವಲಿಬಾಷಾ ಸಾರ್ವಜನಿಕರಿಗೆ ಕರೆ ನೀಡಿದರು.

 ತುರುವೇಕೆರೆ : ಸರ್ಕಾರ ನೀಡುವ ಸವಲತ್ತುಗಳನ್ನು ಅಧಿಕಾರಿಗಳು ನೀಡದಿದ್ದರೂ, ತಲುಪಿಸಲು ತಡ ಮಾಡಿದರೂ ಸಹ ಲೋಕಾಯುಕ್ತಕ್ಕೆ ದೂರು ನೀಡಿ ಎಂದು ಜಿಲ್ಲಾ ಲೋಕಾಯುಕ್ತ ಎಸ್ಪಿ ವಲಿಬಾಷಾ ಸಾರ್ವಜನಿಕರಿಗೆ ಕರೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆಸಿದ ಸಾರ್ವಜನಿಕರು ಮತ್ತು ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಅವರು ತಿಳಿಸಿದರು. ಸರ್ಕಾರ ನೀಡುವ ಸವಲತ್ತುಗಳು ನಿಜವಾದ ಫಲಾನುಭವಿಗಳಿಗೆ ತಲುಪಬೇಕು. ತಲುಪದಿದ್ದಲ್ಲಿ ಅದೂ ಸಹ ಅಪರಾಧವಾಗುತ್ತದೆ. ಸಾರ್ವಜನಿಕರು ನೀಡುವ ದೂರುಗಳು ಅಥವಾ ಮನವಿಗಳಿಗೆ ನಿಯಮಾನುಸಾರ ಉತ್ತರ ನೀಡದಿದ್ದರೂ ಸಹ ಅಪರಾಧವಾಗುತ್ತದೆ. ಆ ಸಂಬಂಧವೂ ಸಹ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಬಹುದಾಗಿದೆ. ಅಧಿಕಾರಿಗಳು ಸರ್ಕಾರ ಸವಲತ್ತುಗಳ ಬಗ್ಗೆ ಸಾರ್ವಜನಿಕ ಸ್ಥಳದಲ್ಲಿ ಮಾಹಿತಿಯನ್ನು ಪ್ರಚುರಪಡಿಬೇಕು. ತಮ್ಮ ಕಚೇರಿಗಳ ಮುಂಭಾಗ ಅಂಟಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಎಸ್ಪಿ ವಲಿಭಾಷಾ ಹೇಳಿದರು.

ತಾಯಿಗೆ ಪರಿಹಾರ: ತಮ್ಮ ತಾಯಿಗೆ ಅನಾರೋಗ್ಯವಿರುವ ಕಾರಣ ತಮ್ಮಿಂದ ದೂರವಿರುವ ಹೆತ್ತ ಮಕ್ಕಳಿಂದಲೇ ಪ್ರತಿ ತಿಂಗಳೂ ಪರಿಹಾರ ಧನ ಕೊಡಿಸಬೇಕೆಂದು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು. ಆದರೂ ಸಹ ಅವರು ಇದುವರೆಗೂ ಹಣ ನೀಡುತ್ತಿಲ್ಲ. ದಯಮಡಿ ತಾಯಿಗೆ ಅವರ ಮಕ್ಕಳಿಂದಲೇ ಹಣ ಕೊಡಿಸಬೇಕೆಂದು ರಾಘವೇಂದ್ರ ಎಂಬುವವರು ಲೋಕಾಯುಕ್ತರಿಗೆ ಮನವಿ ಮಾಡಿದರು.

