ಕಾಗವಾಡ(ಜ.23): ಚಾಲಕನ ನಿಯಂತ್ರಣ ತಪ್ಪಿ ರೈಲ್ವೆ ಮೇಲ್ಸೇತುವೆ ಮೇಲಿಂದ ಲಾರಿ ಉರುಳಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಉಗಾರ ಖುರ್ದನಲ್ಲಿ ಸಂಭವಿಸಿದೆ.

ರಾಮದುರ್ಗ ತಾಲೂಕಿನ ವಜಲಾಪುರ ಗ್ರಾಮದ ಲಾರಿ ಚಾಲಕ ಮೆಹಬೂಬ ಬಾದಷಹಾ ಮುಲ್ಲಾ (28) ಹಾಗೂ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಹಳ್ಳದೂರು ಗ್ರಾಮದ, ಲಾರಿ ಕ್ಲೀನರ್‌ ಮುಸ್ತಫಾ ಜನಾಫ ಕುರಿ (20) ಮೃತಪಟ್ಟವರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬುಧವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. 14 ಚಕ್ರದ ಬೃಹತ್‌ ಗಾತ್ರದ ಲಾರಿ ಸುಣ್ಣದ ಕಲ್ಲು ಹೇರಿಕೊಂಡು ರಾಜಸ್ತಾನದಿಂದ ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪಟ್ಟಣಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಬೆಳಗಿನ ಗಾಢ ನಿದ್ರೆಯ ಮಂಪರಿನಲ್ಲಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಉಗಾರ ರೈಲು ಸೇತುವೆ ಸುಮಾರು 60 ಅಡಿ ಎತ್ತರವಿದ್ದು, ಈ ಸೇತುವೆ ಮೇಲಿಂದ ಲಾರಿ ಉರುಳಿ ಕೆಳಗೆ ಬಿದ್ದಿರುವುದರಿಂದ ಚಾಲಕ ಹಾಗೂ ಕ್ಲೀನರ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ನೇರವಾಗಿ ರೈಲು ಹಳಿಯ ಒಂದು ಭಾಗದ ಮೇಲೆ ಬಿದ್ದಿರುವುದರಿಂದ ರೈಲು ಸಂಚಾರಕ್ಕೆ ಸ್ವಲ್ಪ ಅಡಚಣೆ ಉಂಟಾಯಿತು. ಈ ಕುರಿತು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.