ವಿದ್ಯುತ್‌ ಸಂಪರ್ಕ ನೀಡಿ: ಹೊರಪೇಟೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಬಡಾವಣೆಯಲ್ಲಿ ಹಲವಾರು ಮನೆಗಳು ನಿರ್ಮಾಣಗೊಂಡಿವೆ. ಆದರೂ ಸಹ ಬೆಸ್ಕಾಂರವರು ವಿದ್ಯುತ್‌ ಸಂಪರ್ಕ ನೀಡುತ್ತಿಲ್ಲ ಎಂದು ದೂರು ಸಲ್ಲಿಸಲಾಯಿತು. ಇದಕ್ಕೆ ಕೋಪಗೊಂಡ ಲೋಕಾಯುಕ್ತರು ಅಮಾಯಕರಿಗೆ ತೊಂದರೆ ನೀಡುವುದು ಸರಿಯಲ್ಲ. ಕೂಡಲೇ ನಿಯಮಾನುಸಾರ ಕೂಡಲೇ ವಿದ್ಯುತ್‌ ಸಂಪರ್ಕ ನೀಡಬೇಕೆಂದು ಸೂಚಿಸಿದರು.

ನಾನೇ ಬರುವೆ: ಪಟ್ಟಣದ ಬೆಳ್ಳಿ ಪೆಟ್ರೋಲ್‌ ಬಂಕ್‌ ಹಿಂಭಾಗ ಸುಮಾರು ಮುನ್ನೂರಕ್ಕೂ ಹೆಚ್ಚು ನಿವೇಶನವಿದೆ. ರೈತಾಪಿಗಳ ಜಮೀನಿದೆ. ಮನೆಗಳನ್ನು ಕಟ್ಟಲಾಗುತ್ತಿದೆ. ಇಲ್ಲಿ ಓಡಾಡಲು ರಸ್ತೆ ಇಲ್ಲದಂತಾಗಿದೆ. ಈ ಕುರಿತು ಪಟ್ಟಣ ಪಂಚಾಯ್ತಿ ಮತ್ತು ತಹಸೀಲ್ದಾರ್‌ರವರ ಬಳಿ ಸಾಕಷ್ಟುಮನವಿ ಮಾಡಿಕೊಂಡರೂ ಸಹ ಪ್ರಯೋಜನವಾಗಿಲ್ಲ. ಲಕ್ಷಾಂತರ ರು.ಗಳನ್ನು ವ್ಯಯಿಸಿ ನಿವೇಶನ ಪಡೆದಿರುವವರು ಪರಿತಪಿಸುವಂತಾಗಿದೆ. ಅಲ್ಲದೇ ಸಾರ್ವಜನಿಕರ ರಸ್ತೆ ಸರ್ಕಾರದ್ದಾಗಿದೆ. ಅದನ್ನೂ ಸಹ ಪಟ್ಟಣ ಪಂಚಾಯ್ತಿಯ ಅಧಿಕಾರಿಗಳು ಅಕ್ರಮವಾಗಿ ಖಾಸಗಿ ವ್ಯಕ್ತಿಗೆ ಖಾತೆ ಮಾಡಿಕೊಟ್ಟಿದ್ದಾರೆಂದು ಮೋಹನ್‌ ಕುಮಾರ್‌ ಎಂಬುವವರು ದೂರಿದರು. ಇದಕ್ಕೆ ಕೋಪಗೊಂಡ ಎಸ್ಪಿ ಪಟ್ಟಣ ಪಂಚಾಯ್ತಿಯ ಅಧಿಕಾರಿಗಳಿಗೆ ಸಮಸ್ಯೆಯನ್ನು ಇನ್ನು 15 ದಿನಗಳೊಳಗೆ ಬಗೆಹರಿಸಬೇಕು. ತಪ್ಪಿದಲ್ಲಿ ತಾವೇ ಖುದ್ದಾಗಿ ಆಗಮಿಸಿ ಸಮಸ್ಯೆಯನ್ನು ಪರಿಹರಿಸುವುದಾಗಿ ಎಚ್ಚರಿಸಿದರು.

ಪಟ್ಟಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಜನತೆಯ ತೆರಿಗೆ ಹಣದಿಂದ ವೇತನ ಪಡೆಯುತ್ತಿರುವ ಸರ್ಕಾರಿ ಅಧಿಕಾರಿಗಳು ಗುಣಾತ್ಮಕ ಸೇವೆ ನೀಡಬೇಕಿದೆ. ಸಮಸ್ಯೆಗಳನ್ನು ಹೊತ್ತು ತರುವ ಜನಸಾಮಾನ್ಯರಿಗೆ ಸಬೂಬು ಹೇಳುವುದು ನಿಲ್ಲಬೇಕು. ಅರ್ಜಿಗಳನ್ನು ಪೆಂಡಿಂಗ್‌ ಇಡದೇ ಸಕಾಲದಲ್ಲಿ ವಿಲೇವಾರಿ ಮಾಡುವತ್ತ ಅಧಿಕಾರಿಗಳು ಚಿತ್ತಹರಿಸಬೇಕು. ಸರ್ಕಾರದ ಯೋಜನೆಗಳು ಜನತೆಗೆ ತಲುಪಿದರೆ ಯೋಜನೆಯ ಆಶಯ ಫಲಪ್ರದವಾಗುತ್ತದೆ ಎಂದರು.

ನರೇಗಾ ಯೋಜನೆ ಸಂಬಂಧಿಸಿದಂತೆ ವಿವರವನ್ನು ಕೂಡಲೇ ಲೋಕಾಯುಕ್ತಕ್ಕೆ ಪಿಡಿಓಗಳು ನೀಡುವಂತೆ ತಿಳಿಸಿದ್ದರೂ ವಿಳಂಬವಾಗುತ್ತಿದೆ. ಈ ಬಗ್ಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ತ್ವರಿತವಾಗಿ ನರೇಗಾ ಸಂಬಂಧಿತ ಮಾಹಿತಿಯನ್ನು ನೀಡಬೇಕು ಎಂದು ತಾಕೀತು ಮಾಡಿದರು. ಕಂದಾಯ ಇಲಾಖೆಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿ ಬರುತ್ತಿದ್ದು ಅಗತ್ಯ ಕ್ರಮವಹಿಸಿ ತಾಲೂಕು ಕಚೇರಿ ಸಿಬ್ಬಂದಿ ಕಾರ್ಯೋನ್ಮುಖರಾಗುವಂತೆ ಸೂಚನೆ ನೀಡಿದರು.

ಪೊಲೀಸ್‌ ಇಲಾಖೆಗೆ 3, ಕಂದಾಯ ಇಲಾಖೆಯ 7, ಪಟ್ಟಣ ಪಂಚಾಯತಿಯ 4, ತಾಲೂಕು ಪಂಚಾಯಿತಿಯ 4, ಬೆಸ್ಕಾಂಗೆ ಸಂಬಂಧಿಸಿದ 2 ಅರ್ಜಿಗಳು ಸಲ್ಲಿಕೆಯಾದವು.

ಸಭೆಯಲ್ಲಿ ಲೋಕಾಯುಕ್ತ ಡಿವೈಎಸ್‌ಪಿಗಳಾದ ಮಂಜುನಾಥ್‌, ಹರೀಶ್‌, ಇನ್ಸ್‌ಪೆಕ್ಟರ್‌ ಸತ್ಯನಾರಾಯಣ, ನರೇಗಾ ಎ.ಡಿ. ಸುಭಾಶ್ಚಂದ್ರ, ಶಿರಸ್ತೇದಾರ್‌ ಸುನಿಲ್‌ಕುಮಾರ್‌, ಕೃಷಿ ಅಧಿಕಾರಿ ಪೂಜಾ, ತೋಟಗಾರಿಕೆ ಸಹಾಯಕ ನಿರ್ದೇಶಕ ಆಂಜನೇಯ ರೆಡ್ಡಿ, ವಲಯ ಅರಣ್ಯಾಧಿಕಾರಿ ಲಿಂಗರಾಜಪ್ಪ, ಅರಣ್ಯ ರಕ್ಷಕ ನಂದೀಶ್‌, ಸಿಡಿಪಿಓ ಅರುಣ್‌ ಮತ್ತಿತರ ಅಧಿಕಾರಿಗಳು ಹಾಜರಿದ್ದರು.